ಸಾರಾಂಶ
ತುಮಕೂರು: ಸ್ಥಳೀಯ ರೈತರ ಸಮಸ್ಯೆಗಳನ್ನು ಇಲಾಖೆ ಹಂತದಲ್ಲಿ, ಅಗತ್ಯವಿದ್ದರೆ ಕಾನೂನು ಮಟ್ಟದಲ್ಲಿ ಬಗೆಹರಿಸುವ ಆಶಯದಿಂದ ಹಾಗೂ ಪ್ರಕೃತಿ, ಅರಣ್ಯ, ಜೀವವೈವಿದ್ಯತೆ ಸಂರಕ್ಷಣೆಯ ಆಶಯದೊಂದಿಗೆ ಕರ್ನಾಟಕ ಪ್ರಗತಿಪರ ರೈತರ ಹಾಗೂ ದೇವರಾಯನದುರ್ಗ ಜೀವವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಿತಿಯ ಮಹಾಪೋಷಕರೂ ಆದ ಹೈಕೋರ್ಟ್ ವಕೀಲ ರಮೇಶ್ ನಾಯಕ್ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೈತರು ಈ ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ರೈತರ ಸಮಸ್ಯೆ ವಿಚಾರ ಬಂದಾಗ ಅದರಿಂದ ವಿಮುಖರಾಗುವವರೇ ಹೆಚ್ಚು. ರೈತರ ಕಷ್ಟ, ತೊಂದರೆಗಳು ರೈತರಾಗಿ ಅನುಭವಿಸಿದವರಿಗೇ ಗೊತ್ತು, ಅನೇಕ ಕಾರಣಗಳಿಂದಾಗಿ ರೈತರು ತಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಇಂತಹ ರೈತರ ಧ್ವನಿಯಾಗಿ ಸಮಿತಿ ಕಾರ್ಯನಿರ್ವಹಿಸುತ್ತದೆ ಎಂದರು.ಒಂದು ಟ್ರಾನ್ಸ್ ಫಾರ್ಮರ್ ಕೆಟ್ಟರೆ ಅದನ್ನು ಬದಲಾಯಿಸಲು, ಕೃಷಿ ಜಮೀನಿನ ಪೌತಿ ಖಾತೆ ಮಾಡಿಸುವುದು, ರಸಗೊಬ್ಬರ, ಬಿತ್ತನೆ ಬೀಜ ಪಡೆಯುವಂತಹ ವಿಚಾರಗಳವರೆಗೂ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಈಗಿನ ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗ ರೈತರ ಇಂತಹ ತೊಂದರೆಗಳನ್ನು ವಿಳಂಬವಿಲ್ಲದೆ ಸಕಾಲದಲಿ ನಿವಾರಿಸುವ ಕಾಳಜಿ ತೋರಿಸುವುದಿಲ್ಲ, ಶಾಸಕರೇ ಶಿಫಾರಸ್ಸು ಮಾಡಬೇಕಾಗುತ್ತದೆ. ಕೆಲವೆಡೆ ಶಾಸಕರ ಶಿಫಾರಸ್ಸಿಗೂ ಕಿಮ್ಮತ್ತು ಸಿಗುವುದಿಲ್ಲ. ಸಾಮಾನ್ಯ ರೈತ ಈ ಮಟ್ಟದ ಪ್ರಭಾವ ಬೀರಿ ತನ್ನ ಕೆಲಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಅನೇಕ ಪ್ರಕರಣಗಳನ್ನು ತಮ್ಮ ಸಮಿತಿ ಬಗೆಹರಿಸಿ ರೈತರಿಗೆ ನೆರವಾಗುತ್ತಾ ಬಂದಿದೆ. ಇದರ ಯಶಸ್ಸಿನ ಫಲವಾಗಿ ಸಮಿತಿಯನ್ನು ರೈತರ ಸಂಘಟನೆಯಾಗಿ ವಿಸ್ತರಿಸಲು ರೈತರು ಚರ್ಚೆ ಮಾಡಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.ತುಮಕೂರು ತಾಲೂಕಿನಲ್ಲಿ ಈಗಾಗಲೇ ತನ್ನ ಕಾರ್ಯಚಟುವಟಿಕೆ ಆರಂಭಿಸಿರುವ ಕರ್ನಾಟಕ ಪ್ರಗತಿಪರ ರೈತರ ಹಾಗೂ ದೇವರಾಯನದುರ್ಗ ಜೀವ ವೈವಿಧ್ಯತೆಗಳ ಹಿತರಕ್ಷಣಾ ಸಮಿತಿಯನ್ನು ಬರುವ ಅಕ್ಟೋಬರ್ ೨೭ರಂದು ತುಮಕೂರಿನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಉದ್ಘಾಟಿಸುವರು. ಲೇಖಕಿ, ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮತ್ತಿತರರು ಭಾಗವಹಿಸುವರು ಎಂದು ರಮೇಶ್ ನಾಯಕ್ ಹೇಳಿದರು.ಸಮಿತಿ ಅಧ್ಯಕ್ಷ ಬಂಡಿಹಳ್ಳಿ ಬಿ.ಆರ್.ರವೀಂದ್ರ, ಮೈದಾಳ ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿ, ಉಪನ್ಯಾಸಕ ರಾಜಕುಮಾರ್, ಸದಸ್ಯರಾದ ಪುಟ್ಟರಾಜು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.