ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯ

| Published : Sep 29 2024, 01:34 AM IST

ಸಾರಾಂಶ

ಮಾನ್ವಿ ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ರಾಜ್ಯ ಗ್ರಾಪಂ ನೌಕರರ ಸಂಘದ 10 ನೇ ಜಿಲ್ಲಾ ಸಮ್ಮೇಳನ ಜರುಗಿತು.

ಕನ್ನಡಪ್ರಭ ವಾರ್ತೆ ಮಾನ್ವಿ

ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಕೆಲಸ ಮಾಡುತ್ತಿರುವ 65 ಸಾವಿರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು, ಕನಿಷ್ಟ ಸಂಬಳ ನಿಗದಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಖಜಾಂಚಿ ಆರ್‌.ಎಸ್‌.ಬಸವರಾಜ ಒತ್ತಾಯಿಸಿದರು.

ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ(ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ 10ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಗ್ರಾಪಂಗಳ ಮೂಲಕ ಕುಡಿಯುವ ನೀರು, ಸ್ವಚ್ಚತೆ ಕಾರ್ಯ ಸೇರಿದಂತೆ ಜನರಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ನೌಕರರನ್ನು ಸರ್ಕಾರ ಕಡೆಗಣಿಸಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬರುವ ಅ.1 ರಂದು ಕಲಬುರಗಿಯಲ್ಲಿರುವ ಗ್ರಾಮೀಣ ಆಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆಯವರ ನಿವಾಸದ ಎದುರು ಕಲ್ಯಾಣ ಕರ್ನಾಟಕ ಭಾಗದ 20 ಸಾವಿರ ಗ್ರಾಪಂ ನೌಕರರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮ್ಮೇಳನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ರ್‍ಯಾರಿ ನಡೆಸಲಾಯಿತು. ಇದೇ ವೇಳೆ ಕಾರ್ಮಿಕ ಹೋರಾಟಗಾರಾಗಿದ್ದ ಮಾರುತಿ ಮಾನ್ಪಡೆ, ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮಯಾಚುರಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವಿಸಲಾಯಿತು.

ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘದ ತಾಲೂಕಾಧ್ಯಕ್ಷ ಆಂಜನೇಯ್ಯ ನಾಯಕ ಗೋರ್ಕಲ್‌ ವಹಿಸಿದ್ದರು. ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್‌.ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಮುಖಂಡರಾದ ಎಚ್. ಶರ್ಪುದಿನ್ ಪೋತ್ನಾಳ, ಅಕ್ತರ್ ಪಾಷ, ವೀರನಗೌಡ, ವೀರೇಶ, ಸುರೇಶ, ಅಂಬಣ್ಣ ನಾಯಕ ಸೇರಿ ಜಿಲ್ಲೆ ವಿವಿಧ ತಾಲೂಕುಗಳ ಸಂಘದ ಪದಾದಿಕಾರಿಗಳು, ಸದಸ್ಯರು ಹಾಗೂ ಗ್ರಾಪಂ ನೌಕರರು ಭಾಗವಹಿಸಿದರು.