ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕಾಂಗ್ರೆಸ್ ಬೆಂಬಲಿತ ನಿರ್ದೇಶಕನಾಗಿ ಪಿಎಲ್‌ಡಿ ಬ್ಯಾಂಕಿಗೆ ಆಯ್ಕೆಯಾಗಿದ್ದ ಚಿಕ್ಕರಂಗಯ್ಯ ಮತ್ತು ನಾಗರಾಜಯ್ಯ ಪಕ್ಷವನ್ನು ಕೊನೆ ಹಂತದಲ್ಲಿ ಕಾಂಗ್ರೆಸ್ ಸಖ್ಯ ತೊರೆದು ಎನ್‌ಡಿಎ ಬೆಂಬಲಿತ ದಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸದಲ್ಲಿ ಪ್ರಪಥಮ ಬಾರಿಗೆ ದಲಿತರೊಬ್ಬರು ಅಧ್ಯಕ್ಷರಾಗಿ ಹೊಸ ಇತಿಹಾಸ ಬರೆದರು.ಕೊರಟಗೆರೆ ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿಗೆ ಮುಂದಿನ ೫ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಚಿಕ್ಕರಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ನಾಗರಾಜಯ್ಯ ಆಯ್ಕೆಯಾದರು.ಕೊರಟಗೆರೆ ಪಿಎಲ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಬಿಡಲು ಆ ಪಕ್ಷದ ಮುಖಂಡರೇ ಪ್ರಮುಖ ಕಾರಣ. ದಲಿತ ಅನ್ನುವ ಕಾರಣಕ್ಕೆ ನನ್ನ ಹೆಸರನ್ನೇ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟರು. ಮುಖಂಡರ ಒಳಸಂಚಿಗೆ ಬೇಸತ್ತು ನಾನು ಪಕ್ಷ ಬಿಡಲು ತೀರ್ಮಾನ ಮಾಡಿದೆ. ದಲಿತನಾದ ನನಗೆ ಅಧ್ಯಕ್ಷ ಸ್ಥಾನದ ಅವಕಾಶ ಮಾಡಿಕೊಟ್ಟ ಎನ್‌ಡಿಎ ಒಕ್ಕೂಟಕ್ಕೆ ನಾನು ಚಿರಾಋಣಿ ಆಗಿರುತ್ತೇನೆ ಎಂದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚಿಕ್ಕರಂಗಯ್ಯ ಮತ್ತು ಕೆ.ಎಲ್.ಆನಂದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಂಚಮ್ಮ ಮತ್ತು ನಾಗರಾಜಯ್ಯ ಸ್ಪರ್ಧಿಸಿದ್ದರು. ೧೪ಜನ ನಿರ್ದೇಶಕರು ಮತ್ತು ೧ನಾಮ ನಿರ್ದೇಶಕ ಸೇರಿ ೧೫ಜನ ನಿರ್ದೇಶಕರಲ್ಲಿ ತಲಾ ೮ಮತ ಪಡೆದು ಅಧ್ಯಕ್ಷರಾಗಿ ಚಿಕ್ಕರಂಗಯ್ಯ ಮತ್ತು ಉಪಾಧ್ಯಕ್ಷರಾಗಿ ನಾಗರಾಜಯ್ಯ ಆಯ್ಕೆಯಾದರು. ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ ಮಾತನಾಡಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೆಎಂಎಫ್ ನಿರ್ದೇಶಕನ ಗೆಲುವಿನ ನಂತರ ಈಗ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷರ ಎನ್‌ಡಿಎ ಗೆಲುವು ಕೊರಟಗೆರೆ ಕ್ಷೇತ್ರದಲ್ಲಿ ಮುಂದೆ ನಡೆಯುವ ಜಿಪಂ ತಾಪಂ ಚುನಾವಣೆಯ ದಿಕ್ಸೂಚಿ. ಕಾಂಗ್ರೆಸ್ ತುಮಕೂರು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದಲ್ಲಿ ಹಂತ ಹಂತವಾಗಿ ಕ್ಷೀಣಿಸಲಿದೆ ಎಂದು ತಿಳಿಸಿದರು.ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್ ಮಾತನಾಡಿ ಪಿಎಲ್‌ಡಿ ಬ್ಯಾಂಕ್ ರೈತರ ಪರವಾಗಿ ಕೆಲಸ ಮಾಡುವಂತಹ ಗ್ರಾಮೀಣ ಸಂಸ್ಥೆ. ಚುನಾವಣೆಯಲ್ಲಿ ಪಾಲ್ಗೊಂಡ ಎಲ್ಲಾ ನಿರ್ದೇಶಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಮರಳಿ ಗೂಡಿಗೆ ಬಂದಿರುವ ಹಾಲಿ ಅಧ್ಯಕ್ಷ ಚಿಕ್ಕರಂಗಯ್ಯ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಡಿ.ನಾಗರಾಜಯ್ಯರಿಗೆ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರಾದ ಪುಟ್ಟನರಸಪ್ಪ, ಎಲ್.ರಾಜಣ್ಣ, ಲಕ್ಷ್ಮೀನಾರಾಯಣ್, ವೆಂಕಟೇಗೌಡ, ರವೀಂದ್ರ, ಕಾಮಣ್ಣ, ರಂಗಯ್ಯ, ಕೆಂಚಮ್ಮ, ನೇತ್ರಾವತಿ, ಪ್ರಕಾಶ್, ಸರ್ಕಾರದ ನಿರ್ದೇಶಕ ಲಕ್ಷ್ಮೀನಾರಾಯಣ್, ಚುನಾವಣೆ ಅಧಿಕಾರಿ ಗುರುರಾಜು, ಎಲ್.ವಿ.ಪ್ರಕಾಶ, ಕಾಮರಾಜು, ಮಾವತ್ತೂರು ಮಂಜುನಾಥ, ರಮೇಶ್, ಲಂಬುರಾಜು, ಶಿವರುದ್ರಪ್ಪ, ಸಿದ್ದಮಲ್ಲಪ್ಪ, ಮಧುಸೂಧನ್, ಸಂಜೀವಯ್ಯ, ಮರುಡಪ್ಪ, ಸಾಕಣ್ಣ, ಬಸವರಾಜು, ರಮೇಶ ಸೇರಿದಂತೆ ಇತರರು ಇದ್ದರು.