ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಿ: ಸುಮಲತಾ ಅಂಬರೀಷ್

| Published : Oct 10 2023, 01:00 AM IST

ಸಾರಾಂಶ

ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಿ: ಸುಮಲತಾ ಅಂಬರೀಷ್
- ನಾಗೇಗೌಡನದೊಡ್ಡಿಯಲ್ಲಿ ನಡೆದ ಗ್ರಾಮದ ಅಭಿವೃದ್ಧಿ ಕುರಿತ ಸಭೆಯಲ್ಲಿ ಸಂಸದೆ ಸೂಚನೆ ಕನ್ನಡಪ್ರಭ ವಾರ್ತೆ ಮಳವಳ್ಳಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸಂಸದೆ ಸುಮಾಲತಾ ಅಂಬರೀಷ್ ಸೂಚನೆ ನೀಡಿದರು. ತಾಲೂಕಿನ 20023-24 ನೇ ಸಾಲಿನ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿಕೊಂಡಿರುವ ನಾಗೇಗೌಡನದೊಡ್ಡಿಯಲ್ಲಿ ಗ್ರಾಮದ ಅಭಿವೃದ್ಧಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮಗ ಅಭಿವೃದ್ಧಿಗೆ ಸರ್ಕಾರದಿಂದ ನೀಡುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮವಹಿಸದಿದ್ದರೆ ಹಳ್ಳಿಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಯೋಜನೆಗಳನ್ನು ಹಳ್ಳಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಆಧ್ಯತೆ ನೀಡಿ ಮೂಲ ಸೌಲಭ್ಯ ನೀಡಬೇಕೆಂದು ಸೂಚನೆ ನೀಡಿದರು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರ, ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರು ಕೈಜೊಡಿಸುವುದರ ಮೂಲಕ ಸಲಹೆ ಸೂಚನೆ ನೀಡಬೇಕು, ಕಳಪೆ ಕಾಮಗಾರಿಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು. ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಲಿಖಿತವಾಗಿ ಅಥವಾ ಮೌಖಿಕವಾಗಿ ತಮ್ಮ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರ ಹತ್ತಿರವೇ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು. ಜನರ ನೆಮ್ಮದಿಗೆ ಗ್ಯಾರಂಟಿಗಳು ಸಹಕಾರಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತ ಕೊಟ್ಟಿದ ವಿಶೇಷ ನೆನೆಪಿನಲ್ಲಿ ತಾಲೂಕಿನ ಕೆಲವು ಗ್ರಾಮಗಳನ್ನು ಆದರ್ಶ ಗ್ರಾಮವನ್ನಾಗಿ ಮಾಡುತ್ತಿದ್ದಾರೆ. ಇಂದು ಫೋಟೋದಲ್ಲಿ ಕಾಣಿಸಿಕೊಂಡಿರುವವರು ವೋಟು ಹಾಕಿಸುವಾಗ ಕಂಡಿರಲ್ಲಿಲ್ಲ. ಮುಂದಿನ ದಿನಗಳಲ್ಲಾದರೂ ನಿಮಗೆ ವೋಟು ಹಾಕಿಸಲಿ ಎಂದು ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದರು. ಬರದ ನಡುವೆಯೂ ನೆಮ್ಮದಿಯಿಂದ ಬದುಕಲು ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳು ಸಹಕಾರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು. ಬರದ ನಡುವೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲದಿದ್ದರೂ ಜನ ಜಾನುವಾರುಗಳಿಗೆ ಸಮರ್ಪಕ ನೀರು ಸಿಗುವಂತೆ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಶ್ರಮಿಸಲಾಗುವುದು. ಹನಿ ನೀರಾವರಿ ಯೋಜನೆ ಸಧ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದರು. ತಾಲೂಕಿನ ಬಾಚನಹಳ್ಳಿ ಹಾಗೂ ನೆಟ್ಕಲ್ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ರಾವಣಿ ಗ್ರಾಮದ ಮಹಾಲಿಂಗೇಶ್ವರಸ್ವಾಮಿ ದೇವಸ್ಥಾನದ ಬಳಿ ಸಂಸದರ ನಿಧಿ ಯೋಜನೆಯಡಿ ಅಶ್ವಥಕಟ್ಟೆ ಮತ್ತು ರಸ್ತೆ ಅಭಿವೃದ್ಧಿ ಹಾಗೂ ಪಟ್ಟಣದ ಕೊಳ್ಳೇಗಾಲ-ಮದ್ದೂರು ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ತಹಸೀಲ್ದಾರ್ ಕೆ.ಎನ್ ಲೊಕೇಶ್, ತಾಪಂ ಇಒ ಮಮತ, ಗ್ರಾಪಂ ಅಧ್ಯಕ್ಷೆ ಚಲುವಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಶಿವಲಿಂಗೇಗೌಡ, ಪುರಸಭೆ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ಬಂಕ್ ಮಹದೇವು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. 9ಕೆಎಂಎನ್ ಡಿ16 ಮಳವಳ್ಳಿ ತಾಲೂಕಿನ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿರುವ ನಾಗೇಗೌಡನದೊಡ್ಡಿಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಸಭೆ ನಡೆಸಿದರು.