ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಗಟ್ಟಲು ಅರಿವು ಮುಖ್ಯ. ಈ ನಿಟ್ಟಿನಲ್ಲಿ ತಂದೆ-ತಾಯಿ ಹಾಗೂ ಗುರುಗಳು ಹೇಳಿದ ಮಾತುಗಳನ್ನು ವಿದ್ಯಾರ್ಥಿಗಳು ಆಲಿಸಿ ಉತ್ತಮ ಸಂಸ್ಕಾರ ಬೆಳೆಸಿಕೊಂಡು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸದೃಢ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ದುಶ್ಚಟಗಳಿಗೆ ದಾಸರಾಗದೆ ಜಾಗೃತಗೊಳ್ಳಬೇಕಿದೆ ಎಂದು ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ, ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಕರೆ ನೀಡಿದರು.

ತಾಲೂಕಿನ ಬಳ್ಳೆಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಹದಿಹರೆಯದ ಪ್ರೌಢ ಶಾಲಾ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಸದೃಢ ಸಮಾಜಕ್ಕಾಗಿ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಡಾ.ವೀರೇಂದ್ರ ಹೆಗ್ಗಡೆಯವರು ವಿದ್ಯಾರ್ಥಿಗಳು ಹಾಗೂ ಸಮಾಜವನ್ನು ತಿದ್ದುವ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದರು.

ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಗಟ್ಟಲು ಅರಿವು ಮುಖ್ಯ. ಈ ನಿಟ್ಟಿನಲ್ಲಿ ತಂದೆ-ತಾಯಿ ಹಾಗೂ ಗುರುಗಳು ಹೇಳಿದ ಮಾತುಗಳನ್ನು ವಿದ್ಯಾರ್ಥಿಗಳು ಆಲಿಸಿ ಉತ್ತಮ ಸಂಸ್ಕಾರ ಬೆಳೆಸಿಕೊಂಡು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಎಂ.ಕೆ.ಹರಿಚರಣ ತಿಲಕ್ ಮಾತನಾಡಿ, ದೇಶವನ್ನು ನಾಶ ಮಾಡಲು ಯಾವ ಮದ್ದು ಗುಂಡು ಬೇಕಾಗಿಲ್ಲ, ದುಶ್ಚಟಗಳೇ ಸಾಕು. ಇದರಿಂದ ಅಕಾಲಿಕ ಮರಣ, ಅಪಘಾತ, ಆಸ್ತಿ ನಾಶ ಮತ್ತು ಆರೋಗ್ಯ ಹಾನಿ ಗ್ಯಾರಂಟಿ ಎಂದು ಎಚ್ಚರಿಸಿದರು.

ದುಶ್ಚಟಗಳನ್ನು ಮಟ್ಟ ಹಾಕಬೇಕಿಜ್ಜ ಸರ್ಕಾರಗಳು ಪರೋಕ್ಷವಾಗಿ ನೆರವು ನೀಡುತ್ತಿವೆ. ಅಲ್ಲದೇ, ಪ್ರತಿ ಹಳ್ಳಿ-ಹಳ್ಳಿಯಲ್ಲೂ ಮದ್ಯದ ಅಂಗಡಿಗಳು ತೆರೆದುಕೊಳ್ಳುತ್ತಿವೆ. ಇದನ್ನು ತಡೆಗಟ್ಟಲು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ದುಶ್ಚಟಗಳ ವಿರುದ್ಧ ಪ್ರತಿಜ್ಞಾ ಬೋಧನೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಗಿರೀಶ್, ಸಂಸ್ಥೆ ಮೇಲ್ವಿಚಾರಕಿ ಲಕ್ಷ್ಮಿ, ಶಿಕ್ಷಕ ಅಣ್ಣಪ್ಪ, ಶಿವಮೂರ್ತಿ, ಪ್ರೀತಿ ಜಿ. ಎಂ, ಶಿವಮೂರ್ತಿ, ಸೇವಾ ಪ್ರತಿನಿಧಿ ಅರಿಣಿ, ಮಕ್ಕಳ ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.