ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕಾಡಾನೆ ದಾಳಿಯಿಂದ ಕಾರ್ಮಿಕ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಪಳ್ಳಕೆರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಅಮಿರನಾ (35) ಗಾಯಗೊಂಡ ಮಹಿಳೆ.ಸೋಮವಾರ ಬೆಳಗ್ಗೆ ಕಾರ್ಮಿಕರೊಂದಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಿಢೀರ್ ದಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಗಂಭೀರ ಗಾಯಗೊಂಡ ಮಹಿಳೆ ಅಮಿರನಾಳನ್ನು ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕೊಂಡ್ಯೊಯ್ಯಲಾಗಿದೆ. ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಲ್ಲಿನ ಜನರ ಅಹವಾಲು ಆಲಿಸಿದರು.ಕೊಡಗು ಜಿಲ್ಲೆಯ ವಿವಿಧೆಡೆ ಕಾಡಾನೆ ಸಹಿತ ವಿವಿಧ ಕಾಡು ಪ್ರಾಣಿಗಳ ಉಪಟಳದಿಂದ ಜನತೆ ಕಂಗೆಟ್ಟಿದೆ. ಕಾಡಾನೆಗಳು ಕೇವಲ ಬೆಳೆ ನಾಶ ಮಾತ್ರವಲ್ಲದ ಜನಜೀವದ ಮೇಲೂ ದಾಳಿ ಮಾಡುತ್ತಿವೆ.
ಇದರಿಂದ ಕಾರ್ಮಿಕರು ತೋಟದ ಕೆಲಸಗಳಿಗೇ ಹೋಗಲು ಆತಂಕ ಪಡುವಂತಾಗಿದೆ. ಪ್ರತಿ ಬಾರಿ ಕಾಡಾನೆ ದಾಳಿ ನಡೆದಾಗಲೂ ನಾಗರಿಕರು ಪ್ರಾಣಿ ಉಪಟಳಕ್ಕೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸುತ್ತಾರೆ. ಆದರೆ, ಆಡಳಿತ ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ.ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಆಗ್ರಹಿಸಿ ಕೊಡಗಿನಲ್ಲಿ ಸಾಕಷ್ಟು ಬಾರಿ ಕಾರ್ಮಿಕರು, ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಮನವಿಗಳನ್ನೂ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳೂ ದುರಂತಗಳು ಸಂಭವಿಸಿದಾಗ ಕ್ರಮದ ಭರವಸೆ ನೀಡುತ್ತಾರೆ. ಆದರೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಕೊಡಗಿನ ನಾಗರಿಕರು ಕಾಡಾನೆಗೆ ಹೆದರಿಯೇ ಓಡಾಡುವಂತಾಗಿದೆ.
ಇದೀಗ ಸಂಕ್ರಾಂತಿ ದಿನವೇ ಮುಂಜಾನೆ ಕಾಡಾನೆ ದಾಳಿಯಿಂದ ಜನತೆ ಬೆಚ್ಚಿ ಬಿದ್ದಿದೆ. ಕೊಡಗಿನಲ್ಲಿ ಕಾಡಾನೆಗಳು ತೋಟದಲ್ಲೆ ಬೀಡುಬಿಟ್ಟಿದ್ದರಿಂದ ಕೆಲಸಕ್ಕೆ ತೆರಳಲು ತೊಂದರೆಯಾಗುತ್ತಿದ್ದು, ಕಾಡಾನೆ ಹಾವಳಿ ತಡೆಗಟ್ಟುವಂತೆ ಕಾರ್ಮಿಕರ ಒತ್ತಾಯಿಸಿದ್ದಾರೆ.