ಸಾರಾಂಶ
ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಅತ್ಯಾಚಾರ, ಕೊಲೆಗಳು ನಡೆದಿವೆ ಎಂದು ಅಪಪ್ರಚಾರ ನಡೆಸುತ್ತಿರುವ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ವಸಂತ ಗಿಳಿಯಾರ್ ಆಗ್ರಹಿಸಿದ್ದಾರೆ.
ಮಂಗಳೂರು: ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಅತ್ಯಾಚಾರ, ಕೊಲೆಗಳು ನಡೆದಿವೆ ಎಂದು ಅಪಪ್ರಚಾರ ನಡೆಸುತ್ತಿರುವ ಪ್ರಕರಣದಲ್ಲಿ ವಿದೇಶದಿಂದ ಫಂಡಿಂಗ್ ಆಗಿರುವ ಸಂಶಯ ಬಲವಾಗಿದೆ. ಅಲ್ಲದೆ, ಭಯೋತ್ಪಾದನಾ ಚಟುವಟಿಕೆಗಳಿಗೂ ಸಂಪರ್ಕವಿರುವ ಸಾಧ್ಯತೆಗಳಿವೆ. ಆದ್ದರಿಂದ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕ ವಸಂತ ಗಿಳಿಯಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರವು ನಿಷೇಧಿತ ಸಂಘಟನೆ ಪ್ರತಿನಿಧಿಗಳು ಒಳಗೊಂಡಿರುವ ಗುಂಪಿನ ವತಿಯಿಂದ ನಡೆಯುತ್ತಿರುವ ದಾಳಿಯ ಭಾಗವಾಗಿದೆ. ಎನ್‌ಐಎ ತನಿಖೆಗೆ ಒಳಪಡಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಶೀಘ್ರ ಧರ್ಮ ಜಾಗರಣ ಸಮಾವೇಶ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ವ್ಯವಸ್ಥಿತವಾಗಿ ವ್ಯಾಪಕ ಅಪಪ್ರಚಾರ ಹಾಗೂ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರ ಖಂಡಿಸಿ ಜನಜಾಗೃತಿಗಾಗಿ ಶೀಘ್ರದಲ್ಲೇ ಧರ್ಮಸ್ಥಳದಲ್ಲಿ ಧರ್ಮ ಜಾಗರಣ ಸಮಾವೇಶ ನಡೆಸಲಾಗುವುದು ಎಂದು ಗಿಳಿಯಾರ್ ತಿಳಿಸಿದರು.
ಸಮಾವೇಶದ ದಿನಾಂಕವನ್ನು ಮುಂದಿನ ಎರಡು ದಿನದೊಳಗೆ ಪ್ರಕಟಿಸಲಾಗುವುದು. ರಾಜ್ಯದ ಎಲ್ಲ ಭಾಗಗಳಿಂದ ಕ್ಷೇತ್ರದ ಭಕ್ತರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್‌ಐಟಿಯಲ್ಲಿ ದಕ್ಷ ಅಧಿಕಾರಿಗಳಿದ್ದು, ಅನಾಮಿಕ ವ್ಯಕ್ತಿಯ ದೂರು ಹಾಗೂ ಹೇಳಿಕೆಯಂತೆ ತನಿಖೆ ಕೈಗೊಂಡಿದ್ದಾರೆ. ಅನಾಮಿಕ ವ್ಯಕ್ತಿ ತೋರಿಸಿದ 13 ಸ್ಥಳಗಳ ಪೈಕಿ 12 ಸ್ಥಳಗಳನ್ನು ಪರಿಶೀಲಿಸಲಾಗಿದ್ದು, ಒಂದರಲ್ಲಿ ಮಾತ್ರ ಒಂದು ಗಂಡಸಿನ ಶವದ ಅಸ್ತಿಪಂಜರ ದೊರೆತಿದೆ ಎನ್ನಲಾಗುತ್ತಿದೆ. ಆದರೆ, ಕೆಲವು ಯೂಟ್ಯೂಬ್ ಮಾಧ್ಯಮಗಳಲ್ಲಿ ಹಲವು ಶವಗಳು ಸಿಕ್ಕಿವೆ ಎಂದು ಬಿತ್ತರಿಸಲಾಗುತ್ತಿದೆ. ಇಂತಹ ಸುದ್ದಿಗಳು ಸತ್ಯವೋ ಸುಳ್ಳೋ ಎಂಬುದನ್ನು ಎಸ್‌ಐಟಿ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಸುಳ್ಳು ಸುದ್ದಿ ಪ್ರಕಟಿಸಿದ್ದರೆ ಅಂತಹ ಯೂಟ್ಯೂಬ್ ಚಾನಲ್‌ಗಳು ಹಾಗು ಅವುಗಳ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಸಂತ ಗಿಳಿಯಾರ್ ಒತ್ತಾಯಿಸಿದರು.ಸಮಿತಿ ಪ್ರಮುಖರಾದ ಶರತ್ ಶೆಟ್ಟಿ ವಡ್ಡರ್ಸೆ, ನಿಖಿಲ್ ನಾಯಕ್ ತೆಕ್ಕಟ್ಟೆ, ಮಹೇಶ್ ಬೈಲೂರು, ಪ್ರವೀಣ್ ಯಕ್ಷಿಮಠ, ರವೀಂದ್ರ ಹೇರೂರು, ಸಂದೀಪ್, ರವಿಚಂದ್ರ ಇದ್ದರು.