ಸಾರಾಂಶ
ರಟ್ಟೀಹಳ್ಳಿ:ನಿರಂತರ ಮಳೆಯಿಂದಾಗಿ ತಾಲೂಕಿನಾದ್ಯಂತ 200ಕ್ಕೂ ಹೆಚ್ಚು ಮನೆ ಹಾನಿಯಾಗಿದ್ದು, ಹಿಂದಿನ ಬಿಜೆಪಿ ಸರಕಾರ ನೀಡಿದ ಅನುದಾನದಂತೆ 5 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಈ ಹಿಂದೆ ಯಡಿಯೂರಪ್ಪನವರು ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಬಡ ಕುಟುಂಬಗಳಿಗೆ ಎ.ಬಿ,ಸಿ ಗ್ರೇಡ್‌ನಂತೆ ಸಂಪೂರ್ಣಮನೆ ಕಳೆದುಕೊಂಡ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಿ ಮನೆ ಕಳೆದುಕೊಂಡ ಕುಟುಂಬಗಳು ಮನೆ ಕಟ್ಟಿಕೊಳ್ಳಲು ನೆರವಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಆಡಳಿತ ಚುಕ್ಕಾಣಿ ಹಿಡಿದು ಕೇವಲ ತಮ್ಮ ಗ್ಯಾರಂಟಿಗಳಿಗೆ ಹಣ ಹೊಂದಿಸಿಕೊಳ್ಳಲು ಜನಪ್ರಿಯ ಕಾರ್ಯಕ್ರಮಗಳನ್ನು ಕೈಬಿಟ್ಟು ಮನೆ ಕಳೆದುಕೊಂಡವರಿಗೆ 5 ಲಕ್ಷದಿಂದ ಕೇವಲ ಆರು ಸಾವಿರದಿಂದ 50 ಸಾವಿರ ಮಾತ್ರ ಪರಿಹಾರ ನೀಡಲು ತೀರ್ಮಾನಿಸಿದ್ದು ಇದರಿಂದಾಗಿ ರಾಜ್ಯಾದ್ಯಂತ ಸಾವಿರಾರು ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ಹರಿಹಾಯ್ದರು.ಪ್ರಕೃತಿ ವಿಕೋಪಕ್ಕೆ ಒಳಗಾದ ಬಡ ಕುಟುಂಬಗಳಿಗೆ ಹಿಂದಿನ ಸರಕಾರದಂತೆ 5 ಲಕ್ಷ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ರೈತ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರಕಾರದ ದುರಾಡಳಿತದಿಂದಾಗಿ ರಾಜ್ಯ ದಿವಾಳಿತನಕ್ಕೆ ತಳ್ಳುತ್ತಿದ್ದಾರೆ. ಬಡವರ ರಕ್ತ ಹಿಂಡುವ ಇವರ ಆಡಳಿತ ವೈಖರಿಯಿಂದಾಗಿ ಜನ ಸಾಮಾನ್ಯರ ಅಗತ್ಯ ಬೆಲೆಗಳು ಗಗನಕ್ಕೆ ಏರುತ್ತಿದ್ದು ಜೀವನ ನಡೆಸುವುದೆ ದುಸ್ತರವಾಗಿದೆ ಎಂದು ಆರೋಪಿಸಿದರು.ಪ್ರಕೃತಿ ವಿಕೋಪದಿಂದಾಗಿ ತಾಲೂಕಿನಲ್ಲಿ 200ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ಕಾರಣ ಅಧಿಕಾರಿಗಳು ತಾರತಮ್ಯ ಮಾಡದೆ ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಆಗ್ರಹಿಸಿದರು.
ಮೃತ ಕುಟುಂಬಗಳಿಗೆ 25 ಲಕ್ಷಕ್ಕೆ ಹೆಚ್ಚುವರಿ ಮಾಡಬೇಕು, ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ಬೆಳೆಗಳು ನಾಶವಾಗುತ್ತಿವೆ. ರೈತರು ಸಂಕಷ್ಟದಲ್ಲಿದ್ದು ಕಾರಣ ಬೆಳೆ ವಿಮೆ ತುಂಬಲು ಆ. 15ರ ವರೆಗೆ ಕಾಲಾವಕಾಶ ನೀಡಲು ಸರಕಾರಕ್ಕೆ ಮನವಿ ಸಲ್ಲಿಸಿ ಎಂದು ತಹಸೀಲ್ದಾರ್‌ಗೆ ಮನವಿ ಮಾಡಿದರು.ತಹಸೀಲ್ದಾರ್ ಗುರುಬಸವರಾಜ ಮಾತನಾಡಿ ಪ್ರಕೃತಿ ವಿಕೋಪದಿಂದಾಗಿ ಮನೆ ಕಳೆದುಕೊಂಡ ಫಲಾನುಭವಿಗಳ ಆಯ್ಕೆಗಾಗಿ ತ್ರಿಮ್ಯಾನ ಕಮಿಟಿ ರಚನೆ ಮಾಡಿ ನೇರವಾಗಿ ಫಲಾನುಭವಿಗಳಿಂದ ಅಗತ್ಯ ದಾಖಲಾತಿ ಸಂಗ್ರಹಿಸುತ್ತಿದ್ದು, ಈ ಕಾರ್ಯ ಅತ್ಯಂತ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ, ಕೃಷಿ ಇಲಾಖೆ ಸಂಬಂಧಪಟ್ಟಂತೆ ಎ.ಡಿ. ಅವರ ಮುಖಾಂತರ ಎ.ಓ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೊಲಗಳಿಗೆ ಭೇಟಿ ನೀಡಿ ಪ್ರವಾಹದಿಂದ ಹಾಗೂ ಮಳೆಯಿಂದಾಗಿ ಬೆಳೆ ಹಾನಿ ಬಗ್ಗೆ ವರದಿ ನೀಡಲು ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚನೆ ನೀಡಿದ್ದು 30 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾಳಾಗಿರುವ ವರದಿ ನೀಡಿದ್ದು, ಮತ್ತೆನಾದರೂ ಉಳಿದಿದ್ದರೆ ಆದ್ಯತೆ ಮೇರೆಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಉಜನೇಪ್ಪ ಕೋಡಿಹಳ್ಳಿ, ಸುಶೀಲ ನಾಡಿಗೇರ, ಗಣೇಶ ವೆರ್ಣೇಕರ್, ಕಾವ್ಯ ಪಾಟೀಲ್, ರಾಘು ಹರವಿಶೆಟ್ಟರ, ಹನಮಂತಪ್ಪ ಗಾಜೇರ, ಬಸವರಾಜ ಆಡಿನವರ, ಸುರೇಶ ನಾಯಕ, ರವಿ ಹದಡೇರ, ಮಂಜು ತಳವಾರ, ಆನಂದಪ್ಪ ಹಾದಿಮನಿ, ರಾಜು ಬಟ್ಲಕಟ್ಟಿ, ಶ್ರೀನಿವಾಸ ಬೈರೋಜಿಯವರ, ಪ್ರಶಾಂತ ದ್ಯಾವಕ್ಕಳವರ ಇದ್ದರು.