ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ಪ್ರತಿವರ್ಷದಂತೆ ಈಗ ತಾಲೂಕಿನ ಮಾಗಡಿ ಕೆರೆಯಲ್ಲಿ ವಲಸಿಗ ಹಕ್ಕಿಗಳ ಕಲರವ ಜೋರಾಗಿದೆ. ದೂರದ ಕಾಶ್ಮೀರ, ಟಿಬೇಟ್, ಮಲೇಷಿಯಾ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಂದ ೧೩೦ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಲಸೆ ಬಂದು ಬೀಡು ಬಿಟ್ಟಿವೆ.ಪ್ರತಿ ಚಳಿಗಾಲದಲ್ಲಿ ಪಕ್ಷಿಗಳು ಇಲ್ಲಿಗೆ ಬಂದು ಬೀಡು ಬಿಡುತ್ತವೆ. ಕೆರೆಗೆ ಕಳೆದ ಒಂದು ತಿಂಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಜಾತಿಗಳ ಪಕ್ಷಿಗಳು ಆಗಮಿಸುತ್ತಿವೆ. ಸಂತಾನೋತ್ಪತ್ತಿ ಮಾಡಿಕೊಂಡು ಬೇಸಿಗೆ ಆರಂಭವಾಗುತ್ತಿದ್ದಂತೆ ತಾಯ್ನಾಡಿಗೆ ಮರಳುತ್ತವೆ. ಈ ವಿದೇಶಿ ಅತಿಥಿಗಳನ್ನು ನೋಡದು, ಅಧ್ಯಯನ ಮಾಡಲು ದೇಶ-ವಿದೇಶದ ಪಕ್ಷಿತಜ್ಞರು, ಛಾಯಾಗ್ರಾಹಕರೂ ಇಲ್ಲಿಗೆ ಬರುತ್ತಾರೆ. ಮಾಗಡಿ ಕೆರೆ ಈಗ ಅಕ್ಷರಶಃ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ.
ನಿತ್ಯ ಸೂರ್ಯೋದಯ ಮತ್ತು ಸೂಯಾಸ್ತ ಇಲ್ಲೊಂದು ಸ್ವರ್ಗ ಸೃಷ್ಟಿಯಾಗಿರುತ್ತದೆ. ಇಬ್ಬನ್ನಿ, ಕೆಂಧೂಳಿನಲ್ಲಿ ಈ ವಲಸಿಗ ಅಥಿತಿಗಳ ಸ್ವಚ್ಛಂದ ಸಲ್ಲಾಪ ನೋಡುಗರನ್ನು ಮುದಗೊಳಿಸುತ್ತದೆ.೧೩೪.೧೫ ಎಕರೆ ವಿಸ್ತೀರ್ಣದ ಈ ಮಾಗಡಿ ಕೆರೆ ರಾಮ್ಸಾರ್ ಜೌಗು ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಜಾಗತಿಕ ರಾಮ್ಸಾರ್ ಮಾನ್ಯತೆ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದೇಶಿ ಪಕ್ಷಿಗಳ ಆಶ್ರಯ ತಾಣವಾದ ಮಾಗಡಿ ಕೆರೆ ರಾಮ್ಸಾರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ವಿದೇಶಿ ಹಕ್ಕಿಗಳು ಮಾಗಡಿ ಕೆರೆಗೆ ಬಂದು ಸೇರುತ್ತವೆ ಮತ್ತು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಇಲ್ಲಿ ನೈಸರ್ಗಿಕ, ಆಕರ್ಷಕ ಪಕ್ಷಿಧಾಮವೇ ಸೃಷ್ಟಿಯಾಗಿದೆ.ಜೀವ ವೈವಿದ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾದ ಮಾಗಡಿ ಕೆರೆ ಸದ್ಯ ಅನಾಥ. ಅರಣ್ಯ ಇಲಾಖೆ, ಮಾಗಡಿ ಗ್ರಾಪಂ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಯಾರೊಬ್ಬರೂ ಕೆರೆ ಸಂರಕ್ಷಣೆಗೆ ಮುಂದಾಗುತ್ತಿಲ್ಲ. ಇಲ್ಲಿ ಬಂದು ಬಿಡಾರ ಹೂಡಿರುವ ಪಕ್ಷಿಗಳ ಜೀವ ರಕ್ಷಣೆಗೆ ಯಾರೂ ಮುಂದಾಗುತ್ತಿಲ್ಲ.
ಈ ಮಾಗಡಿ ಕೆರೆ ಯಾವ ಇಲಾಖೆ ವ್ಯಾಪ್ತಿಗೆ ಬರುತ್ತಿದೆ ಎಂಬ ನಿಖರ ಮಾಹಿತಿ (ದಾಖಲೆ) ಯಾರ ಬಳಿಯೂ ಸಿಗುತ್ತಿಲ್ಲ. ಸದ್ಯ ಮಾಗಡಿ ಗ್ರಾಪಂ, ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಗಳ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಗ್ರಾಮಸ್ಥರು ಹೇಳುವಂತೆ ಈ ಹಿಂದೆ ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ಆದರೆ ಸರಿಯಾದ ವೇತನ ನೀಡದ ಹಿನ್ನೆಲೆಯಲ್ಲಿ ಇಲ್ಲಿ ಯಾರೂ ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ಕೆರೆಗೆ ಮತ್ತು ಈ ಕೆರೆಗೆ ವಲಸೆ ಬರುವ ಪಕ್ಷಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.ವಿದೇಶಿ ಪಕ್ಷಿಗಳು ಅಷ್ಟು ಸುಲಭವಾಗಿ ಯಾವುದೇ ಪ್ರಾಣಿಗಳ ಕೈಗೆ ಸಿಗುವುದಿಲ್ಲ. ನಮ್ಮ ಇಲಾಖೆಯಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ಕಾಯಂ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ ಎಂದು ತಾಲೂಕು ಮಟ್ಟದ ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ ತಿಳಿಸಿದ್ದಾರೆ.