ಜಮೀನು ಕಳೆದುಕೊಂಡ ರೈತರಿಗೆ ಪಟ್ಟಾ ನೀಡಲು ಒತ್ತಾಯ

| Published : Aug 20 2024, 12:49 AM IST

ಸಾರಾಂಶ

ನಂದಿಬಂಡಿ, ದೇವಲಾಪುರ ಮತ್ತು ಡಣನಾಯಕನಕೆರೆ ರೈತರು ಸರ್ಕಾರಿ ಭೂಮಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಈಗ ಅವರ ಜಮೀನಿನ ವಿಚಾರವಾಗಿ ನೋಟಿಸ್‌ ಜಾರಿ ಮಾಡಲಾಗಿದೆ.

ಹೊಸಪೇಟೆ: ಜಮೀನು ವಿಚಾರವಾಗಿ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವಂತೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದಲ್ಲಿ ಸೋಮವಾರ ತಹಸೀಲ್ದಾರ್ ಶ್ರುತಿ ಎಂ.ಎಂ. ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ತುಂಗಭದ್ರಾ ಜಲಾಶಯ ನಿರ್ಮಾಣಕ್ಕೆ ಮನೆ ಮಠ, ಆಸ್ತಿ ಪಾಸ್ತಿಯನ್ನು ರೈತರು ಕಳೆದುಕೊಂಡಿದ್ದಾರೆ. ತಾರಿಹಳ್ಳಿ, ಬಸಾಪುರ, ಗೌರಿಪುರ, ಅನ್ವೇರಿ, ಚಿಮ್ನಹಳ್ಳಿ ಹಾಗೂ ಇನ್ನಿತರ ಹಳ್ಳಿಗಳು ಜಲಾಶಯ ನಿರ್ಮಾಣವಾದ ಬಳಿಕ ಮುಳುಗಡೆಯಾಗಿವೆ. ಜಲಾಶಯ ನಿರ್ಮಾಣ ಮಾಡಿ ಏಳು ದಶಕಗಳು ಕಳೆದರೂ ಈ ಭಾಗದ ರೈತರಿಗೆ ಸರಿಯಾಗಿ ಕುಡಿಯುವ ಮತ್ತು ಕೃಷಿ ಚಟುವಟಿಕೆಗೆ ನೀರು ದೊರೆಯುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಂದಿಬಂಡಿ, ದೇವಲಾಪುರ ಮತ್ತು ಡಣನಾಯಕನಕೆರೆ ರೈತರು ಸರ್ಕಾರಿ ಭೂಮಿಯಲ್ಲಿ ಅರ್ಧ ಎಕರೆಯಿಂದ ‌ಒಂದು ಎಕರೆ ಜಮೀನಿನಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಈಗ ಇವರ ಜಮೀನಿನ ವಿಚಾರವಾಗಿ ನೋಟಿಸ್‌ ಜಾರಿ ಮಾಡಲಾಗಿದೆ. ರೈತರ ಜಮೀನನ್ನು ಅವರ ಹೆಸರಿಗೆ ಪಟ್ಟಾ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದಿಂದ ಜಲಾಶಯಕ್ಕೆ ಜಮೀನು ಕಳೆದುಕೊಂಡವರ ತಾತನವರಿಗೆ ಅಲ್ಪ ಜಮೀನು ನೀಡಿದ್ದಾರೆ. ಈಗ ಕುಟುಂಬಗಳು ಬೆಳೆದಂತೆಲ್ಲ ಜಾಗ ಕೊರತೆ ಉಂಟಾಗಿದೆ. ಪೂರ್ಣ ಪ್ರಮಾಣದಲ್ಲಿ ಕೃಷಿಯನ್ನೇ ನೆಚ್ಚಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ರೈತರ, ಅದೇ ಜಮೀನು ಕಸಿದುಕೊಂಡರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಇರುವ ಅಲ್ಪ ಸ್ವಲ್ಪ ಭೂಮಿಯನ್ನು ಉಳುಮೆ ಮಾಡುವ ರೈತರನ್ನು ಪರಿಶೀಲನೆ ಮಾಡಿ, ಅವರ ಹೆಸರಿಗೆ ಹಕ್ಕುಪತ್ರಗಳು ಮಾಡಿಕೊಟ್ಟು, ಜೀವನ ಸಾಗಿಸುವುದಕ್ಕೆ ಅನುವು ಮಾಡಿಕೊಳ್ಳಬೇಕು. ಅಧಿಕಾರಿಗಳು ಜಾರಿ ಮಾಡಿರುವ ನೋಟಿಸ್‌ಗಳನ್ನು ಮೂರು ದಿನದ ಒಳಗಡೆ ಹಿಂಪಡೆದು ಉಳುಮೆ ಮಾಡುವ ರೈತರಿಗೆ ಪಟ್ಟಾ ನೀಡಬೇಕು. ನೋಟಿಸ್‌ ಹಿಂಪಡೆಯದೇ ಇದ್ದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.

ಮುಖಂಡರಾದ ಕೊಟ್ರೇಶ್‌, ಹುಲುಗಪ್ಪ, ಬಾನುಬೀ, ಬೀನಾ ರೂಪಾಲತಾ, ಕೆ. ರಾಧಾ, ಬಿ. ಪೂರ್ಣಿಮಾ, ಪಾರ್ವತಿ, ಲಲಿತಾ, ಗೌರಮ್ಮ ಇತರರಿದ್ದರು.