ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ ಸೇರಿರುವ ಜಮೀನನ್ನು ಪಟ್ಟಭದ್ರರು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ಜಾಗ ತೆರವು ಮಾಡಿ ಶಾಲೆ ವಶಕ್ಕೆ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಶಿಕ್ಷಣ ಸಚಿವರಿಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ ಸೇರಿರುವ ಜಮೀನನ್ನು ಪಟ್ಟಭದ್ರರು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ಜಾಗ ತೆರವು ಮಾಡಿ ಶಾಲೆ ವಶಕ್ಕೆ ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರು ಶಿಕ್ಷಣ ಸಚಿವರಿಗೆ ದೂರು ನೀಡಿದ್ದಾರೆ.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಗ್ರಾಮದ ಪ್ರಮುಖರು ಶಾಲೆ ಜಾಗದ ಒತ್ತುವರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಆಸ್ತಿಯನ್ನು ಉಳಿಸಿಕೊಡುವಂತೆ ಕೋರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಶಾಲಾ ಆವರಣಕ್ಕೆ ಸೇರಿದ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಈ ಬಗ್ಗೆ ಶಾಲೆ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸಿದರೂ ಜಾಗವನ್ನು ಅತಿಕ್ರಮಿಸಿದ್ದಾರೆ. ಇದರಿಂದ ಶಾಲೆ ಶೈಕ್ಷಣಿಕ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಮಕ್ಕಳ ಆಟದ ಮೈದಾನ ಹಾಗೂ ಶಾಲೆ ಭವಿಷ್ಯದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಆಸ್ತಿಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಕ್ಷಣವೇ ನಡೆಯುತ್ತಿರುವ ಕಾಮಗಾರಿ ಸ್ಥಗಿತಗೊಳಿಸಿ ಶಾಲಾ ಆಸ್ತಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಒತ್ತುವರಿ ತಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಈಗ ಸರ್ಕಾರದ ಹಂತದಲ್ಲಿ ಸಚಿವರು ಮಧ್ಯಪ್ರವೇಶಿಸಿ ಈ ಅಕ್ರಮ ಕಟ್ಟಡ ನಿರ್ಮಾಣವನ್ನು ತಡೆಯಬೇಕು. ಒಂದು ವೇಳೆ ಈ ಅಕ್ರಮ ಕಟ್ಟಡ ನಿರ್ಮಾಣವನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮದ ನಾಗರಿಕರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಯಕ್ ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಮನವಿ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಸ್ಥಳಕ್ಕೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರೊಡಗೂಡಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಹಾಜರಿದ್ದ ಗ್ರಾಮಸ್ಥರಿಗೆ ತಕ್ಷಣವೇ ಶಾಲೆ ಜಾಗವನ್ನು ಅಳತೆ ಮಾಡಿಸಿ ಒಂದು ವೇಳೆ ಜಾಗವು ಅತಿಕ್ರಮಣವಾಗಿದ್ದರೆ ಕಾನೂನಿನಡಿ ನೋಟಿಸ್ ನೀಡಿ ತೆರವುಗೊಳಿಸುತ್ತೇವೆ ಎಂದು ಭರವಸೆ ನೀಡಿದರು.