ಆರೋಪಿ ಕಿಮ್ಸ್‌ಗೆ, ಸಂತ್ರಸ್ತೆಗಿಲ್ಲ ಚಿಕಿತ್ಸೆ

| Published : Jan 18 2024, 02:03 AM IST

ಸಾರಾಂಶ

ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆ ಕೊಡಿಸದೇ ಆರೋಪಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆ ಕೊಡಿಸದೇ ಆರೋಪಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಲಾಡ್ಜ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ನಡೆದಿದ್ದ ದೌರ್ಜನ್ಯ, ಸಾಮೂಹಿಕ ಅತ್ಯಾಚಾರದಿಂದ ಜರ್ಜರಿತ ಸಂತ್ರಸ್ತ ಮಹಿಳೆಗೆ ಗುಣಮಟ್ಟದ ಚಿಕಿತ್ಸೆ ಅವಶ್ಯಕತೆ ಇತ್ತು. ಆದರೆ, ಸರಿಯಾದ ಚಿಕಿತ್ಸೆ ನೀಡದೇ ಹಾವೇರಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಬಿಜೆಪಿ ಮುಖಂಡರು ನಿರಂತರವಾಗಿ ಭೇಟಿ ನೀಡಿ ಸಾಂತ್ವನ ಹೇಳಲು ಶುರುಮಾಡುತ್ತಿದ್ದಂತೆ ಆಕೆಯನ್ನು ಶಿರಸಿಗೆ ಸ್ಥಳಾಂತರಿಸಿದರು. ಹೀಗಾಗಿ ಆಕೆಗೆ ಸರಿಯಾದ ಚಿಕಿತ್ಸೆ ಕೊಡಿಸಿಲ್ಲ ಎಂಬ ದೂರು ಕೇಳಿಬರುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಪರಿಮಳಾ ಜೈನ್, ಸಂತ್ರಸ್ತೆ ಸಾಂತ್ವನ ಕೇಂದ್ರಕ್ಕೆ ಬಂದಾಗ ಮಾನಸಿಕವಾಗಿ ಕುಸಿದಿದ್ದಳು. ದೈಹಿಕವಾಗಿ ಹಲ್ಲೆ ನಡೆದಿದ್ದರಿಂದ ಮಾನಸಿಕವಾಗಿ, ದೈಹಿಕವಾಗಿ ವಿಶ್ರಾಂತಿ ಬೇಕಾಗಿತ್ತು. ಬೆನ್ನ ಮೇಲೆ ತುಂಬಾ ಹೊಡೆದಿದ್ದರಿಂದ ಸಂತ್ರಸ್ತೆಗೆ ಚಿಕಿತ್ಸೆ ಅವಶ್ಯವಿತ್ತು. ಸಂತ್ರಸ್ತೆಗೆ ವಿಶ್ರಾಂತಿ ಬೇಕಾಗಿದೆ, ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ಹೇಳಿದರೂ ತನಿಖೆಗೆ ಎಂದು ಹೇಳಿ ಪೊಲೀಸರು ಭಾನುವಾರ ಕರೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.

ಸಂತ್ರಸ್ತೆಗೆ ಕೌನ್ಸೆಲಿಂಗ್ ಮಾಡುವುದು ಬಾಕಿಯಿತ್ತು. ಜಿಲ್ಲಾಸ್ಪತ್ರೆಯಲ್ಲಿ ನಾವು ಚಿಕಿತ್ಸೆ ಕೊಡಿಸಲು ಮುಂದಾಗಿದ್ದೆವು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಒಂದು ವಾರಗಳ ಕಾಲ ಸಂತ್ರಸ್ತೆಗೆ ಕೌನ್ಸೆಲಿಂಗ್ ಅವಶ್ಯಕತೆ ಇದೆ ಎಂದು ವಿವರಿಸಿದ್ದಾರೆ.

ಆರೋಪಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಆರೋಪಿ ಮಹ್ಮದಸೈಪ್ ಅಬ್ದುಲಸತ್ತಾನ ಸಾವಿಕೇರಿ ಎಂಬಾತ ಅಕ್ಕಿಆಲೂರಿನ ಬಾಳೂರ ರಸ್ತೆಯಲ್ಲಿ ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಪಿ.ಆರ್. ಹಾವನೂರ್, ಪ್ರಕರಣದ ಆರೋಪಿ ಮಹ್ಮದಸೈಪ್‌ನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ಬೈಕ್ ಅಪಘಾತ ಮಾಡಿಕೊಂಡು ಕಾಲಿಗೆ ಪೆಟ್ಟಾಗಿದೆ ಎಂದು ಮಾಹಿತಿ ನೀಡಿ ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ. ಎಲುಬು ಕೀಲು ತಜ್ಞರಿಂದ ಆರೋಪಿಗೆ ಚಿಕಿತ್ಸೆ ನೀಡಲಾಗಿತ್ತು. ಕಾಲಿಗೆ ಪ್ರಾಕ್ಚರ್ ಆಗಿದೆ. ಕಾಲು ಬಾವು ಬಂದಿತ್ತು, ಬಾವು ಹೆಚ್ಚಾದ ಕಾರಣ ಹುಬ್ಬಳ್ಳಿ ಕಿಮ್ಸ್‌ಗೆ ರೆಫರ್ ಮಾಡಲಾಗಿದೆ ಎಂದಿದ್ದಾರೆ.