ಸಾರಾಂಶ
ಹಗರಿಬೊಮ್ಮನಹಳ್ಳಿ: ಏತ ನೀರಾವರಿಗಳ ನೀರುಗಂಟಿಗಳ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಹೂವಿನಹಡಗಲಿ ಉಪವಿಭಾಗದ ೬೫ಕ್ಕೂ ಹೆಚ್ಚು ನೀರುಗಂಟಿಗಳು ಶಾಸಕ ಕೆ.ನೇಮರಾಜ ನಾಯ್ಕಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಈ ಕುರಿತು ಏತ ನೀರಾವರಿ ಯೋಜನೆಯ ನೀರಗಂಟಿಗಳ ಸಂಘದ ಕಾರ್ಯದರ್ಶಿ ಕಾಳಗಟ್ಟಿ ಷಣ್ಮುಖಪ್ಪ ಮಾತನಾಡಿ, ನೀರಗಂಟಿಗಳಿಗೆ ಕಳೆದ ಎರಡು ವರ್ಷದಿಂದ ವೇತನ ನೀಡದೆ ಗುತ್ತಿಗೆದಾರರು ದುಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಬಾಕಿ ವೇತನ ಬಿಡುಗಡೆ ಮಾಡುವುದರ ಜೊತೆಗೆ ಪ್ರತಿ ತಿಂಗಳ ಮೊದಲನೇ ವಾರದಲ್ಲಿ ನೀರಗಂಟಿಗಳಿಗೆ ವೇತನ ನೀಡಬೇಕು. ಶಾಸಕರು ಕೂಡಲೇ ಏತ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ನಮ್ಮ ವೇತನ ಬಿಡುಗಡೆ ಮಾಡುವಂತೆ ಖಡಕ್ ಆಗಿ ಸೂಚನೆ ನೀಡಬೇಕು. ಸಕಾಲದಲ್ಲಿ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿರುವ ನೀರುಗಂಟಿಗಳಿಗೆ ವೇತನ ನೀಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಶಾಸಕ ಕೆ.ನೇಮರಾಜ ನಾಯ್ಕ ಪ್ರತಿಕ್ರಿಯಿಸಿ, ನೀರುಗಂಟಿಗಳ ವೇತನ ಬಿಡುಗಡೆ ಮಾಡಲು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೂಡಲೇ ವೇತನ ನೀಡುವಂತೆ ಸೂಚಿಸುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್.ಎಂ.ಕೊಟ್ರಯ್ಯ, ಮರಿಯಮ್ಮನಹಳ್ಳಿ ಕಾಶಿಂಸಾಬ್, ಅಂಕಸಮುದ್ರ ಹನುಮಂತಪ್ಪ, ಕೋಟೇಪ್ಪ, ನೀಲಗಿರಿ, ಕಿತ್ನೂರು ನಾಗರಾಜ, ದೇವರಾಜ, ಮೈಲಾರಿ, ನೀಲಪ್ಪ ಇತರರಿದ್ದರು.ಹಗರಿಬೊಮ್ಮನಹಳ್ಳಿ ಏತ ನೀರಾವರಿ ನೀರುಗಂಟಿಗಳ ವೇತನವನ್ನು ಕೂಡಲೇ ನೀಡುವಂತೆ ಒತ್ತಾಯಿಸಿ ನೀರುಗಂಟಿಗಳು ಶಾಸಕ ಕೆ.ನೇಮರಾಜನಾಯ್ಕಗೆ ಮನವಿ ಸಲ್ಲಿಸಿದರು.