ಸಾರಾಂಶ
ಲಕ್ಷ್ಮೇಶ್ವರ: ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಕಡ್ಡಾಯವಾಗಿ ತಮ್ಮ ಅಂಗಡಿ, ವ್ಯಾಪಾರಿ ಸಂಸ್ಥೆಗಳು, ಶಾಲೆಗಳು ಎಲ್ಲ ವ್ಯಾಪಾರಿಗಳು ತಮ್ಮ ಅಂಗಡಿ, ಸಂಸ್ಥೆಗಳ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಮಾತನಾಡಿ ‘ರಾಜ್ಯದಲ್ಲಿ ಶೇ.೬೦ರಷ್ಟು ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದರೂ ಸಹ ಇನ್ನೂ ಬಹಳಷ್ಟು ನಾಮಫಲಕಗಳು ಬೇರೆ ಬೇರೆ ಭಾಷೆಗಳಲ್ಲಿ ಇವೆ. ಕಾರಣ ಆದಷ್ಟು ಬೇಗನೇ ಕನ್ನಡದಲ್ಲಿ ನಾಮಫಲಕಗಳನ್ನು ಬರೆಸದಿದ್ದರೆ ಅಂಥ ನಾಮಫಲಕಗಳನ್ನು ನಾಶಪಡಿಸಲಾಗುವುದು ಎಂದು ಎಚ್ಚರಿಸಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ ಸುತಾರ ಮಾತನಾಡಿ, ಸರ್ಕಾರದ ಸೂಚನೆ ಇದ್ದರೂ ಕೂಡ ಇನ್ನೂ ಅನ್ಯಭಾಷೆಗಳಲ್ಲಿ ನಾಮಫಲಕಗಳು ಇವೆ. ಕಾರಣ ಕೂಡಲೇ ಅಂಥ ನಾಮಫಲಕಗಳನ್ನು ತೆಗೆದು ಹಾಕಿ ಕನ್ನಡದಲ್ಲಿ ಬರೆಸಬೇಕು. ಇಲ್ಲದಿದ್ದರೆ ಕರವೇ ಕಾರ್ಯಕರ್ತರೇ ಅನ್ಯಭಾಷೆಯ ನಾಮಫಲಕಗಳನ್ನು ತೆರವುಗೊಳಿಸಲು ಮುಂದಾಗಬೇಕಾಗುತ್ತದೆ. ಆಗುವ ಯಾವುದೇ ರೀತಿಯ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಆಗುತ್ತಾರೆ ಎಂದು ಹೇಳಿದರು.ಚೆನ್ನಬಸಯ್ಯ ಗಡ್ಡದೇವರಮಠ, ಪ್ರವೀಣ ಕುರಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶ ಕೊಂಚಿಗೇರಿಮಠ, ಪ್ರವೀಣ ಗೌರಿ, ಬಸವರಾಜ ರಗಟಿ, ಗಣೇಶ ಮೆಹರವಾಡೆ, ಗಂಗಾಧರ ಕೊಂಚಿಗೇರಿಮಠ, ಬಸನಗೌಡ ಪಾಟೀಲ, ಮುತ್ತು ಕರ್ಜೆಕಣ್ಣವರ, ಕುಮಾರ ಕಣವಿ, ಚಂದ್ರು ನೀರಲಗಿ, ಬಸವರಾಜ ಮಲ್ಲೂರ ಸೇರಿದಂತೆ ಮತ್ತಿತರರು ಇದ್ದರು. ಪುರಸಭೆ ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣವರ ಮನವಿ ಸ್ವೀಕರಿಸಿ ಆದಷ್ಟು ಬೇಗನೇ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸುವಂತೆ ವ್ಯಾಪಾರಸ್ಥರು, ಶಾಲೆ, ಕಾಲೇಜುಗಳು, ಫ್ಯಾಕ್ಟರಿಗಳು, ಸ್ವೀಟ್‌ಮಾರ್ಟ್ ವ್ಯಾಪಾರಸ್ಥರಿಗೆ ನೋಟೀಸು ನೀಡಲಾಗುವುದು’ ಎಂದು ಹೇಳಿದರು.