ವಿಷ್ಣುಸಮುದ್ರದ ಕಲ್ಯಾಣಿ ಸ್ವಚ್ಛಗೊಳಿಸಲು ಒತ್ತಾಯ

| Published : Jan 23 2025, 12:46 AM IST

ಸಾರಾಂಶ

ವಿಷ್ಣುಸಮುದ್ರ ಬಳಿ ಇರುವ ಕಲ್ಯಾಣಿ ನೀರು ಮಲಿನವಾಗಿದ್ದು, ಕೂಡಲೇ ಸ್ವಚ್ಛ ಮಾಡುವಂತೆ ಅಂದಲೆ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕ ಹಾಗೂ ಸಮಾಜಸೇವಕ ಆರ್‌.ಆರ್‌.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ‌‌. ಚೆನ್ನಕೇಶವ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಜನರು ಕೂಡ ಇಲ್ಲಿ ಸ್ನಾನ ಮಾಡಲು ಬರುತ್ತಾರೆ. ಆದ್ದರಿಂದ ದೇಗುಲದ ಸಮಿತಿಯವರಾಗಲಿ, ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಮತ್ತು ದೇವಸ್ಥಾನ ಧರ್ಮದರ್ಶಿಗಳು ಹಾಗೂ ಅರ್ಚಕರು ಗಮನಕ್ಕೆ ತೆಗೆದುಕೊಂಡು ಪೂಜೆ ಸಲ್ಲಿಸಿ ಶುದ್ಧೀಕರಣ ಕಾರ್ಯವನ್ನು ಆದಷ್ಟು ಬೇಗ ಮಾಡಲಿ ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಐತಿಹಾಸಿಕ ವಿಷ್ಣುಸಮುದ್ರ ಬಳಿ ಇರುವ ಕಲ್ಯಾಣಿ ನೀರು ಮಲಿನವಾಗಿದ್ದು, ಕೂಡಲೇ ಸ್ವಚ್ಛ ಮಾಡುವಂತೆ ಅಂದಲೆ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕ ಹಾಗೂ ಸಮಾಜಸೇವಕ ಆರ್‌.ಆರ್‌.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ‌‌.

ಪಟ್ಟಣದ ಬಿಕ್ಕೋಡು ರಸ್ತೆಯ ಕಲ್ಯಾಣಿಗೆ ಪೂಜೆ ಸಲ್ಲಿಸಲು ಭಕ್ತರೊಡನೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ದರ್ಶನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗೆ ಬಂದಂತ ಭಕ್ತರು ಸ್ನಾನ ಮಾಡಲು ಕಲ್ಯಾಣಿಗೆ ಬರುತ್ತಾರೆ. ಆದರೆ ಈ ಕಲ್ಯಾಣಿಯಲ್ಲಿ ಈಗಾಗಲೇ ಮೂರು ನಾಲ್ಕು ಜನರು ಈಜಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ್ದು, ಆ ನೀರನ್ನು ಹೊರಗೆ ತೆಗೆಯದೆ ಶುಚಿತ್ವ ಮಾಡದೆ ಹಾಗೆಯೇ ಬಿಟ್ಟಿದ್ದಾರೆ ಮತ್ತು ಅದನ್ನು ಅಪವಿತ್ರಗೊಳಿಸಿದ್ದಾರೆ. ಇನ್ನೊಂದೆಡೆ ನೀರು ಪಾಚಿ ಕಟ್ಟಿದ್ದು, ಸುತ್ತ ಗಿಡಗಂಟೆಗಳು ಬೆಳೆದಿದ್ದು ಭಕ್ತರು ಸ್ನಾನ ಮಾಡುವಾಗ ಜಾರಿ ಬೀಳುವ ಸಂಭವವಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮೆಣಸಿನಮ್ಮ, ದುರ್ಗಮ್ಮ ಹಾಗೂ ಕರಿಯಮ್ಮ ದೇಗುಲಗಳಿಗೆ ಗಂಗಾಭಿಷೇಕ ಮಾಡಲು ಮೂರ್ತಿಯನ್ನು ಇಲ್ಲಿಗೆ ಕರೆತೆಂದು ಪೂಜೆ ಸಲ್ಲಿಸುವ ವಾಡಿಕೆ ಇದೆ. ಅದರಂತೆ ಇಲ್ಲಿಯ ಅಪವಿತ್ರ ನೀರನ್ನೇ ಇವರು ಗಂಗಾಜಲ ಅಭಿಷೇಕಕ್ಕೆ ಬಳಸುವಂತಾಗುತ್ತದೆ. ಇನ್ನು ಚೆನ್ನಕೇಶವ ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಜನರು ಕೂಡ ಇಲ್ಲಿ ಸ್ನಾನ ಮಾಡಲು ಬರುತ್ತಾರೆ. ಆದ್ದರಿಂದ ದೇಗುಲದ ಸಮಿತಿಯವರಾಗಲಿ, ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಮತ್ತು ದೇವಸ್ಥಾನ ಧರ್ಮದರ್ಶಿಗಳು ಹಾಗೂ ಅರ್ಚಕರು ಗಮನಕ್ಕೆ ತೆಗೆದುಕೊಂಡು ಪೂಜೆ ಸಲ್ಲಿಸಿ ಶುದ್ಧೀಕರಣ ಕಾರ್ಯವನ್ನು ಆದಷ್ಟು ಬೇಗ ಮಾಡಲಿ ಎಂದು ಮನವಿ ಮಾಡಿದರು.

ಕೋವಿಪೇಟೆ ರೇಣುಕಾ ಎಲ್ಲಮ್ಮ ದೇವಸ್ಥಾನ ಧರ್ಮದರ್ಶಿ ಉಮೇಶ್ ಮಾತನಾಡಿ, ಪವಿತ್ರ ಕಲ್ಯಾಣಿಯ ಕೆರೆಯಲ್ಲಿ ಕೆಲವು ದಿನಗಳ ಹಿಂದೆ ಸ್ನಾನ ಮಾಡಲು ಈಜಾಡುವಾಗ ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿ ಸತ್ತಿದ್ದು ಆ ಶವವನ್ನು ತೆಗೆಯಲು ಎರಡು ದಿನಗಳ ಕಾಲ ಬೇಕಾಗಿತ್ತು. ಆ ನೀರು ಹೊರಗೆ ಚೆಲ್ಲದೆ ಈಗ ಅಪವಿತ್ರವಾಗಿದ್ದು ಹಾಗೂ ಕಲ್ಯಾಣಿಯ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಪರಿಸರಕ್ಕೆ ಹಾನಿಯಾಗುತ್ತಿದೆ. ಕಲ್ಯಾಣಿಯ ಸುತ್ತ ಪಾಚಿ ಕಟ್ಟಿ ಹುಲ್ಲು ಬೆಳೆದಿರುವ ಕಾರಣ ಇದನ್ನು ಶೀಘ್ರದಲ್ಲೇ ಶುದ್ಧೀಕರಣ ಮಾಡಬೇಕು. ಕಲ್ಯಾಣಿಯಲ್ಲಿ ಪ್ರತೀವರ್ಷ ಚನ್ನಕೇಶವ ಸ್ವಾಮಿ ತೆಪ್ಪೋತ್ಸವ ನಡೆಯುತ್ತದೆ. ಸಾವಿರಾರು ಭಕ್ತರು ಈ ಕಲ್ಯಾಣಿಗೆ ಸ್ನಾನ ಮಾಡಲು ಬರುತ್ತಾರೆ. ಸುತ್ತಮುತ್ತಲಿನ ಗ್ರಾಮದೇವತೆಗಳಿಗೆ ಗಂಗಾಪೂಜೆ ಅಭಿಷೇಕ ಪುಣ್ಯಾಕಾರ್ಯ ನೆರವೇರಿಸಲು ಇಲ್ಲಿಗೆ ಕರೆತರುತ್ತಾರೆ. ದೇಗುಲಕ್ಕೆ ಸಂಬಂಧಪಟ್ಟವರು ಬಂದು ಪರಿಶುದ್ಧ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅರ್ ಕೆ ಕುಮಾರಸ್ವಾಮಿ ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.