ರಾಜ್ಯದ ಮಹತ್ವಕಾಂಕ್ಷಿ ಯೋಜನೆಯಾದ ಸುರಂಗ ರಸ್ತೆ ನಿರ್ಮಾಣ : ಸದ್ಯಕ್ಕೆ ಉತ್ತರ-ದಕ್ಷಿಣಕ್ಕೆ ನಿರ್ಮಾಣ

| Published : Dec 21 2024, 01:19 AM IST / Updated: Dec 21 2024, 07:47 AM IST

ರಾಜ್ಯದ ಮಹತ್ವಕಾಂಕ್ಷಿ ಯೋಜನೆಯಾದ ಸುರಂಗ ರಸ್ತೆ ನಿರ್ಮಾಣ : ಸದ್ಯಕ್ಕೆ ಉತ್ತರ-ದಕ್ಷಿಣಕ್ಕೆ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಮಹತ್ವಕಾಂಕ್ಷಿ ಯೋಜನೆಯಾದ ಸುರಂಗ ರಸ್ತೆ ನಿರ್ಮಾಣದ ಎರಡು ಕಾರಿಡಾರ್‌ಗಳ ಪೈಕಿ ಸದ್ಯಕ್ಕೆ ನಗರದ ಉತ್ತರ-ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ ಕಾರಿಡಾರ್‌ ಅನುಷ್ಠಾನಕ್ಕೆ ಮಾತ್ರ ಸಾಲ ಪಡೆಯಲು ತೀರ್ಮಾನಿಸಲಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜ್ಯದ ಮಹತ್ವಕಾಂಕ್ಷಿ ಯೋಜನೆಯಾದ ಸುರಂಗ ರಸ್ತೆ ನಿರ್ಮಾಣದ ಎರಡು ಕಾರಿಡಾರ್‌ಗಳ ಪೈಕಿ ಸದ್ಯಕ್ಕೆ ನಗರದ ಉತ್ತರ-ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ ಕಾರಿಡಾರ್‌ ಅನುಷ್ಠಾನಕ್ಕೆ ಮಾತ್ರ ಸಾಲ ಪಡೆಯಲು ತೀರ್ಮಾನಿಸಲಾಗಿದೆ.

‘ಬೆಂಗಳೂರು ಟ್ವಿನ್‌ ಟನಲ್‌ ಪ್ರಾಜೆಕ್ಟ್‌’ ಅಡಿಯಲ್ಲಿ ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಸಂಪರ್ಕಿಸುವ ಎರಡೂ ಸುರಂಗ ಯೋಜನೆಗಳಿಗೆ ಸಾಲ ಪಡೆಯುವುದಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳು ಒಟ್ಟಿಗೆ 19 ಸಾವಿರ ಕೋಟಿ ರು. ಸಾಲ ಪಡೆಯಲು ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಮೊದಲ ಹಂತದಲ್ಲಿ ಉತ್ತರ-ದಕ್ಷಿಣ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕಷ್ಟೇ ನಿರ್ಧರಿಸಿದೆ. ಹೀಗಾಗಿ, ಕಳೆದ ಡಿ.6 ರಂದು ಬಿಬಿಎಂಪಿಯು ಟನಲ್‌ ಯೋಜನೆಗೆ 19 ಸಾವಿರ ಕೋಟಿ ರು. ಸಾಲ ನೀಡುವುದಕ್ಕೆ ಸಿದ್ಧವಿರುವ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳಿಂದ ‘ಬಂಡವಾಳ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸುವಿಕೆ’ಗೆ ಆಹ್ವಾನಿಸಲಾಗಿದ್ದ ‘ಆರ್ಥಿಕ ಬಿಡ್‌’ ಕೈ ಬಿಟ್ಟಿದ್ದು, ಹೊಸದಾಗಿ ಕೇವಲ ಉತ್ತರ-ದಕ್ಷಿಣ ಕಾರಿಡಾರ್‌ ಅನುಷ್ಠಾನಕ್ಕೆ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳಿಂದ ‘ಬಂಡವಾಳ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸುವಿಕೆ’ಯ ‘ಆರ್ಥಿಕ ಬಿಡ್‌’ ಆಹ್ವಾನಿಸಲಾಗಿದೆ.

ಎರಡೂ ಕಾರಿಡಾರ್‌ ಯೋಜನೆಯ ಅನುಷ್ಠಾನಕ್ಕೆ ಒಟ್ಟು 19 ಸಾವಿರ ಕೋಟಿ ರು. ಅಗತ್ಯವಿದೆ ಎಂದು ಅಂದಾಜಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಇದೀಗ ಉತ್ತರ-ದಕ್ಷಿಣ ಕಾರಿಡಾರ್‌ ಯೋಜನೆಯ ಭೂಸ್ವಾಧೀನ ಮತ್ತು ಕಾಮಗಾರಿಯ ವೆಚ್ಚಕ್ಕೆ 8 ಸಾವಿರ ಕೋಟಿ ರು. ಸಾಲ ಪಡೆಯುವುದಕ್ಕೆ ನಿರ್ಧರಿಸಿದ್ದಾರೆ.

ಪೂರ್ವ-ಪಶ್ಚಿಮ ಕಾರಿಡಾರ್‌ಗೆ ಡಿಪಿಆರ್‌ ಸಿದ್ದವಿಲ್ಲ:

ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸಿಲ್ಕ್‌ಬೋರ್ಡ್‌ವರೆಗಿನ (ಉತ್ತರ-ದಕ್ಷಿಣ ಕಾರಿಡಾರ್‌) 18.5 ಕಿ.ಮೀ. ಮಾರ್ಗದಲ್ಲಿ ಡಬ್ಬಲ್‌ ಡೆಕ್ಕರ್‌ ಸುರಂಗ ನಿರ್ಮಿಸಲು ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಆದರೆ, ಕೆಆರ್‌ಪುರದಿಂದ ಮೈಸೂರು ರಸ್ತೆ ವರೆಗಿನ (ಪೂರ್ವ-ಪಶ್ಚಿಮ) ಕಾರಿಡಾರ್‌ಗೆ ಸಂಬಂಧಿಸಿದಂತೆ ಕಾರ್ಯಸಾಧ್ಯತಾ ವರದಿ ಮಾತ್ರ ಲಭ್ಯವಿದೆ. ಆದರೆ, ಯೋಜನೆಯ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ದಪಡಿಸಿಲ್ಲ. ಹೀಗಾಗಿ, ಕೇವಲ ಉತ್ತರ-ದಕ್ಷಿಣ ಕಾರಿಡಾರ್‌ಗೆ ಸಂಬಂಧಿಸಿದಂತೆ ಮಾತ್ರ ಸಾಲ ಪಡೆಯಲು ಮುಂದಾಗಿದ್ದಾರೆ.

ಜ.3 ರೊಳಗೆ ಬಡ್ಡಿ ಪ್ರಮಾಣ ತಿಳಿಸಿ: ಬಿಬಿಎಂಪಿ ಸೂಚನೆ

ಹೊಸ ಆರ್ಥಿಕ ಬಿಡ್‌ ಆಹ್ವಾನದ ಪ್ರಕಾರ ಟನಲ್‌ ರಸ್ತೆ ನಿರ್ಮಾಣಕ್ಕೆ ಬಂಡವಾಳ ಹೂಡಿಕೆ ಮಾಡುವುದಕ್ಕೆ ಆಸಕ್ತಿ ಹೊಂದಿರುವ ಹಣಕಾಸು ಸಂಸ್ಥೆಗಳು ತಾವು ಒದಗಿಸಬಹುದಾ ಸಾಲ ಮೊತ್ತ ಹಾಗೂ ಬಡ್ಡಿ ದರ ತಿಳಿಸುವುದಕ್ಕೆ ಜ.3 ಕೊನೆಯ ದಿನವಾಗಿದೆ. ಈ ಬಗ್ಗೆ ಗೊಂದಲ ನಿವಾರಣೆಗೆ ಡಿ.13 ರಿಂದ 20ವರೆಗೆ ಅವಕಾಶ ನೀಡಲಾಗಿದ್ದು, ಡಿ.23ಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತದೆ. ಜ.3ರ ಸಂಜೆ 4 ಗಂಟೆಯ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಾಲ ಒದಗಿಸುವ ಮೊತ್ತ ಹಾಗೂ ಬಡ್ಡಿದರದ ಬಿಡ್‌ ಸಲ್ಲಿಕೆ ಮಾಡಬೇಕೆಂದು ಸೂಚಿಸಲಾಗಿದೆ.

ಡಿಪಿಆರ್‌ ಪ್ರತಿಗೆ ₹25 ಸಾವಿರ ನಿಗದಿ:

ಟನಲ್‌ ಯೋಜನೆಯ ಸಾಲ ನೀಡುವುದಕ್ಕೆ ಮುಂದೆ ಬರುವ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಸುರಂಗ ರಸ್ತೆಗಳ ಕುರಿತು ಬಿಬಿಎಂಪಿಯು ಸಿದ್ದಪಡಿಸಿರುವ ಡಿಪಿಆರ್‌ ಪ್ರತಿ ಪಡೆಯುವುದಕ್ಕೆ ₹25 ಸಾವಿರ ದರ ನಿಗದಿಪಡಿಸಿದೆ. ಬಿಬಿಎಂಪಿಯ ಮುಖ್ಯ ಆಯುಕ್ತರ ಹೆಸರಿನಲ್ಲಿ 25 ಸಾವಿರ ರು. ಮೊತ್ತದ ಡಿಡಿ ಸಲ್ಲಿಕೆ ಮಾಡಿದರೆ ಮಾತ್ರ ಡಿಪಿಆರ್‌ ಪ್ರತಿ ಲಭ್ಯವಾಗಲಿದೆ.

ಉತ್ತರ-ದಕ್ಷಿಣ ಕಾರಿಡಾರ್‌ ವಿವರ

ಎಸ್ಟೀಮ್‌ ಮಾಲ್‌ ಜಂಕ್ಷನ್‌ನಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ 18.5 ಕಿ.ಮೀ. ಉದ್ದದ 3-ಲೈನ್‌ ಟ್ವಿನ್‌ ಟನಲ್‌ ರಸ್ತೆ ನಿರ್ಮಿಸಲಾಗುತ್ತದೆ. ಸುರಂಗ ರಸ್ತೆಯು ಹೆಬ್ಬಾಳದ ಎಸ್ಟೀಮ್‌ ಮಾಲ್‌ ಜಂಕ್ಷನ್‌ನಿಂದ ಮೇಖ್ರಿ ವೃತ್ತ, ಅರಮನೆ ರಸ್ತೆ, ಗಾಲ್ಪ್‌ ಕೋರ್ಸ್‌ ರಸ್ತೆ, ಚಾಲುಕ್ಯ ವೃತ್ತ, ಕಬ್ಬನ್‌ಪಾರ್ಕ್, ಕೆ.ಎಚ್‌.ರಸ್ತೆ, ಲಾಲ್‌ಬಾಗ್‌, ಜಯನಗರ ಮಾರ್ಗವಾಗಿ ಸಿಲ್ಕ್‌ಬೋರ್ಡ್‌ ಜಂಕ್ಷನ್‌ಗೆ ಹಾದು ಹೋಗಲಿದೆ. ಸುರಂಗ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್‌ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ರಸ್ತೆಯಲ್ಲಿ ವಾಹನಗಳು ಗಂಟೆಗೆ 35-40 ಕಿ.ಮೀ. ವೇಗದಲ್ಲಿ ಸಂಚರಿಸ ಬಹುದಾಗಿದೆ.

ಹೆಬ್ಬಾಳದ ಎಸ್ಟೀಮ್‌ ಮಾಲ್‌ ಜಂಕ್ಷನ್‌, ಅರಮನೆ ರಸ್ತೆ, ಗಾಲ್ಫ್‌ಕೋರ್ಸ್‌ ರಸ್ತೆ, ಜಯನಗರದ ಅಶೋಕ ಪಿಲ್ಲರ್‌ ಹಾಗೂ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಸುರಂಗ ರಸ್ತೆಯ ಪ್ರವೇಶ, ನಿರ್ಗಮನ ದ್ವಾರಗಳಿರಲಿವೆ. ತಳ ಭಾಗದ ಮೂರು ಪಥ ಮತ್ತು ಮೇಲ್ಭಾಗದ ಎರಡು ಪಥದ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಪೂರ್ವ- ಪಶ್ಚಿಮ ಕಾರಿಡಾರ್‌ ವಿವರ

ಪೂರ್ವ-ಪಶ್ಚಿಮ ಕಾರಿಡಾರ್‌ ಕೆ.ಆರ್‌. ಪುರದಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಇದು ಕೆಆರ್‌ಪುರದಿಂದ ಹಳೆ ಮದ್ರಾಸ್‌ ರಸ್ತೆ, ಹಲಸೂರು, ರಿಚ್ಮಂಡ್‌ ವೃತ್ತ, ಹಡ್ಸನ್‌ ಸರ್ಕಲ್‌, ಪುರಭವನ, ಗಾಳಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆವರೆಗೆ 30 ಕಿ.ಮೀ. ಉದ್ದದ ಸುರಂಗ ನಿರ್ಮಿಸಲು ಉದ್ದೇಶಿಸಲಾಗಿದೆ.