ಸಾರಾಂಶ
ಕನ್ನಡ ವಿರೋಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ಕರವೇ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಅಂಕಲಿ ಗ್ರಾಮದಲ್ಲಿ ನಾಡದ್ರೋಹಿ ಚಟುವಟಿಕೆ ಎಸಗಿದವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಇಲ್ಲಿನ ಮಿನಿವಿಧಾನ ಸೌಧ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು, ಕೂಡಲೇ ಕನ್ನಡ ವಿರೋಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದರು.
ಅಂಕಲಿ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ನಾಮಫಲಕ ಮತ್ತು ಕನ್ನಡ ಧ್ವಜವನ್ನು ಕಿತ್ತು ಹಾಕುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ. ಇದನ್ನು ಪ್ರಶ್ನಿಸಿದ ಕನ್ನಡಿಗ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಘಟಕ ಅಧ್ಯಕ್ಷ ಪ್ರಮೋದ ಕೂಗೆ, ಯುವ ಘಟಕ ಅಧ್ಯಕ್ಷ ಪ್ರದೀಪ ರಿಜಕನವರ, ವಿದ್ಯಾರ್ಥಿ ಘಟಕ ಅಧ್ಯಕ್ಷ ರಾಬಿನಸನ್ ಕೌಜಲಗಿ, ಸೌರಭ ತಳವಾರ, ಸುನೀಲ ಕರೋಶಿ, ವಿಲ್ಸನ್ ಕೌಜಲಗಿ, ಭೀಮು ಕಪಲಿ, ಅಭಿಷೇಕ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.