ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯ

| Published : Jul 13 2024, 01:33 AM IST

ಸಾರಾಂಶ

ರಾಜ್ಯದ ೨.೬೦ ಲಕ್ಷ ಖಾಲಿ ಹುದ್ದೆಗಳ ಹೆಚ್ಚುವರಿ ಕೆಲಸವನ್ನೂ ನಿರ್ವಹಿಸುವ ಹೊಣೆ ಹೊತ್ತು, ಸರಿ ಸುಮಾರು ಎರಡು ವರ್ಷಗಳಿಂದ ಕಾಯುತ್ತಿರುವ ಸರಕಾರಿ ನೌಕರರಿಗೆ ೭ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿದ ಸರಕಾರಿ ನೌಕರರ ಸಂಘದ ಹಾನಗಲ್ಲ ತಾಲೂಕು ಘಟಕ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.

ಹಾನಗಲ್ಲ: ರಾಜ್ಯದ ೨.೬೦ ಲಕ್ಷ ಖಾಲಿ ಹುದ್ದೆಗಳ ಹೆಚ್ಚುವರಿ ಕೆಲಸವನ್ನೂ ನಿರ್ವಹಿಸುವ ಹೊಣೆ ಹೊತ್ತು, ಸರಿ ಸುಮಾರು ಎರಡು ವರ್ಷಗಳಿಂದ ಕಾಯುತ್ತಿರುವ ಸರಕಾರಿ ನೌಕರರಿಗೆ ೭ನೇ ವೇತನ ಆಯೋಗದ ವರದಿ ಜಾರಿಗೆ ಒತ್ತಾಯಿಸಿದ ಸರಕಾರಿ ನೌಕರರ ಸಂಘದ ಹಾನಗಲ್ಲ ತಾಲೂಕು ಘಟಕ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.

ಮನವಿ ಸಲ್ಲಿಸಿ ಮಾತನಾಡಿದ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕಲ್ಲಪ್ಪ ಚಿಕ್ಕೇರಿ, ೬ನೇ ವೇತನ ಆಯೋಗದ ಅವಧಿ ೨೦೨೨ರ ಜುಲೈ ತಿಂಗಳಿಗೇ ಮುಗಿದಿದೆ. ಈಗ ಎರಡು ವರ್ಷಗಳಷ್ಟು ೭ನೇ ವೇತನ ತಡವಾಗಿರುವುದು ನೌಕರರಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ. ವೇತನ ಆಯೋಗದ ಸಮಿತಿ ವರದಿ ಸಲ್ಲಿಸಿ ೪ ತಿಂಗಳಾದರೂ ರಾಜ್ಯ ಸರಕಾರ ಅದನ್ನು ಅಂಗೀಕರಿಸಿ ನೌಕರರಿಗೆ ೭ನೇ ವೇತನ ಆಯೋಗ ಜಾರಿ ಮಾಡುತ್ತಿಲ್ಲ. ಸರಕಾರದ ವಿಳಂಬ ನೀತಿ ಸರಿ ಅಲ್ಲ. ಲೋಕಸಭಾ ಚುನಾವಣೆಗೂ ಮೊದಲೇ ಜಾರಿಯಾಗುತ್ತದೆ ಎಂಬ ನಿರೀಕ್ಷೆಯೂ ಸುಳ್ಳಾಗಿದೆ. ನೀತಿ ಸಂಹಿತೆ ನೆಪ ಹೇಳಿ ಮುಂದೂಡಿದ ರಾಜ್ಯ ಸರಕಾರ ಈಗ ಹೊಸ ರಾಗ ತೆಗೆದಿದೆ. ಈಗಲೂ ವಿಳಂಬ ನೀತಿ ತೋರುತ್ತಿರುವುದು ಸರಿ ಅಲ್ಲ. ರಾಜ್ಯ ಸಂಘಟನೆ ರಾಜ್ಯ ಮಟ್ಟದ ಹೋರಾಟಕ್ಕೆ ಸಜ್ಜಾಗಿದೆ. ಈಗ ಇಡೀ ರಾಜ್ಯದಲ್ಲಿ ಎಲ್ಲ ತಾಲೂಕುಗಳಲ್ಲಿ ಜನಪ್ರತಿನಿಧಿಗಳು ಹಾಗೂ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ೭ನೇ ವೇತನ ಆಯೋಗದ ವರದಿ ಜಾರಿಗೊಳಿಸದಿದ್ದರೆ ಈ ತಿಂಗಳಾಂತ್ಯಕ್ಕೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ. ೨೦೨೨ರ ಜುಲೈ ೧ಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಎನ್‌ಪಿಎಸ್ ನೌಕರರ ಸಂಘದ ಉಪಾಧ್ಯಕ್ಷ ಈರಪ್ಪ ಕರೆಗೊಂಡರ ಮಾತನಾಡಿ, ರಾಜ್ಯದಲ್ಲಿ ಎನ್‌ಪಿಎಸ್ ಅಡಿ ಕೆಲಸ ಮಾಡುತ್ತಿರುವ ನೌಕರರು ಆತಂಕದಲ್ಲಿದ್ದಾರೆ. ಇಳಿ ವಯಸ್ಸಿನಲ್ಲಿ ಅನ್ನಕ್ಕೆ ದಾರಿ ಇಲ್ಲದೆ ಸ್ಥಿತಿ ಸರಕಾರ ನಿರ್ಮಿಸಿದೆ. ದಶಕಗಳಿಂದ ಇದಕ್ಕಾಗಿ ಹೋರಾಟ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರಕಾರ ಎನ್‌ಪಿಎಸ್ ನೌಕರರಿಗೆ ಓಪಿಎಸ್ ಸೌಲಭ್ಯ ನೀಡಬೇಕು. ಇದು ಸರಕಾರಿ ನೌಕರರಿಗೆ ಅತ್ಯಂತ ಅವಶ್ಯ ಎಂಬುದು ವೈಜ್ಞಾನಿಕ ಸತ್ಯ. ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೆ ಶತಸಿದ್ಧ. ೭ನೇ ವೇತನ ಆಯೋಗದ ಜೊತೆಗೆ ಎನ್‌ಪಿಎಸ್ ನೌಕರರನ್ನು ಒಪಿಎಸ್ ನೌಕರರನ್ನಾಗಿ ಪರಿಗಣಿಸಬೇಕು. ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಶ್ರೀಸಾಮಾನ್ಯನಿಗೆ ತಲುಪಿಸುವಲ್ಲಿ ಕಾಳಜಿಯಿಂದ ಶ್ರಮವಹಿಸುತ್ತಿದೆ. ಸರಕಾರ ಬೇಡಿಕೆ ಈಡೇರಿಸದಿದ್ದರೆ ೬ ಲಕ್ಷ ರಾಜ್ಯ ಸರಕಾರಿ ನೌಕರರನ್ನು ಹೊಂದಿರುವ ನಮ್ಮ ಸಂಸ್ಥೆಯು ಮುಂದೇ ಯಾವುದೇ ಹೋರಾಟಕ್ಕೆ ಸಿದ್ದ ಎಂದು ತಿಳಿಸಿದರು.

ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್.ಕೆ. ದೊಡ್ಡಮನಿ, ಕೋಶಾಧ್ಯಕ್ಷ ಎನ್.ವಿ. ಅಗಸನಹಳ್ಳಿ ಮಾತನಾಡಿದರು. ರಾಜ್ಯ ಪರಿಷತ್ ಸದಸ್ಯ ಗುರುನಾಥ ಗವಾಣಿಕರ, ಗೌರವಾಧ್ಯಕ್ಷ ಪಿ.ಆರ್. ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಚಲ್ಲಾಳ, ಬಿ.ಎಸ್. ಕರೆಣ್ಣನವರ, ವಿ.ಬಿ. ಚಿಕ್ಕೇರಿ, ಎಸ್.ಎಲ್. ನಾಯಕ, ವಿಜೇಂದ್ರ ಯತ್ನಳ್ಳಿ, ಸಿ.ಜಿ. ಪಾಟೀಲ, ಪಿಆರ್. ಚಿಕ್ಕಳ್ಳಿ, ಎಫ್.ಎಂ. ಬಿಂಗೆ, ಎಂ.ಎಸ್. ಬಡಿಗೇರ, ಅಶೋಕ ಬುಡ್ಡನವರ, ಶ್ರೀಕಾಂತ ಹುಲ್ಲಮನಿ, ಚನ್ನಬಸಪ್ಪ ಹಾವಣಗಿ, ಮಹೇಶ ನಾಯಕ, ಸಂತೋಷ ದೊಡ್ಡಮನಿ, ಎಸ್. ಆನಂದ, ಚಿನ್ಮಯಿ ಓದಿಸೋಮಠ, ಈರಪ್ಪ ಕರೆಗೊಂಡರ, ಎಂಎಸ್. ಓಲೇಕಾರ, ಆರ್.ಎಫ್. ತಿರುಮಲೆ, ಎಂ.ಎ. ಮನ್ನಂಗಿ, ಗಿರೀಶ ನೆಲ್ಲೀಕೊಪ್ಪ, ನಾಗರಾಜ ಮುಶಪ್ಪನವರ, ಕುಮಾರ ಗುಡದಳ್ಳಿ, ಸಂತೋಷ ವಡ್ಡರ, ಸರೇಂದ್ರ ಕುಬಟೂರ ಸೇರಿದಂತೆ ಸರಕಾರಿ ನೌಕರರು ಮನವಿ ಅರ್ಪಿಸುವ ಸಂದರ್ಭದಲ್ಲಿದ್ದರು.