ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪುಸ್ತಕ ಸಂಸ್ಕೃತಿ, ಪುಸ್ತಕ ಪ್ರೇಮ, ಪುಸ್ತಕ ಓದುವವರ ಸಂಖ್ಯೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಓದಲು ಕೊಟ್ಟು ಅದರ ಬಗ್ಗೆ ವಿದ್ಯಾರ್ಥಿಗಳು ಭಾಷಣ ಮಾಡುವ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಪುಸ್ತಕ ಪ್ರೇಮ ಬೆಳೆಸುವ ಅಪರೂಪದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಫೆ.೨೫ ರಂದು ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸಮೀಪದ ಮೆಣಸಗೆರೆಯಲ್ಲಿ ಆಯೋಜನೆಗೊಂಡಿದೆ.ಗ್ರಂಥಾಲಯದಲ್ಲಿ ಧೂಳು ಹಿಡಿಯುತ್ತಿರುವ ಪುಸ್ತಕಗಳನ್ನೆಲ್ಲಾ ಒಂದೆಡೆ ಇಟ್ಟು ಅವುಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡುವುದು. ಕನಿಷ್ಠ ೧೦ ರಿಂದ ೩೦ ಪುಟದ ಸಣ್ಣ ಪುಸ್ತಕಗಳನ್ನು ಆಯ್ದುಕೊಂಡು ಒಂದು ತಿಂಗಳು ಅದನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನಂತರ ತಾವು ಆರಿಸಿದ ಪುಸ್ತಕ ಕುರಿತು ಮಕ್ಕಳು ಮಾತನಾಡುವುದು ‘ನನ್ನ ಪ್ರೀತಿಯ ಪುಸ್ತಕ’ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಇಂತಹದೊಂದು ಪರಿಕಲ್ಪನೆಯನ್ನು ಹುಟ್ಟು ಹಾಕಿದವರು ಪಾವಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿರುವ ಮೂಲತಃ ಮೆಣಸಗೆರೆ ಗ್ರಾಮದವರೇ ಆದ ಎಂ.ಆಲೂರಯ್ಯ. ಅದನ್ನು ತಮ್ಮೂರಿನ ಶಾಲೆಯಲ್ಲಿ ನಡೆಸಲು ನಿರ್ಧರಿಸಿದರು. ಇದಕ್ಕೆ ಭಾರತಿ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಡಿ.ಸೋಮು, ಮುಖ್ಯ ಶಿಕ್ಷಕಿ ಎಂ.ಎಸ್.ಮಮತಾ ಹಾಗೂ ಇತರ ಶಿಕ್ಷಕರು ಕೈಜೋಡಿಸಿದರು.ಮೆಣಸಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೮೬ ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಗ್ರಂಥಾಲಯದಲ್ಲಿದ್ದ ನೂರಾರು ಪುಸ್ತಕಗಳನ್ನು ಮೇಜಿನ ಮೇಲಿಟ್ಟು ವಿದ್ಯಾರ್ಥಿಗಳಿಗೆ ತಮಗಿಷ್ಟವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಲಾಯಿತು. ಆಗ ೬೪ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಪುಸ್ತಕಗಳನ್ನು ಆಯ್ದುಕೊಂಡರು. ರಾಮಾಯಣ, ಮಹಾಭಾರತ, ನಾಯಿ ಬಾಲ, ಗಾಯನ, ಕತೆ ಪುಸ್ತಕ ಸೇರಿದಂತೆ ಕೇವಲ ೧೦ ರಿಂದ ೩೦ ಪುಟಗಳಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಆರಿಸಿಕೊಂಡರು.
ಹೀಗೆ ಪುಸ್ತಕಗಳನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಪುಸ್ತಕ ಓದುವುದಕ್ಕೆ ಮತ್ತು ಅರ್ಥೈಸಿಕೊಳ್ಳುವುದಕ್ಕೆ ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳು ಯಾವ ರೀತಿ ತಯಾರಾಗಿರಬಹುದೆಂಬ ಬಗ್ಗೆ ಪರೀಕ್ಷಿಸಲು ಶಾಲೆಯಲ್ಲೇ ರಿಹರ್ಸಲ್ ನಡೆಸಿದರು. ಆಗ ಪುಸ್ತಕ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳು ನೆಚ್ಚಿನ ಪುಸ್ತಕದ ಬಗ್ಗೆ ಮಾತನಾಡುವುದನ್ನು ಕಂಡು ಕಾರ್ಯಕ್ರಮ ಆಯೋಜಕರು ಖುಷಿಯಾದರು.ಯಾವುದೋ ಒಂದು ಸಣ್ಣ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಈ ಪ್ರಯೋಗ ವಿಭಿನ್ನತೆಯಿಂದ ಕೂಡಿದೆ. ಪುಸ್ತಕ ಸಂಸ್ಕೃತಿ ದೂರವಾಗುತ್ತಿದೆ ಎಂದು ದೂರುವವರ ನಡುವೆ ಮಕ್ಕಳಲ್ಲಿ ಪುಸ್ತಕ ಪ್ರೇಮವನ್ನು ಹೇಗೆ ಬೆಳೆಸಬಹುದು ಎನ್ನುವುದಕ್ಕೆ ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಲ್ಲಿ ಹಾಗೂ ಕಾಲೇಜು ಹಂತದಲ್ಲಿ ನಡೆದಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೇಮವನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗುತ್ತದೆ.ಪುಸ್ತಕಗಳನ್ನು ಓದುವುದಕ್ಕೆ ಯಾರೂ ಪ್ರೇರೇಪಿಸುತ್ತಿಲ್ಲ
ಉತ್ತಮವಾದ ಪುಸ್ತಕಗಳನ್ನು ಓದುವುದಕ್ಕೆ ಮಕ್ಕಳನ್ನು ಪ್ರೇರೇಪಿಸದಿರುವುದು ನಮ್ಮಲ್ಲಿರುವ ಪ್ರಮುಖ ದೋಷವಾಗಿದೆ. ಶಾಲಾ ಹಂತದಲ್ಲೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಶಿಕ್ಷಣದ ಪಠ್ಯಗಳ ಜೊತೆಗೆ ಒಳ್ಳೆಯ ಪುಸ್ತಕಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮ ನಡೆಸುವ ಮೂಲಕ ಮಕ್ಕಳನ್ನು ಮತ್ತೆ ಪುಸ್ತಕದ ಕಡೆಗೆ ಆಕರ್ಷಿತರನ್ನಾಗಿ ಮಾಡಬೇಕು. ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಯಾರೂ ಆಸಕ್ತಿಯನ್ನು ತೋರದಿರುವುದರಿಂದಲೇ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುವುದಕ್ಕೆ ಕಾರಣವಾಗಿದೆ.ಫೆ.೨೫ರಂದು ನನ್ನ ಪ್ರೀತಿಯ ಪುಸ್ತಕ ಭಾಷಣ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಮಂಡ್ಯಮದ್ದೂರು ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಫೆ.೨೫ರಂದು ನನ್ನ ಪ್ರೀತಿಯ ಪುಸ್ತಕ -ಭಾಷಣ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಭಾರತೀ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ ತಿಳಿಸಿದರು.
ಬೆಳಗ್ಗೆ ೧೦.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಎಂ.ಎಸ್.ಮಮತಾ ವಹಿಸುವರು. ಉದ್ಘಾಟನೆಯನ್ನು ಬಿ.ಎಸ್.ಬೋರೇಗೌಡ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಎಂ.ಮಾಯಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎಂ.ಟಿ.ಮಹೇಶ್ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಪಾವಗಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕ ಎಂ.ಆಲೂರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. ತೀರ್ಪುಗಾರರಾಗಿ ಸಿಆರ್‌ಪಿ ಕೆ.ಬೋರಯ್ಯ, ಸಹ ಶಿಕ್ಷಕಿ ವಿ.ಎ.ಶ್ವೇತಾ, ಸಹ ಶಿಕ್ಷಕ ವಿನಾಯಕ ಕಾಳಗಿ ಭಾಗವಹಿಸಲಿದ್ದು, ಸಹ ಶಿಕ್ಷಕರಾದ ಎಚ್.ಪಿ.ಅರ್ಪಿತಾ, ನಂದಿನಿ, ಬಿ.ವಿದ್ಯಾಶ್ರೀ ಭಾಗವಹಿಸುವರು.
ಗೋಷ್ಠಿಯಲ್ಲಿ ಎಂ.ಆಲೂರಯ್ಯ, ಡಿ.ಸೋಮು, ಚಂದ್ರಶೇಖರ್ ಇತರರು ಭಾಗವಹಿಸುವರು.