ಮಂಗಳೂರು: ರಾಮಕೃಷ್ಣ ಮಿಷನ್‌ ಮಂಗಳೂರು ವತಿಯಿಂದ ಸ್ವಚ್ಛ ಮಂಗಳೂರು ಪ್ರತಿಷ್ಠಾನ, ಎಂಆರ್‌ಪಿಎಲ್‌ ಸಹಯೋಗದಲ್ಲಿ ಧಾರ್ಮಿಕ ತ್ಯಾಜ್ಯಗಳ ಸಂಗ್ರಹ ಹಾಗೂ ಸುರಕ್ಷಿತ ವಿಲೇವಾರಿಗಾಗಿ ವಿಶೇಷ ಅಭಿಯಾನ ‘ವಿಸರ್ಜನೆ’ ಆರಂಭಿಸಲಾಗಿದ್ದು, ಇದಕ್ಕೆ ನಗರದ ರಾಮಕೃಷ್ಣ ಮಠದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಮಾ.26ರವರೆಗೆ ಈ ಅಭಿಯಾನ ನಡೆಯಲಿದೆ.

ಮಂಗಳೂರು: ರಾಮಕೃಷ್ಣ ಮಿಷನ್‌ ಮಂಗಳೂರು ವತಿಯಿಂದ ಸ್ವಚ್ಛ ಮಂಗಳೂರು ಪ್ರತಿಷ್ಠಾನ, ಎಂಆರ್‌ಪಿಎಲ್‌ ಸಹಯೋಗದಲ್ಲಿ ಧಾರ್ಮಿಕ ತ್ಯಾಜ್ಯಗಳ ಸಂಗ್ರಹ ಹಾಗೂ ಸುರಕ್ಷಿತ ವಿಲೇವಾರಿಗಾಗಿ ವಿಶೇಷ ಅಭಿಯಾನ ‘ವಿಸರ್ಜನೆ’ ಆರಂಭಿಸಲಾಗಿದ್ದು, ಇದಕ್ಕೆ ನಗರದ ರಾಮಕೃಷ್ಣ ಮಠದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಮಾ.26ರವರೆಗೆ ಈ ಅಭಿಯಾನ ನಡೆಯಲಿದೆ.

ಬೆಂಗಳೂರು ಬಸವನಗುಡಿ ರಾಮಕೃಷ್ಣ ಮಠದ ಸ್ವಾಮಿ ನಿತ್ಯಸ್ಥಾನಂದ ಜಿ ಮಹಾರಾಜ್‌ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಆರು ಕಡೆ ಸಂಗ್ರಹ ಹುಂಡಿ: ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್‌, ಈ ಅಭಿಯಾನವು ನಗರದ ಆರು ಸ್ಥಳಗಳಲ್ಲಿ ನಡೆಯಲಿದೆ. ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನ, ಬಿಜೈ ಭಾರತ್‌ ಮಾಲ್‌, ಪಾಂಡೇಶ್ವರ ಫೋರಂ ಮಾಲ್‌, ಸಿಟಿ ಸೆಂಟರ್‌ ಮಾಲ್‌ ಮತ್ತು ಸುರತ್ಕಲ್‌ ಗೋವಿಂದ ದಾಸ ಕಾಲೇಜು ಆವರಣದಲ್ಲಿ ಸಂಗ್ರಹ ಹುಂಡಿಯನ್ನು ತಾತ್ಕಾಲಿಕವಾಗಿ ಇಡಲಾಗುತ್ತದೆ. ಸಾರ್ವಜನಿಕರು ಹಳೆಯ ದೇವರ ಚಿತ್ರಗಳು, ಮುರಿದ ಮೂರ್ತಿಗಳು, ಧಾರ್ಮಿಕ ಚಿತ್ರಗಳಿರುವ ಕ್ಯಾಲೆಂಡಗಳು ಮತ್ತು ಹಳೆಯ ಪೂಜಾ ಸಾಮಗ್ರಿಗಳನ್ನು ಇದರಲ್ಲಿ ಹಾಕಬಹುದು ಎಂದು ತಿಳಿಸಿದರು.

ವಿಲೇವಾರಿ ಹೇಗೆ?: ಅಭಿಯಾನದ ಮೂಲಕ ಸಂಗ್ರಹಿಸಲಾದ ಎಲ್ಲ ವಸ್ತುಗಳನ್ನು ಕದ್ರಿ ದೇವಸ್ಥಾನಕ್ಕೆ ಸಾಗಿಸಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಅಂತಿಮ ವಿಲೇವಾರಿಗೆ ಮೊದಲು ಕದ್ರಿ ದೇವಸ್ಥಾನದ ಅರ್ಚಕರಿಂದ ವಿಶೇಷ ‘ಉದ್ವಾಸನ ಪೂಜೆ’ ನಡೆಸುವ ಮೂಲಕ ಈ ವಸ್ತುಗಳ ಪಾವಿತ್ರ್ಯತೆಯನ್ನು ಕಾಪಾಡಲಾಗುವುದು. ನಂತರ ಸ್ವಯಂಸೇವಕರು ವಸ್ತುಗಳನ್ನು ವಿಂಗಡಿಸಲಿದ್ದಾರೆ. ಕಾಗದದ ದೇವರ ಚಿತ್ರಗಳನ್ನು ನೀರಿನಲ್ಲಿ ನಿಮಜ್ಜನ ಮಾಡಿಸಿ, ನಂತರ ಕದ್ರಿ ದೇವಸ್ಥಾನದ ತೋಟದಲ್ಲಿ ನಿಗದಿತ ಗುಂಡಿಯಲ್ಲಿ ಇಡಲಾಗುತ್ತದೆ ಮತ್ತು ಅಲ್ಲಿ ಪವಿತ್ರ ಸಂಕೇತವಾಗಿ ತುಳಸಿ ಗಿಡವನ್ನು ನೆಡಲಾಗುವುದು. ಮರ, ಗಾಜು, ಲೋಹ ಮೊದಲಾದ ಇತರ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುವುದು. ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ಮರುಬಳಕೆ ಘಟಕಗಳಿಗೆ ಕಳುಹಿಸಲಾಗುವುದು. ಮರುಬಳಕೆ ಸಾಧ್ಯವಿಲ್ಲದ ವಸ್ತುಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಸಿಮೆಂಟ್‌ ಕಾರ್ಖಾನೆಯಲ್ಲಿ ಕೋ-ಪ್ರೊಸೆಸಿಂಗ್‌ ಮೂಲಕ ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ ಎಂದು ಸ್ವಾಮೀಜಿ ವಿವರಿಸಿದರು.

ಕೆಲವು ದಿನಗಳ ಹಿಂದೆ ಕದ್ರಿ ದೇವಸ್ಥಾನ ಪರಿಸರದಲ್ಲಿ ನಡೆಸಿದ ಸ್ವಚ್ಛತಾ ಶ್ರಮದಾನದ ಸಂದರ್ಭ ಹಳೆಯ ದೇವರ ಚಿತ್ರಗಳು, ಮುರಿದ ಮೂರ್ತಿಗಳು, ಹಳೆಯ ಪೂಜಾ ಸಾಮಗ್ರಿಗಳು ಇತ್ಯಾದಿ ಧಾರ್ಮಿಕ ವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಿದ್ದನ್ನು ಸ್ವಯಂಸೇವಕರು ಗಮನಿಸಿದ್ದರು. ಈ ವಸ್ತುಗಳನ್ನು ಸ್ವಯಂ ಸೇವಕರು ಸಂಗ್ರಹಿಸಿ ಗೌರವಪೂರ್ವಕವಾಗಿ ವಿಲೇವಾರಿ ಮಾಡಿದ್ದರು. ಈ ಪ್ರಯತ್ನದ ಮುಂದುವರಿಕೆಯಾಗಿ ‘ವಿಸರ್ಜನೆ’ ಎಂಬ ಹೆಸರಿನಲ್ಲಿ ಧಾರ್ಮಿಕ ತ್ಯಾಜ್ಯಗಳ ಸಂಗ್ರಹ ಹಾಗೂ ಸುರಕ್ಷಿತ ವಿಲೇವಾರಿಗಾಗಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಹಳೆ ಧಾರ್ಮಿಕ ವಸ್ತುಗಳನ್ನು ಶ್ರದ್ಧಾಪೂರ್ವಕವಾಗಿ ಹಾಗೂ ಗೌರವಪೂರ್ವಕವಾಗಿ ವಿಲೇವಾರಿ ಮಾಡುವ ಸೂಕ್ತ ಅವಕಾಶವನ್ನು ಒದಗಿಸುವುದು ಅಭಿಯಾನದ ಉದ್ದೇಶ ಎಂದರು.

‘ವಿಸರ್ಜನೆ’ ಅಭಿಯಾನವು ಕೇವಲ ಸರಿಯಾದ ವಿಲೇವಾರಿಯ ವ್ಯವಸ್ಥೆಯಷ್ಟೇ ಅಲ್ಲ, ಧಾರ್ಮಿಕ ತ್ಯಾಜ್ಯವನ್ನು ಗೌರವಪೂರ್ವಕವಾಗಿ ಹಾಗೂ ಪರಿಸರ ಸ್ನೇಹಿಯಾಗಿ ನಿರ್ವಹಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಆಗಿದೆ ಎಂದರು.ಎಂಆರ್‌ಪಿಎಲ್‌ ಸಿಎಸ್‌ಆರ್‌ ವಿಭಾಗದ ಮ್ಯಾನೇಜರ್‌ ಕೇಶವ ಪಾಟಾಳಿ ಮಾತನಾಡಿ, ವಿಸರ್ಜನೆ ಅಭಿಯಾನ ಉತ್ತಮ ಕಾರ್ಯ. ಇಂತಹಾ ಸ್ವಚ್ಛತಾ ಅಭಿಯಾನಗಳಿಗೆ ಎಂಆರ್‌ಪಿಎಲ್‌ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು.‘ವಿಸರ್ಜನೆ’ ಕಾರ್ಯಕ್ರಮದ ಸಂಯೋಜಕರಾದ ಉದಯ್‌ ಕೆ.ಪಿ., ತಾರಾನಾಥ್‌ ಆಳ್ವ, ಸೂರಜ್‌ ಮಂಗಳೂರು, ರಾಮಕೃಷ್ಣ ಮಿಷನ್‌ ಸ್ವಚ್ಚ ಮಂಗಳೂರು ಅಭಿಯಾನ ಸಂಯೋಜಕರಾದ ರಂಜನ್‌ ಬೆಳ್ಳರ್ಪಾಡಿ, ದಿಲ್‌ರಾಜ್‌ ಆಳ್ವ ಇದ್ದರು.

ಸಹಾಯವಾಣಿ

ಈಗ ಪ್ರಥಮ ಹಂತದಲ್ಲಿ ಅಭಿಯಾನಕ್ಕೆ ಸಾರ್ವಜನಿಕರಿಂದ ದೊರೆಯುವ ಸ್ಪಂದನೆ ನೋಡಿಕೊಂಡು ಅಭಿಯಾನ ಮುಂದುವರಿಸುವ ಕುರಿತು ನಿರ್ಧರಿಸಲಾಗುವುದು. ವಿಸರ್ಜನೆ ಅಭಿಯಾನದ ಶಾಶ್ವತ ಕೌಂಟರ್‌ ತೆರೆಯುವ ಆಲೋಚನೆಯೂ ಇದೆ. ಅಭಿಯಾನಕ್ಕೆ ದೇವಸ್ಥಾನಗಳು, ಧಾರ್ಮಿಕ ತಂಡಗಳು, ಭಜನಾ ಸಂಘಗಳು ಕೈಜೋಡಿಸಬೇಕು. ಮಾಹಿತಿಗಾಗಿ ಸಹಾಯವಾಣಿ: 8105356290 ಸಂಪರ್ಕಿಸಬಹುದು ಎಂದು ರಂಜನ್‌ ಬೆಳ್ಳರ್ಪಾಡಿ ತಿಳಿಸಿದರು.