ಸಾರಾಂಶ
ಈ ವರ್ಷ ಒಟ್ಟು 1800 ವಿದೇಶಿಗರು ಇಲ್ಲೆ ವಸತಿ ಮಾಡಿದ್ದರು. ಇವರಲ್ಲಿ ಈಗಾಗಲೇ 1600ಕ್ಕಿಂತ ಹೆಚ್ಚು ಜನ ವಾಪಸ್ ಆಗಿದ್ದು, ಉಳಿದವರು ಇನ್ನೂ ಕೆಲವೇ ದಿನದಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ.
ಗೋಕರ್ಣ: ಈ ವರ್ಷ ಇಲ್ಲಿಗೆ ಆಗಮಿಸಿದ ವಿದೇಶಿ ಪ್ರವಾಸಿಗರು ವಾಪಸ್ ಸ್ವದೇಶಕ್ಕೆ ತೆರಳಿದ್ದು, ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವನ್ನು ವೀಕ್ಷಿಸಿ ಭಾವನಾತ್ಮಕ ನೆನಪಿನೊಂದಿಗೆ ತವರಿಗೆ ಹೋಗಿದ್ದಾರೆ.
ಇಲ್ಲಿನ ಕಡಲತೀರವನ್ನು ವಿಶ್ವಕ್ಕೆ ಪರಿಚಯಿಸಿದ ವಿದೇಶಿಗರು ಪ್ರಕೃತಿ ಸೌಂದರ್ಯ ಆಸ್ವಾದಿಸುವ ಜತೆ ಇಲ್ಲಿ ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ತಿಳಿದು ಸ್ವತಃ ತಾವು ಅಳವಡಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದರು.ಆದರೆ ಸ್ವದೇಶಿ ಪ್ರವಾಸಿಗರ ಅತಿರೇಕದ ವರ್ತನೆ ಮೋಜು, ಮಸ್ತಿಯಿಂದ ಬೇಸತ್ತು ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದ್ದು, ಕೋವಿಡ್ ಅವಧಿಯಲ್ಲಿ ಮತ್ತಷ್ಟು ಕುಸಿದು ಶೂನ್ಯಕ್ಕೆ ತಲುಪಿತ್ತು. ಈ ಬಾರಿ ಅಧಿಕ ಸಂಖ್ಯೆಯಲ್ಲಿ ಇದ್ದರೂ ಈ ಹಿಂದಿನ ಅಂಕಿ ಅಂಶ ಗಮನಿಸಿದರೆ ತೀರ ಕಡಿಮೆಯಾಗಿದೆ.ಕೊರೋನಾ ಮಹಾಮಾರಿ ಬರುವುದಕ್ಕಿಂತ ಮೊದಲು ನಿರಂತರವಾಗಿ ಮೂರು ದಶಕಗಳಿಂದ ಬರುತ್ತಿದ್ದ ವಿದೇಶಿ ಪ್ರವಾಸಿಗರು ಈ ವರ್ಷ ಭೇಟಿ ನೀಡಿದ್ದರು. ಅಂದು ತಮಗೆ ಆದರಾಥಿತ್ಯ ನೀಡದವರ ವಸತಿಗೃಹಗಳಿಗೆ ಭೇಟಿ ಸಂಬಂಧಿಕರಂತೆ ಆತ್ಮೀಯವಾಗಿ ಕುಶಲೋಪರಿ ವಿಚಾರಿಸಿ ಹಲವು ದಿನ ಉಳಿದು, ಪೇಟೆಯ ಎಲ್ಲ ಅಂಗಡಿ ವಿವಿಧ ಸ್ಥಳೀಯರನ್ನು ಮಾತನಾಡಿ ಅಂದು ಮತ್ತು ಇಂದಿನ ದಿನದ ಕುರಿತು ಚರ್ಚಿಸಿ ತೆರಳಿದ್ದಾರೆ.
ಪ್ರತಿ ಬಾರಿ ಆರು ತಿಂಗಳ ವೀಸಾ ನೀಡುತ್ತಿದ್ದರಿಂದ ಅಕ್ಟೋಬರ್, ನವೆಂಬರನಲ್ಲಿ ಇಲ್ಲಿಗೆ ಬಂದು ಏಪ್ರಿಲ್, ಮೇ ತಿಂಗಳವರೆಗೆ ಉಳಿಯುತ್ತಿದ್ದರು. ಆದರೆ ಬದಲಾದ ನಿಯಮದಿಂದ ಕೇವಲ ಮೂರು ತಿಂಗಳು ಉಳಿಯಲು ಅವಕಾಶ ನೀಡಿದ್ದು, ಇದರಿಂದ ಹಲವರು ಬೇಸರಗೊಂಡಿದ್ದಾರೆ.ಈ ವರ್ಷ ಒಟ್ಟು 1800 ವಿದೇಶಿಗರು ಇಲ್ಲೆ ವಸತಿ ಮಾಡಿದ್ದರು. ಇವರಲ್ಲಿ ಈಗಾಗಲೇ 1600ಕ್ಕಿಂತ ಹೆಚ್ಚು ಜನ ವಾಪಸ್ ಆಗಿದ್ದು, ಉಳಿದವರು ಇನ್ನೂ ಕೆಲವೇ ದಿನದಲ್ಲಿ ತಾಯ್ನಾಡಿಗೆ ಮರಳಲಿದ್ದಾರೆ.