ಕನ್ನಡಪ್ರಭ ವಾರ್ತೆ ಮೈಸೂರು

ಭಾರತದಲ್ಲಿನ ಚಿಕಿತ್ಸಾ ಪದ್ಧತಿ ಮತ್ತು ಸೌಲಭ್ಯಗಳಿಗೆ ವಿದೇಶಿಗರು ಆಕರ್ಷಿತರಾಗಿದ್ದಾರೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೆಡಿಕಲ್‌ ಅಸೆಸ್‌ಮೆಂಟ್‌ ಮತ್ತು ರೇಟಿಂಗ್‌ ಬೋರ್ಡ್‌ ಅಧ್ಯಕ್ಷ ಡಾ.ಎಂ.ಕೆ. ರಮೇಶ್‌ ಅಭಿಪ್ರಾಯಪಟ್ಟರು.

ಶಿವರಾತ್ರೀಶ್ವರ ನಗರದಲ್ಲಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಪದವೀಧರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಡು ಅವರು ಮತನಾಡಿದರು.

ಭಾರತದ ವೈದ್ಯರ ಕೌಶಲ್ಯಕ್ಕೆ ಮತ್ತು ಇಲ್ಲಿನ ಸೌಲಭ್ಯಕ್ಕೆ ಅಭಿವೃದ್ಧಿ ಹೊಂದಿ ದೇಶದ ಜನರೂ ಮನಸೋತಿದ್ದಾರೆ. ಆ ಮೂಲಕ ದೇಶವು ಆರೋಗ್ಯ ಪ್ರವಾಸೋದ್ಯಮ ಕ್ಷೇತ್ರದ ಹಬ್‌ಆಗಿ ಅಭಿವೃದ್ಧಿಹೊಂದುತ್ತಿದೆ. ಏಕೆಂದರೆ ನಮ್ಮ ದೇಶದಲ್ಲಿ ಚಿಕಿತ್ಸಾ ವೆಚ್ಚವು ಪಾಶ್ಚಿಮಾತ್ಯ ದೇಸಗಳಿಗೆ ಹೋಲಿಸಿದರೆ ಕಡಿಮೆ ಇದೆ. ಕೆಲವು ದೇಶಗಳಲ್ಲಿ ಒಂದು ಸಣ್ಣ ಶಸ್ತ್ರಚಿಕಿತ್ಸೆಗೆ ವರ್ಷಗಟ್ಟಲೆ ಕಾಯಬೇಕು. ಅಮೆರಿಕಾದಲ್ಲಿ ವಿಮೆ ಸೌಲಭ್ಯ ಇಲ್ಲದಿದ್ದರೆ ಒಂದೊಂದು ಚಿಕಿತ್ಸೆಗೂ ದುಬಾರಿ ಹಣ ತೆಬೇಕಾಗುತ್ತದೆ ಎಂದರು.

ಈ ಎಲ್ಲಾ ಕಾರಣಗಳಿಂದ ಹಲವರು ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಭಾರತವು ವೇಗವಾಗಿ ಬೆಳೆಯುತ್ತಿದ್ದು, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. 2047ಕ್ಕೆ ಸ್ವಾತಂತ್ರ್ಯದ 100 ವರ್ಷ ಪೂರ್ಣಗೊಳಿಸುವಾಗ, ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಇಂತಹ ವಾತಾವರಣವನ್ನು ವೈದ್ಯಕೀಯ ಕ್ಷೇತ್ರದವರು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ನಿಮ್ಮ ಕೈಯಲ್ಲಿದೆ. ಇದಕ್ಕಾಗಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು, ಹೊಸ ತಂತ್ರಜ್ಞಾನ ಕಲಿಯಬೇಕು. ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.


ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರವು ವ್ಯಾಪಾರೀಕರಣಗೊಂಡಿದೆ. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಧರ್ಮ-ನೀತಿ ಮತ್ತು ಸಮಾಜ ಸೇವೆಯ ಮನೋಭಾವ ಇರಬೇಕು. ಹಿಂದಿನ ಕಾಲದಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಗೆ ಜನರು ಹಣ ಕೊಡುತ್ತಿರಲಿಲ್ಲ. ಬದಲಾಗಿ ತಾವು ಬೆಳೆದ ಬೆಳೆಗಳನ್ನು, ಆಹಾರ ಪದಾರ್ಥ ಕೊಟ್ಟು ಗೌರವಿಸುತ್ತಿದ್ದರು. ಈಗ ಈ ಕ್ಷೇತ್ರ ವೃತ್ತಿಯಾಗಿದ್ದರೂ ನಾವು ನಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳಲೇಬೇಕು ಎಂದರು.

ಯಶಸ್ಸು ದೊರಕಿದೆ ಎಂದು ವೈದ್ಯಕೀಯ ಧರ್ಮ ಮತ್ತು ನೀತಿ ತಪ್ಪಿಸಬಾರದು. ಕೆಲಸ ಮುಗಿಸಿ ರಾತ್ರಿ ನಿದ್ರೆಗೆ ಜಾರುವ ಮುನ್ನ ನಾನು ತಪ್ಪು ಮಾಡಿಲ್ಲ, ನನ್ನ ಶಕ್ತಿಗೆ ತಕ್ಕಂತೆ ಉತ್ತಮ ಚಿಕಿತ್ಸೆ ನೀಡಿದ್ದೇನೆ ಎಂಬುದು ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಅದೇ ನಿಜವಾದ ಯಶಸ್ಸು ಎಂದರು.

ವೈದ್ಯಕೀಯ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ಸಾಮರ್ಥ್ಯ ಅಗತ್ಯ. ನಿಮ್ಮಲ್ಲಿ ಸಾಮರ್ಥ್ಯ ಬರಬೇಕಾದರೆ ಪುಸ್ತಕ ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ವಾರ್ಡಿನಲ್ಲಿ ರೋಗಿಗಳ ಜತೆ ಹೆಚ್ಚು ಸಮಯ ಕಳೆಯಬೇಕು. ಆಗ ನಿಮ್ಮಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪರಿಣಿತಿ ಲಭಿಸುತ್ತದೆ. ಆಗ ಸಮಾಜ ನಿಮ್ಮನ್ನು ಹೆಚ್ಚು ಗೌರವಿಸುವುದಲ್ಲದೇ ನಿಮ್ಮ ಮೇಲೆ ನಂಬಿಕೆ ಇಡುತ್ತದೆ ಎಂದರು.

ಸ್ವಾತಂತ್ರ್ಯ ಕಾಲದಲ್ಲಿ ಭಾರತ ಬಡ ದೇಶವಾಗಿತ್ತು. ಆರೋಗ್ಯ ಸೇವೆ ಮತ್ತು ಶಿಕ್ಷಣದ ಕೊರತೆ ಇತ್ತು. ಆದ್ದರಿಂದ ಶಾಲೆಗಳು ಮತ್ತು ಆಸ್ಪತ್ರೆಗಳು ನಿರ್ಮಿಸಿದರು. ಇದನ್ನು ಗಮನಿಸಿದರೇ ಶಿಕ್ಷಣವೇ ನಮ್ಮ ಅಭಿವೃದ್ಧಿಗೆ ಕಾರಣ. ಆದ್ದರಿಂದ ವೈದ್ಯಕೀಯ ಪದವೀಧರರು ಸಮಾಜದ ಭಾಗವಾಗಿ, ಸಮುದಾಯವನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ್‌ ಮಠ್ ಅಧ್ಯಕ್ಷತೆವಹಿಸಿದ್ದರು. ಜೆಎಸ್ಎಸ್- ಎಎಚ್ಇಆರ್ ಕುಲಪತಿ ಡಾ.ಎಚ್. ಬಸವನಗೌಡಪ್ಪ, ಕುಲಸಚಿವ ಡಾ.ಬಿ. ಮಂಜುನಾಥ್‌, ಪರೀಕ್ಷ ನಿಯಂತ್ರಕ ಸುಧೀಂದ್ರ ಭಟ್, ಪ್ರಾಂಶುಪಾಲ ಡಾ.ಡಿ. ನಾರಾಯಣಪ್ಪ, ಉಪ ಪ್ರಾಂಶುಪಾಲೆ ಡಾ.ಎಂ.ಎನ್. ಸುಮಾ, ಡಾ. ಮಾಂತಪ್ಪ, ಜೆಎಸ್ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ. ಮಧು, ಆಡಳಿತಾಧಿಕಾರಿ ಎಸ್.ಆರ್. ಸತೀಶ್ಚಂದ್ರ ಮೊದಲಾದವರು ಇದ್ದರು.

195 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪದವಿ ಪ್ರದಾನ ಸಮಾರಂಭದಲ್ಲಿ 195 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 11 ಚಿನ್ನದ ಪದಕ ಹಾಗೂ 12 ನಗದು ಬಹುಮಾನ ಪ್ರದಾನ ಮಾಡಲಾಯಿತು.

ಡಾ. ಪೂರ್ಣ ಬನ್ಸಾಲ್‌ ಅವರು 7 ಚಿನ್ನದ ಪದಕ ಹಾಗೂ 6 ನಗದು ಬಹುಮಾನ ಪಡೆದುಕೊಂಡರು. ಡಾ. ಪ್ರಖರ್‌ ಗುಪ್ತ 2 ಚಿನ್ನದ ಪದಕ, ಒಂದು ನಗದು ಬಹುಮಾನ, ಡಾ.ಸಾಂಡ್ರ ಆನ್‌ ಸ್ಯಾಮ್‌ ಒಂದು ಚಿನ್ನ, ಎರಡು ನಗದು, ಡಾ. ಯಶಿಕಾ ಶರ್ಮಾ ಒಂದು ಚಿನ್ನದ ಪದಕ, ಡಾ. ಸ್ನೇಹಾ ಮನೋಜ್‌ ಕುಮಾರ್‌ ಎರಡು ನಗದು, ಡಾ.ಶ್ರೇಯಾ ಬೋಸ್‌ ಒಂದು ನಗದು, ದಿಯುಕ್ಷಾ ಅರೋರಾ ಒಂದು ನಗದು ಬಹುಮಾನ ಗಳಿಸಿದರು.