ನಿರಂತರವಾಗಿ 7 ತಾಸು ವಿದ್ಯುತ್ ನೀಡುವಂತೆ ಒತ್ತಾಯ

| Published : Nov 14 2025, 03:15 AM IST

ಸಾರಾಂಶ

ನಿರಂತರವಾಗಿ 7 ತಾಸು ವಿದ್ಯುತ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರೈತ ಸಂಘದ ಸದಸ್ಯರು ಹೆಸ್ಕಾಂ ಅಭಿಯಂತರಿಗೆ ಗುರುವಾರ ಮನವಿ ಸಲ್ಲಿಸಿದರು.

ಬ್ಯಾಡಗಿ: ನಿರಂತರವಾಗಿ 7 ತಾಸು ವಿದ್ಯುತ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರೈತ ಸಂಘದ ಸದಸ್ಯರು ಹೆಸ್ಕಾಂ ಅಭಿಯಂತರಿಗೆ ಗುರುವಾರ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡ ಕೆ.ವಿ. ದೊಡ್ಡಗೌಡ್ರ, ರಾಜ್ಯದಲ್ಲಿ ಯಾವ ವರ್ಷವೂ ರೈತರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ, ಒಂದೆಡೆ ಪ್ರಕೃತಿ ನಮ್ಮನ್ನು ಆಟವಾಡಿಸುತ್ತಿದ್ದರೆ ಸರ್ಕಾರ ಬೆಂಬಲ ಬೆಲೆ ನೀಡದೇ ಖರೀದಿ ಕೇಂದ್ರ ತೆರೆಯದೇ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಇಂತಹ ಸಮಯದಲ್ಲಿ ಹೆಸ್ಕಾಂ ಸಹ ನಿರಂತರವಾಗಿ 7 ತಾಸು ವಿದ್ಯುತ್ ನೀಡದೆ ಗಾಯದ ಮೇಲೆ ಬರೆ ಹಾಕುತ್ತಿರುವುದು ನೋವಿನ ಸಂಗತಿ ಎಂದರು.

ಬೆಳೆಗಳು ಹಾಳು: ಗ್ರಾಮೀಣ ಭಾಗದಲ್ಲಿ ಹೆಸ್ಕಾಂ ನಿರಂತರವಾಗಿ 7 ತಾಸು ವಿದ್ಯುತ್ ನೀಡದೇ ಆಗೊಂದು ತಾಸು ಈಗೊಂದು ತಾಸು ವಿದ್ಯುತ್ ನೀಡುತ್ತಿದೆ. ಇದರಿಂದ ರೈತರ ಸಮಯದ ಜತೆಗೆ ಸಮರ್ಪಕವಾಗಿ ಹೊಲದಲ್ಲಿನ ಬೆಳೆಗಳಿಗೆ ನೀರು ಸಿಗದೇ ಬೆಳೆಗಳು ಹಾಳಾಗುತ್ತಿವೆ. ರೈತರು ಮತ್ತಷ್ಟು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಆದ್ದರಿಂದ ನಿರಂತರವಾಗಿ ವಿದ್ಯುತ್ ನೀಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.

ರೈತರ ಪ್ರಾಣ ಉಳಿಸಿ: ಶೇಖಪ್ಪ ಕಾಶಿ ಮಾತನಾಡಿ, ಸತತವಾಗಿ ಸುರಿದ ಮಳೆಯಿಂದ ರೈತರ ಹೊಲದಲ್ಲಿನ ಹಲವು ವಿದ್ಯುತ್ ಕಂಬಗಳು ಈಗಾಗಲೇ ಬೀಳುವ ಹಂತಕ್ಕೆ ಬಂದು ತಲುಪಿವೆ. ತಂತಿಗಳು ನೆಲಕ್ಕೆ ಬಿದ್ದು ಅದನ್ನು ತುಳಿದು ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವುಗಳಿಂದ ರೈತರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಕೂಡಲೇ ಇಂತಹ ಕಂಬಗಳನ್ನು ತೆರವುಗೊಳಿಸಿ ರೈತರ ಪ್ರಾಣ ಉಳಿಸಿ ಎಂದರು.

ಹಾಳಾದ ಟಿಸಿ ಬದಲಿಸಿ: ಮೌನೇಶ ಕಮ್ಮಾರ ಮಾತನಾಡಿ, ಮಳೆಯಿಂದಾಗಿ ರೈತರ ಹೊಲದಲ್ಲಿ ಹಾಕಲಾದ ಟಿಸಿಗಳು ಹಾಳಾಗಿ, ಟಿಸಿಯಿಂದ ಆಯಿಲ್ ಸಹ ಹೊರಗಡೆ ಬರುತ್ತಿದೆ. ಕೂಡಲೇ ಅಂತಹ ಟಿಸಿ ಬದಲಾಯಿಸಿ, ಇಲ್ಲದೇ ಹೋದಲ್ಲಿ ಅವು ಸುಟ್ಟು ಸ್ಫೋಟವಾಗುವ ಸಂಭವವಿರುತ್ತದೆ. ರೈತರಿಗೆ ಎದುರಾಗಿರುವ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಮಂಜು ತೋಟದ, ಪ್ರಕಾಶ ಮತ್ತೂರ, ಶಿವರುದ್ರಪ್ಪ ಮೂಡೇರ, ಚೆನ್ನಬಸನಗೌಡ ಪಾಟೀಲ, ಚೆನ್ನಬಸಪ್ಪ ಪೂಜಾರ, ಫಕ್ಕೀರಪ್ಪ ಅಜಗೊಂಡರ, ಪರಮೇಶ ಮೇಗಳಮನಿ ಉಪಸ್ಥಿತರಿದ್ದರು.