ಕುಷ್ಟಗಿ ತಹಸೀಲ್ದಾರ ಕಚೇರಿಯ ಹಳೆ ಕಟ್ಟಡ ಉಳಿಸಲು ಒತ್ತಾಯ

| Published : Dec 29 2023, 01:32 AM IST

ಸಾರಾಂಶ

ಆಡಳಿತ ಸೌಧವು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದೆ. ಇದು ಐತಿಹಾಸಿಕ ಮಹತ್ವ ಸಾರುತ್ತಿರುವ ಕಟ್ಟಡವಾಗಿದ್ದು, ಇಲ್ಲಿ ಹೈದರಾಬಾದ್ ನಿಜಾಮರು ಆಡಳಿತ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಒದಗಿಸುವ ತಾಲೂಕಿನ ಏಕೈಕ ಪಾರಂಪರಿಕ ಕಟ್ಟಡವಾಗಿದೆ. ತಹಸೀಲ್ದಾರ್‌, ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಕುಷ್ಟಗಿ: ಪಟ್ಟಣದ ಐತಿಹಾಸಿಕ ಹಳೆ ತಹಸೀಲ್ದಾರ್‌ ಕಚೇರಿ ಕಟ್ಟಡವು ಪಾಳು ಬಿದ್ದಿದ್ದು, ಕಟ್ಟಡಕ್ಕೆ ಮರುಜೀವ ನೀಡುವ ಮೂಲಕ ಇತಿಹಾಸ ಉಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.ಪಟ್ಟಣದ ಹನಮಸಾಗರ ರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಹಿಂಭಾಗದ ನಿಜಾಮರ ಆಡಳಿತಾವಧಿಯಲ್ಲಿ ನಿರ್ಮಾಣವಾದ ಈ ತಹಸೀಲ್ದಾರ ಕಚೇರಿ ಕಟ್ಟಡವು ಸದೃಢವಾಗಿದ್ದರೂ ನಿರ್ಲಕ್ಷಕ್ಕೆ ಒಳಗಾಗಿದೆ. ಯಾವುದೇ ಕಾರ್ಯಗಳು ನಡೆಯದೇ ಇಂದಿಗೂ ಪಾಳು ಬಿದ್ದ ಕಟ್ಟಡವಾಗಿದೆ.ಏಕೈಕ ಪಾರಂಪರಿಕ ಕಟ್ಟಡ: ಆಡಳಿತ ಸೌಧವು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದೆ. ಇದು ಐತಿಹಾಸಿಕ ಮಹತ್ವ ಸಾರುತ್ತಿರುವ ಕಟ್ಟಡವಾಗಿದ್ದು, ಇಲ್ಲಿ ಹೈದರಾಬಾದ್ ನಿಜಾಮರು ಆಡಳಿತ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಒದಗಿಸುವ ತಾಲೂಕಿನ ಏಕೈಕ ಪಾರಂಪರಿಕ ಕಟ್ಟಡವಾಗಿದೆ. ತಹಸೀಲ್ದಾರ್‌, ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಹೊಸ ಕಟ್ಟಡ ನಿರ್ಮಾಣ: 2007-08ರಲ್ಲಿ ನಿರ್ಮಾಣವಾದ ಮಿನಿವಿಧಾನಸೌಧ ಕಟ್ಟಡಕ್ಕೆ ಕಂದಾಯ ಇಲಾಖೆಯನ್ನು ಸ್ಥಳಾಂತರ ಮಾಡಲಾಯಿತು. ನಂತರ ಹಲವು ವರ್ಷಗಳ ಹಿಂದೆ ಈ ಕಟ್ಟಡವನ್ನು ನ್ಯಾಯಾಲಯ, ಸರ್ಕಾರಿ, ವಕೀಲರ ಸಂಘದ ಕಚೇರಿಗಳಿಗೆ ಬಳಕೆ ಮಾಡುತ್ತಿದ್ದರು. ನೂತನವಾಗಿ ನಿರ್ಮಾಣಗೊಂಡ ಕಟ್ಟಡಗಳಿಗೆ ಎಲ್ಲ ಇಲಾಖೆಯ ಕಚೇರಿಗಳು ಸ್ಥಳಾಂತರಗೊಂಡಿದ್ದು ಹೈದ್ರಾಬಾದ್ ನಿಜಾಮರ ಕಾಲದ ಕಟ್ಟಡದ ಸ್ಥಿತಿಗತಿಯನ್ನು ಯಾರು ಕೇಳುವರಿಲ್ಲದಂತಾಗಿದೆ.

ಈ ಐತಿಹಾಸಿಕ ಕಟ್ಟಡದ ಗೋಡಗಳ ಮೇಲೆ ವಿವಿಧ ಜಾತಿಯ ಗಿಡ, ಮುಳ್ಳು ಕಂಠಿಗಳು ಬೆಳೆದು ನಿಂತಿವೆ. ಬೇರುಗಳು ಮೇಲಿಂದ ಕೆಳಗಿಳಿದು ಗೋಡೆ ಶಿಥಿಲಗೊಳಿಸುತ್ತಿದ್ದರೂ ಅದನ್ನು ತೆಗೆಯಲು ಯಾರೂ ಮುಂದಾಗುತ್ತಿಲ್ಲ.

ಕುಷ್ಟಗಿ ಪಟ್ಟಣದಲ್ಲಿರುವ ನಿಜಾಮರ ಕಾಲದ ಹಳೆಯ ಐತಿಹಾಸಿಕ ತಹಸೀಲ್ದಾರ್‌ ಕಚೇರಿ ಕಟ್ಟಡ ಪಾಳು ಬಿದ್ದು ನಶಿಸುವ ಹಂತ ತಲುಪಿದ್ದು, ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ. ಸದೃಢ ಕಟ್ಟಡ ಬಳಕೆ, ನಿರ್ವಹಣೆ ಇಲ್ಲದೇ ಹಾನಿಗೊಳಗಾಗುತ್ತಿದ್ದು ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈಗಾಗಲೇ ಕುಷ್ಟಗಿ ಪೊಲೀಸ್‌ ಠಾಣಾ ಪಾರಂಪರಿಕ ಕಟ್ಟಡ ಕಳೆದುಕೊಂಡ ನಾವು ಈ ಕಟ್ಟಡವನ್ನು ಕಳೆದುಕೊಳ್ಳಲು ತಯಾರಿಲ್ಲ. ನಮ್ಮ ಭಾಗದ ಪರಂಪರೆ, ಸಾಂಸ್ಕೃತಿಕ ಕುರುಹುಗಳು ಇಂತಹ ಕಟ್ಟಡಗಳು ಮತ್ತು ಇದರಲ್ಲಿ ಬಳಸಿರುವ ತಾಂತ್ರಿಕತೆ ಮುಂದಿನ ಪೀಳಿಗೆಗೆ ದೊರಕಿಸಿ ಕೊಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಷ್ಟು ಶೀಘ್ರವಾಗಿ ದುರಸ್ತಿ ಮಾಡಿಸಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.ಹೋರಾಟ: ತಹಸೀಲ್ ಕಚೇರಿ ಆವರಣದ ಉಳಿದ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಕಟ್ಟಡ ನಿರ್ಮಾಣ ಈ ಹಳೆಯ ಐತಿಹಾಸಿಕ ಕಟ್ಟಡ ಉಳಿಸಿಕೊಂಡೇ ನಿರ್ಮಿಸಬೇಕು. ಇಲ್ಲದಿದ್ದರೆ ಕುಷ್ಟಗಿ ನಾಗರಿಕರು ಈ ಪಾರಂಪರಿಕ ಕಟ್ಟಡ ಉಳಿಸಿಕೊಳ್ಳಲು ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ವಿರೇಶ ಬಂಗಾರಶೆಟ್ಟರ್‌, ನಜೀರಸಾಬ್‌ ಮೂಲಿಮನಿ, ಪಾಂಡುರಂಗ ಆಶ್ರೀತ್, ಅನೀಲಕುಮಾರ ಆಲಮೇಲ, ಕೃಷ್ಣಮೂರ್ತಿ ಟೆಂಗುಂಟಿ, ನಾಗರಾಜ ಬಡಿಗೇರ, ಅನೀಲ ಕಮ್ಮಾರ ಮಹ್ಮದ ಅಫ್ತಾಬ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.