ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮುಂದುವರಿಯುತ್ತಿದ್ದು, 7ನೇ ದಿನವಾದ ಮಂಗಳವಾರ ಚಳವಳಿ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಹೋರಾಟದ ಮೂಲಕ ಆಚರಿಸಲಾಯಿತು

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮುಂದುವರಿಯುತ್ತಿದ್ದು, 7ನೇ ದಿನವಾದ ಮಂಗಳವಾರ ಚಳವಳಿ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಹೋರಾಟದ ಮೂಲಕ ಆಚರಿಸಲಾಯಿತು.

ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ವ್ಯವಸ್ಥೆ, ಕಾನೂನು, ಬದುಕುವ ಹಕ್ಕು, ಕರ್ತವ್ಯ ಇತ್ಯಾದಿಗಳ ಬಗ್ಗೆ ಸರ್ಕಾರ ಕಾಳಜಿ ಹೊಂದಿದ್ದರೆ ಕೂಡಲೇ ರೈತರ ಫಲವತ್ತಾದ ಕೃಷಿ ಭೂಮಿ ಒತ್ತುವರಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಸಂಘದ ನಾಯಕಿ ಸುಲೋಚನಮ್ಮ, ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ರಾಂಪುರ, ಸೊಣ್ಣೆನಹಳ್ಳಿ, ನಾರನಹಳ್ಳಿ ಸುತ್ತಮುತ್ತ ಫಲವತ್ತಾದ 2,100 ಎಕರೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದದ್ದು, ಯಾವ ಕಾರಣಕ್ಕೂ ಕೆಐಎಡಿಬಿಗೆ ಒಂದಿಚು ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಅಭಿವೃದ್ಧಿಗೆ ನಾವು ವಿರೋಧಿಗಳಲ್ಲ. ಆದರೆ ಎಲ್ಲಾ ಭೂಮಿಯನ್ನು ತಾಲ್ಲೂಕಿನ ರೈತರಿಂದಲೇ ಕಸಿದುಕೊಂಡು ಇಲ್ಲಿನ ರೈತರು ಗೂಳೆ ಹೋಗುವಂತೆ ಮಾಡುವ ಸರ್ಕಾರದ ಅವೈಜ್ಞಾನಿಕ ಕ್ರಮವನ್ನು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.

ಐದು ಸಾವಿರ ಎಕರೆ ಪ್ರದೇಶದಲ್ಲಿ ಕ್ವಿನ್ಸಿಟಿ ಅಭಿವೃದ್ಧಿಗೆ ಶೇ 80ರಷ್ಟು ಕೃಷಿ ಭೂಮಿಯನ್ನು ದೊಡ್ಡಬೆಳವಂಗಲ ಹೋಬಳಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದಿಷ್ಟೇ ಸಾಲದೆಂಬಂತೆ ಈಗ ಅಡಿಕೆ, ತೆಂಗು ಇರುವ ಫಲವತ್ತಾದ 2,100 ಎಕರೆ ಭೂಮಿಯನ್ನು ಇದೇ ಹೋಬಳಿಯಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕನಿಷ್ಠ ನಿಯಮ ಪಾಲಿಸದೇ ಇಲ್ಲಿನ ಕೃಷಿ ಭೂಮಿಯನ್ನು ಉದ್ಯಮಿಗಳ ಪಾಲಾಗುವಂತೆ ಮಾಡುವ ಹುನ್ನಾರ ರೂಪಿಸಿದೆ. ಸ್ಥಳೀಯ ಜನ್ಮತಿಥಿಗಳು ರೈತರ ಭೂಮಿ ಉಳಿಸಲು ಎದೆಗಾರಿಕೆ ತೋರಬೇಕು. ಇದಕ್ಕೆ ಪೂರಕಾಗಿ ಸ್ಥಳೀಯ ರೈತರು ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗದೇ ಜವ್ರತಿನಿಧಿಗಳಿಗೆ ಬೆಂಬಲವಾಗಿ ನಿಂತು ಧರಣಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಮ್ಮ ಪೂರ್ವಜರ ಕಾಲದಿಂದಲೂ ಬೆಳೆ ಬೆಳೆಯುತ್ತ ಬಂದಿರುವ ಕೃಷಿ ಭೂಯನ್ನು ಖಾಲಿ ಭೂಮಿ ಎಂದು ಕಂದಾಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದರ ವಿರುದ್ಧ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲಾಗುವುದು. ರೈತರು ಆತಂಕ ಪಡದೆ ಒಗ್ಗಟ್ಟಿನಿಂದ ಮಾನಸಿಕವಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.

ಈ ವೇಳೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಜೆಡಿಎಸ್‌ ಮಾಜಿ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ರೈತ ಸಂಘದ ಮುಖಂಡರಾದ ಸುಲೋಚನಮ್ಮ, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಎನ್.ಪ್ರಭಾ, ಹೋರಾಟ ಸಮಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಪ್ರಾಂತ ರೈತ ಸಂಘದ ವಿಜಯ್‌ಕುಮಾರ್, ರಾಜ್ಯ ರೈತ ಸಂಘದ ಹನುಮೇಗೌಡ, ಸಿ.ಎಚ್.ರಾಮಕೃಷ್ಣಯ್ಯ, ತಿಮ್ಮೇಗೌಡ, ರಾಮೇಗೌಡ, ಡಿ.ಸಿ.ನಾಗರಾಜ್, ಸಿದ್ದಗಂಗಯ್ಯ, ಕೆಂಪೇಗೌಡ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

14ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಅನಿರ್ದಿಷ್ಟಾವಧಿ ಚಳವಳಿಯ ಸ್ಥಳದಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.