ಹೆದ್ದಾರಿಯಲ್ಲಿ ಚರಂಡಿ ಇಲ್ಲದೆ ಫುಟ್‌ಪಾತ್ ಕಾಮಗಾರಿ..!

| Published : Nov 22 2024, 01:18 AM IST

ಹೆದ್ದಾರಿಯಲ್ಲಿ ಚರಂಡಿ ಇಲ್ಲದೆ ಫುಟ್‌ಪಾತ್ ಕಾಮಗಾರಿ..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರದೊಳಗೆ ಹಾದುಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಮತ್ತು ಫುಟ್‌ಪಾತ್ ಕಾಮಗಾರಿ ನಡೆಸುತ್ತಿದ್ದು, ಚರಂಡಿಯನ್ನೇ ನಿರ್ಮಿಸದೆ ಫುಟ್‌ಪಾತ್ ಕಾಮಗಾರಿ ನಡೆಸುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಿವ್ಯಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದೊಳಗೆ ಹಾದುಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಮತ್ತು ಫುಟ್‌ಪಾತ್ ಕಾಮಗಾರಿ ನಡೆಸುತ್ತಿದ್ದು, ಚರಂಡಿಯನ್ನೇ ನಿರ್ಮಿಸದೆ ಫುಟ್‌ಪಾತ್ ಕಾಮಗಾರಿ ನಡೆಸುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಿವ್ಯಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿ ಮಳೆ ನೀರು ಹೆದ್ದಾರಿ ರಸ್ತೆಯಲ್ಲೇ ನಿಲುಗಡೆಯಾಗುವುದು ನಿಶ್ಚಿತವಾಗಿದೆ. ರಸ್ತೆಯಲ್ಲಿ ಬಿದ್ದ ಮಳೆ ನೀರು ಹರಿದುಹೋಗುವುದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದಿರುವುದರಿಂದ ಮಳೆ ಬಿದ್ದಾಗ ರಸ್ತೆ ಕೆರೆಯಂತಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ಸುಮಾರು ೩೩ ಕೋಟಿ ರು. ವೆಚ್ಚದಲ್ಲಿ ಉಮ್ಮಡಹಳ್ಳಿ ಗೇಟ್‌ನಿಂದ ಕಿರಗಂದೂರು ಗೇಟ್‌ವರೆಗೆ ಹೆದ್ದಾರಿ ರಸ್ತೆ ಹಾಗೂ ಫುಟ್‌ಪಾತ್ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ನಿಯಮಾನುಸಾರ ರಸ್ತೆ ಪಕ್ಕ ಚರಂಡಿಯನ್ನು ನಿರ್ಮಿಸಿ ಫುಟ್‌ಪಾತ್ ಕಾಮಗಾರಿ ನಡೆಸಬೇಕಿತ್ತು. ಆದರೆ, ಚರಂಡಿಯನ್ನೇ ನಿರ್ಮಿಸದೆ ಸುಮಾರು ೬ ಕಿ.ಮೀ. ದೂರದವರೆಗೆ ರಸ್ತೆ-ಫುಟ್‌ಪಾತ್ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಆದರೂ ಈ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ದನಿಯನ್ನೇ ಎತ್ತದಿರುವುದು ಸೋಜಿಗದ ಸಂಗತಿಯಾಗಿದೆ.

ನೀರು ಹರಿದುಹೋಗಲು ಜಾಗವೇ ಇಲ್ಲ:

ಈ ಹಿಂದೆ ಮಳೆ ಬಿದ್ದಾಗಲೆಲ್ಲಾ ರಸ್ತೆಯಲ್ಲೇ ನೀರು ನಿಲ್ಲುವುದು ಸರ್ವೇ ಸಾಮಾನ್ಯವಾಗಿತ್ತು. ಮುಂದೆ ರಸ್ತೆ ಮತ್ತು ಫುಟ್‌ಪಾತ್ ಕಾಮಗಾರಿ ನಡೆಸುವ ಸಮಯದಲ್ಲಿ ಚರಂಡಿ ನಿರ್ಮಾಣವಾಗಿ ಮಳೆ ನೀರು ಹರಿದುಹೋಗುವುದಕ್ಕೆ ವ್ಯವಸ್ಥೆ ಮಾಡಬಹುದೆಂದು ಸಾರ್ವಜನಿಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ ಚರಂಡಿಯನ್ನೇ ನಿರ್ಮಿಸದೆ ಕಾಮಗಾರಿ ಮುಂದುವರೆಸಲಾಗುತ್ತಿದೆ. ಹಾಗಾದರೆ ಮಳೆಗಾಲದಲ್ಲಿ ನೀರು ಹರಿದುಹೋಗುವುದಕ್ಕೆ ಜಾಗವೆಲ್ಲಿದೆ ಎನ್ನುವುದು ಪ್ರಶ್ನೆಯಾಗಿದೆ.

ಈಗಾಗಲೇ ಹೆದ್ದಾರಿ ರಸ್ತೆಯ ಕಲ್ಲಹಳ್ಳಿ, ಮಹಾವೀರ ಸರ್ಕಲ್ ಸಮೀಪ, ಮೈಷುಗರ್ ವೃತ್ತದ ಬಳಿ, ಪೂರ್ವ ಪೊಲೀಸ್ ಠಾಣೆ ಎದುರು ಸೇರಿದಂತೆ ಹಲವೆಡೆಗಳಲ್ಲಿ ಮಳೆ ಬಿದ್ದಾಗಲೆಲ್ಲಾ ರಸ್ತೆಯಲ್ಲಿ ನೀರು ನಿಲ್ಲುವುದು ಸರ್ವೇ ಸಾಮಾನ್ಯವಾಗಿದೆ. ಮಳೆ ನೀರು ನಿಲ್ಲುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ಕಂಡಿದ್ದರೂ ಚರಂಡಿ ನಿರ್ಮಿಸಿ ಫುಟ್‌ಪಾತ್ ಕಾಮಗಾರಿ ನಡೆಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹೇಳುವ ಧ್ವನಿಯನ್ನೇ ಜನಪ್ರತಿನಿಧಿಗಳು, ಅಧಿಕಾರಿಗಳು ಕಳೆದುಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಫುಟ್‌ಪಾತ್ ಕಾಮಗಾರಿಯಲ್ಲಿ ಸಮಾನಾಂತರವಿಲ್ಲ:

ಫುಟ್‌ಪಾತ್ ನಿರ್ಮಾಣ ಕಾಮಗಾರಿಯಲ್ಲೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಾನಾಂತರ ಕಾಯ್ದುಕೊಳ್ಳದೆ ಅಡ್ಡಾದಿಡ್ಡಿಯಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಫುಟ್‌ಪಾತ್ ಹಾದುಹೋದಂತೆಲ್ಲಾ ಕಿರಿದಾಗುತ್ತಿದೆ. ಕೆಲವೆಡೆ ಎಂಟು ಅಡಿ, ನಾಲ್ಕು ಅಡಿ, ನಗರದಿಂದ ಹೊರಗೆ ಮೂರು ಅಡಿ ಫುಟ್‌ಪಾತ್ ನಿರ್ಮಾಣ ಮಾಡುತ್ತಿರುವುದನ್ನು ಕಾಣಬಹುದು. ಇದು ನಗರದ ಸೌಂದರ್ಯಕ್ಕೆ ಧಕ್ಕೆ ಉಂಟುಮಾಡಲಿದೆ. ಇದನ್ನೂ ಕೂಡ ಪ್ರಶ್ನಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫುಟ್‌ಪಾತ್ ಕೂಡ ನಗರದೊಳಗೆ ಏಕಮುಖವಾಗಿಲ್ಲ. ಎಸ್.ಡಿ.ಜಯರಾಂ ವೃತ್ತ (ನಂದಾ ವೃತ್ತ) ದಿಂದ ಮುನಿಸಿಪಲ್ ಕಾಲೇಜುವರೆಗೆ ಒಂದು ರೀತಿಯಲ್ಲಿದ್ದರೆ, ಅಲ್ಲಿಂದ ಮುಂದಕ್ಕೆ ಅಲ್ಲಲ್ಲಿ ತುಂಡು ತುಂಡಾದಂತೆ ಕಂಡುಬರುತ್ತಿದೆ. ನಂದಾ ವೃತ್ತದಿಂದ ಮೈಷುಗರ್ ವೃತ್ತದವರೆಗೆ ಬೇರೆ ಮಾದರಿಯಲ್ಲಿದೆ. ಅಲ್ಲಿಂದ ಮೈಷುಗರ್ ಹೈಸ್ಕೂಲ್‌ವರೆಗೆ ಒಂದು ರೀತಿ ಇದ್ದರೆ ಅಲ್ಲಿಂದ ಮುಂದಕ್ಕೆ ಫುಟ್‌ಪಾತ್ ಮೂರರಿಂದ ನಾಲ್ಕು ಅಡಿಗೆ ಬಂದು ನಿಲ್ಲುತ್ತಿದೆ.

ನಗರದೊಳಗೆ ಕಾಮಗಾರಿ ನಡೆಯುವ ಸಮಯದಲ್ಲಿ ಹೆದ್ದಾರಿ ರಸ್ತೆಯ ಎರಡೂ ಬದಿಯ ಫುಟ್‌ಪಾತ್‌ಗಳನ್ನು ಏಕಮುಖವಾಗಿರುವಂತೆ ಮಾಡಿ ಅದಕ್ಕೆ ಪೂರಕವಾಗಿ ಚರಂಡಿಯನ್ನು ನಿರ್ಮಿಸಬೇಕಿತ್ತು. ಫುಟ್‌ಪಾತ್‌ನ್ನೂ ಸಮನಾಂತರಗೊಳಿಸದೆ, ಚರಂಡಿಯನ್ನೂ ನಿರ್ಮಿಸದೆ ಮನಸೋಇಚ್ಛೆ ಕಾಮಗಾರಿ ನಡೆಸುತ್ತಿದ್ದರೂ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ.

ಯುದ್ಧ ಕಾಲೇ ಶಸ್ತ್ರಾಭ್ಯಾಸ:

ಅಭಿವೃದ್ಧಿ ಕಾಮಗಾರಿಗಳು ಯಾವತ್ತಿಗೂ ದೂರದೃಷ್ಟಿಯಿಂದ ಕೂಡಿರಬೇಕು. ಆದರೆ, ಮಳೆಗಾಲದಲ್ಲಿ ಹೆದ್ದಾರಿ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಆಗುವ ಸಮಸ್ಯೆ ಗೊತ್ತಿದ್ದರೂ ಆ ಸಮಸ್ಯೆಯನ್ನು ಕಾಮಗಾರಿ ನಡೆಯುವ ಸಮಯದಲ್ಲೇ ಪರಿಹರಿಸಿಕೊಳ್ಳುವುದಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಸಮಸ್ಯೆ ಧುತ್ತೆಂದು ಎದುರಾದಾಗ ಶಸ್ತ್ರಾಭ್ಯಾಸಕ್ಕೆ ಸಜ್ಜಾಗಿ ನಿಲ್ಲುವಂತಹ ಅಧಿಕಾರಿ ವರ್ಗದವರಿಂದಾಗಿಯೇ ಸಮಸ್ಯೆಗಳು ಸದಾಕಾಲ ಜೀವಂತವಾಗಿ ಉಳಿಯುವಂತಾಗಿದೆ.

ಸಣ್ಣ ಮಳೆಗೂ ಮಹಾವೀರ ವೃತ್ತದ ರಸ್ತೆ ಕೆರೆಯಂತಾಗುವುದು ಸರ್ವೇ ಸಾಮಾನ್ಯವಾಗಿದೆ. ದಶಕದ ಆ ಸಮಸ್ಯೆಗೆ ಇದುವರೆಗೂ ಮುಕ್ತಿ ಸಿಗದಂತಾಗಿದೆ. ಈಗ ೩೩ ಕೋಟಿ ರು. ವೆಚ್ಚದಲ್ಲಿ ರಸ್ತೆ- ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಖುಷಿಯ ವಿಚಾರವಾದರೂ ಚರಂಡಿ ಇಲ್ಲದೆ ನಡೆಯುತ್ತಿರುವ ಕಾಮಗಾರಿ ಬಗ್ಗೆ ಜನರಲ್ಲಿ ಅಸಹನೆಯೂ ಇದೆ. ಇಂತಹ ಅವೈಜ್ಞಾನಿಕ ಕಾಮಗಾರಿಗಳಿಂದ ಮುಂದೆ ಎದುರಾಗುವ ಸಮಸ್ಯೆಗಳು, ಸಂಭವಿಸಬಹುದಾದ ಅನಾಹುತಗಳಿಗೆ ಹೊಣೆ ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿದೆ.ಮರದ ಬೇರನ್ನು ತೆರವುಗೊಳಿಸಿಲ್ಲ:

ನಗರದ ಸ್ವರ್ಣಸಂದ್ರ ಬಡಾವಣೆ ಸಮೀಪವಿರುವ ಪೆಟ್ರೋಲ್ ಬಂಕ್ ಎದುರು ಹಾಗೂ ಹೆದ್ದಾರಿ ರಸ್ತೆಯಿಂದ ವಿವೇಕಾನಂದ ರಸ್ತೆಗೆ ಸಂಪರ್ಕ ಕಲ್ಪಿಸುವ ತಿರುವಿನಲ್ಲಿ ಮರದ ಬೇರು ರಸ್ತೆವರೆಗೂ ಬಂದಿದ್ದರೂ ಅದನ್ನು ತೆರವುಗೊಳಿಸದಿರುವುದರಿಂದ ನಿತ್ಯ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಆ ಬೇರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಜನರು ಮನವಿ ಮಾಡಿದ್ದರೂ ಇದುವರೆಗೂ ಅದನ್ನು ತೆರವುಗೊಳಿಸುವ ಪ್ರಯತ್ನಗಳು ನಡೆದಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.ಪತ್ರ ಬರೆದಿರುವೆ

ಹೆದ್ದಾರಿ ಪ್ರಾಧಿಕಾರದವರು ಚರಂಡಿ ಇಲ್ಲದೆ ರಸ್ತೆ ಮತ್ತು ಫುಟ್‌ಪಾತ್ ಕಾಮಗಾರಿ ನಡೆಸುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಮಳೆ ಬಿದ್ದ ಸಮಯದಲ್ಲಿ ನೀರು ಹರಿದುಹೋಗುವುದಕ್ಕೆ ಸ್ಥಳಾವಕಾಶವೇ ಇಲ್ಲದಂತಾಗಿದ್ದು, ನೀರು ರಸ್ತೆಯಲ್ಲೇ ನಿಲ್ಲುವುದು ನಿಶ್ಚಿತವಾಗಿದೆ. ಅದಕ್ಕಾಗಿ ಚರಂಡಿಯನ್ನು ನಿರ್ಮಿಸಿ ಫುಟ್‌ಪಾತ್ ಕಾಮಗಾರಿ ನಡೆಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ.

-ಎಂ.ಸಿ.ಪ್ರಕಾಶ್ (ನಾಗೇಶ್), ಅಧ್ಯಕ್ಷರು, ನಗರಸಭೆ

ಅಧಿಕಾರಿಗಳೊಂದಿಗೆ ಮಾತನಾಡುವೆ

ಹೆದ್ದಾರಿ ರಸ್ತೆಯಲ್ಲಿ ಚರಂಡಿಯನ್ನು ನಿರ್ಮಿಸದೆ ರಸ್ತೆ-ಫುಟ್‌ಪಾತ್ ಕಾಮಗಾರಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ರೀತಿ ಕಾಮಗಾರಿ ನಡೆಸುವುದು ಸರಿಯಲ್ಲ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ