ಸಾರಾಂಶ
ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಗುರುವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಸಣ್ಣಮಾದ (72) ಆನೆ ದಾಳಿಗೆ ಬಲಿಯಾದ ವ್ಯಕ್ತಿ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ತಾಲೂಕಿನ ಕರಳಕಟ್ಟೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಗುರುವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಸಣ್ಣಮಾದ (72) ಆನೆ ದಾಳಿಗೆ ಬಲಿಯಾದ ವ್ಯಕ್ತಿ. ಕರಳಕಟ್ಟೆ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಗ್ರಾಮವಾಗಿದೆ. ಬೆಳಗ್ಗೆ 8 ಗಂಟೆ ಸಮಯದಲ್ಲಿ ಕರಳಕಟ್ಟೆ ಗ್ರಾಮಕ್ಕೆ ಕಾಡಾನೆಯೊಂದು ಬಂದಿದೆ. ಈ ವೇಳೆ ಸಣ್ಣಮಾದ, ಪತ್ನಿ ಜಡೆ ಮಾದಮ್ಮ, ನಾದಿನಿ ರಂಗಮ್ಮ ಅವರ ಜತೆ ಕರಳಕಟ್ಟೆ ಬಳಿಯಿರುವ ಮೇಗಲದೊಡ್ಡಿಗೆ ತೆರಳುವಾಗ ದಾರಿಯಲ್ಲೆ ನಿಂತಿದ್ದ ಆನೆಯೊಂದು ದಿಢೀರ್ ದಾಳಿ ನಡೆಸಿದೆ. ಈ ವೇಳೆ ಆನೆಯಿಂದ ತಪ್ಪಿಸಿಕೊಳ್ಳಲು ಸಣ್ಣ ಮಾದ ಓಡಲು ಪ್ರಾರಂಭಿಸಿದ್ದಾನೆ. ಆನೆ ಆತನನ್ನು ಅಟ್ಟಾಡಿಸಿಕೊಂಡು ಹಿಂಬಾಲಿಸಿ ಆತನ ತೊಡೆ, ಕಾಲನ್ನು ತುಳಿದು ಸಾಯಿಸಿದೆ. ಪತ್ನಿ ಜಡೆ ಮಾದಮ್ಮ, ನಾದಿನಿ ರಂಗಮ್ಮ ಅವರು ಆನೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಪಾರಾಗಿದ್ದಾರೆ.ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾರ್ ಮತ್ತಿತರ ಸಿಬ್ಬಂದಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಗಣೇಶ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ. ಪರಿಹಾರಕ್ಕೆ ಒತ್ತಾಯ:
ಸ್ಥಳಕ್ಕೆ ಎಸಿಎಫ್ ನಂದಕುಮಾರ್ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಪರಿಹಾರಕ್ಕೆ ಒತ್ತಾಯಿಸಿದರು. ಈ ವೇಳೆ ಮೃತನ ಸಂಬಂಧಿಕರು, ತಿಮ್ಮರಾಜೀಪುರದ ಮಾಜಿ ಅಧ್ಯಕ್ಷ ರಾಜು ಹಾಗೂ ಗ್ರಾಮಸ್ಥರು ಕಾಡಾನೆ ದಾಳಿಗೆ ಬಲಿಯಾದ ಸಣ್ಣ ಮಾದನಿಗೆ ಸೂಕ್ತ ಪರಿಹಾರ ನೀಡಬೇಕು. ಕರಳಕಟ್ಟೆ ಗ್ರಾಮವು ಕಾಡಿನ ಅಂಚಿನಲ್ಲಿರುವುದ್ದರಿಂದ ಇಲ್ಲಿ ವಾಸಿಸುವ ಜನರಿಗೆ ಯಾವುದೇ ರಕ್ಷಣೆಯಿಲ್ಲ. ಕಳೆದ ತಿಂಗಳಿನಿಂದ 2 ಆನೆಗಳು ಬರುತ್ತಿವೆ. ಆದರೆ, ಜಿಂಕೆ, ಕಾಡು ಹಂದಿ ಬಂದು ಬೆಳೆಯನ್ನು ಹಾನಿ ಮಾಡುತ್ತಿದೆ. ಈ ಬಗ್ಗೆ ಅರಣ್ಯ ಸಿಬ್ಬಂದಿ ನಂಜುಂಡಸ್ವಾಮಿಗೆ ಹಲವು ಬಾರಿ ಮಾಹಿತಿ ನೀಡಿದ್ದೇವೆ. ಏನು ಕ್ರಮವಹಿಸಲಿಲ್ಲ ಎಂದು ಅಕ್ರೋಶ ಹೊರಹಾಕಿದರು. ನಂತರ ಇದಕ್ಕೆ ಪ್ರತಿಕ್ರಿಯಿಸಿದ ಎಸಿಎಫ್ ನಂದಕುಮಾರ್ ಮಾತನಾಡಿ, ಕಾಡಾನೆ ದಾಳಿಗೆ ಮನುಷ್ಯ ಮೃತಪಟ್ಟರೆ ಸರ್ಕಾರದ ಏನೆಲ್ಲ ಸೌಲಭ್ಯ ಸಿಗುತ್ತದೆಯೋ ಅದನ್ನು ಅವರ ಕುಟುಂಬಕ್ಕೆ ಸಿಗುವಂತೆ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು. ಆನಂತರ ಮೃತ ದೇಹವನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.