ಸಾರಾಂಶ
ಗುಲಾಬಿ ಬಣ್ಣದ ಕಬ್ಬಕ್ಕಿಗಳ ನೋಟವೇ ಬಲು ಚೆಂದ.....
ಕನ್ನಡಪ್ರಭ ವಾರ್ತೆ ಹಾವೇರಿನಗರದ ಹೊರವಲಯದ ಹೆಗ್ಗೇರಿ ಕೆರೆ ಪರಿಸರದಲ್ಲಿ ದೂರದ ಯುರೋಪ್ ಮತ್ತು ಪಶ್ಚಿಮ ವಿಷ್ಯಾದಿಂದ ವಲಸೆ ಬಂದಿರುವ ಗುಲಾಬಿ ಬಣ್ಣದ ನೂರಾರು ಕಬ್ಬಕ್ಕಿಗಳ (ರೋಜಿ ಸ್ಟಾರ್ಲಿಂಗ್) ಕಲರವ ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
ಕಳೆದ ಕೆಲವು ದಿನಗಳಿಂದ ಈ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬೆಳಗ್ಗೆ ೬ ಗಂಟೆಯಿಂದ ೭.೩೦ರವರೆಗೆ ಜೋರಾಗಿ ಸದ್ದು ಮಾಡುತ್ತಾ ಆಕಾಶದಲ್ಲಿ ಗುಂಪಿನಲ್ಲಿ ಹಾರಾಡುತ್ತಾ ಮೋಡವನ್ನೇ ಸೃಷ್ಟಿಸಿದಂತೆ ಕಾಣುತ್ತವೆ. ವಿದ್ಯುತ್ ತಂತಿ, ಮರಗಳ ರೆಂಬೆ, ಕೊಂಬೆಗಳ ಮೇಲೆ ಸಾಲಾಗಿ ಕುಳಿತಿರುವ ದೃಶ್ಯ ಮನಮೋಹಕವಾಗಿದೆ.ಗುಲಾಬಿ ಬಣ್ಣದ ಕಬ್ಬಕ್ಕಿಗಳು ತೆಳು ಗುಲಾಬಿ ಬಣ್ಣದಿಂದ ಕೂಡಿದ್ದರೂ, ಕಾಲು-ತಲೆ ಕಪ್ಪಾಗಿದ್ದು, ಕೊಕ್ಕು ತೆಳುಕೆಂಪು ಬಣ್ಣ ಹೊಂದಿವೆ. ಹಾರುವಾಗ ರೆಕ್ಕೆಗಳು ಕಪ್ಪು-ಬಿಳುಪಾಗಿ ಕಾಣುತ್ತವೆ. ಗುಲಾಬಿ ಮತ್ತು ಕಪ್ಪುಕಬ್ಬಕ್ಕಿಗಳು ಸಾಧಾರಣ ಗಾತ್ರದವುಗಳಾಗಿದ್ದು (೨೨ ಸೆಂಮೀ) ಒಂದು ಗುಂಪಿನಲ್ಲಿ ಸುಮಾರು ೫೦೦ರಿಂದ ಸಾವಿರದವರೆಗೂ ಇರುತ್ತವೆ. ಹುಲ್ಲುಗಾವಲು ಮತ್ತು ತೆರೆದ ಕೃಷಿ ಭೂಮಿಯ ಪಕ್ಷಿಯಾಗಿರುವ ಇವುಗಳು ಸ್ಥಳೀಯ ಪಕ್ಷಿ ಗೊರವಂಕನ ತರಹ ಕಂಡು ಬರುತ್ತವೆ. ಆದರೆ, ರೂಪದಲ್ಲಿ ಬಹಳಷ್ಟು ವ್ಯತ್ಯಾಸ ಕಾಣಬಹುದು.
ಬೆಳೆಗಳಿಗೆ ಮಾರಕವಾದ ಚಿಟ್ಟೆ, ಇತರೆ ಕೀಟಗಳನ್ನು ಭಕ್ಷಿಸಿ ಕೆಲವೊಮ್ಮೆ ಧಾನ್ಯ ರಕ್ಷಿಸಿ ಉಪಕಾರ ಮಾಡುವುದರಿಂದ ಇವುಗಳನ್ನು ರೈತರು ಸಹಿಸಿಕೊಳ್ಳುತ್ತಾರೆ. ಜತೆಗೆ, ಈ ಹಕ್ಕಿಗಳು ಪರಾಗಸ್ಪರ್ಶದಲ್ಲಿ ಬಹುಮುಖ್ಯ ಪಾತ್ರ ವಹಿಸುವುದರಿಂದ ರೈತ ಸ್ನೇಹಿಯಾಗಿವೆ. ಇವು ಮೈನಾ ಹಕ್ಕಿಗಳ ಒಡನಾಟದಲ್ಲಿರುವುದರಿಂದ ಅವುಗಳ ಜೊತೆಗೆ ಸೇರಿಕೊಂಡು ಹಣ್ಣು, ಕಾಳು ತಿನ್ನುತ್ತವೆ.ಸಾಮಾನ್ಯವಾಗಿ ಕೆರೆಯ ಪ್ರದೇಶದಲ್ಲಿ, ಮುಳ್ಳಿನಕಂಟೆಗಳಲ್ಲಿ, ಜೋಳದ ಹೊಲಗಳಲ್ಲಿ ಹೆಚ್ಚಾಗಿ ಕಂಡು ಬರುವ ಗುಲಾಬಿ ಬಣ್ಣದ ಕಬ್ಬಕ್ಕಿಗಳು ನಗರ ಪ್ರದೇಶದಲ್ಲಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ವಲಸೆ ಪಕ್ಷಿಯಾಗಿರುವ ಗುಲಾಬಿ ಬಣ್ಣದ ಕಬ್ಬಕ್ಕಿಗಳು ಭಾರತದಲ್ಲಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಬೇಸಿಗೆ ಆರಂಭವಾದ ತಕ್ಷಣ ಇವು ಮೂಲ ಸ್ಥಳಕ್ಕೆ ಮರಳುತ್ತವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆಂದು ಪರಿಸರ ಪ್ರೇಮಿ ಮಾಲತೇಶ ಅಂಗೂರ ತಿಳಿಸಿದ್ದಾರೆ.