ನರಸಿಂಹರಾಜಪುರಮಲೆನಾಡಿನ ಭಾಗದಲ್ಲಿ ವಾಸವಾಗಿರುವ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯಿಂದ ಹೊಸಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದ್ದು ಇದರ ವಿರುದ್ಧ ನಾಗರಿಕರು ಜಾಗೃತರಾಗದಿದ್ದರೆ ಮಲೆನಾಡು ಉಳಿಯುವುದಿಲ್ಲ ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಆಂತಕ ವ್ಯಕ್ತಪಡಿಸಿದರು.
- ನರಸಿಂಹರಾಜಪುರ ಪಟ್ಟಣದ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಜನ ಜಾಗೃತಿ ಯಾತ್ರೆಯ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಲೆನಾಡಿನ ಭಾಗದಲ್ಲಿ ವಾಸವಾಗಿರುವ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯಿಂದ ಹೊಸಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದ್ದು ಇದರ ವಿರುದ್ಧ ನಾಗರಿಕರು ಜಾಗೃತರಾಗದಿದ್ದರೆ ಮಲೆನಾಡು ಉಳಿಯುವುದಿಲ್ಲ ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಆಂತಕ ವ್ಯಕ್ತಪಡಿಸಿದರು.
ಶನಿವಾರ ಸಂಜೆ ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಆಯೋಜಿಸಿರುವ ಮಲೆನಾಡಿಗರ ಬದುಕು ಉಳಿಸಿ ಜನಜಾಗೃತಿ ಯಾತ್ರೆಯಲ್ಲಿ ಮಾತನಾಡಿದರು.ಮಲೆನಾಡಿನ ಭಾಗದಲ್ಲಿ ರೈತರ ಒತ್ತುವರಿ ತೆರವುಗೊಳಿಸಲು ಸರ್ಕಾರ ಎಸ್ ಐಟಿ ರಚಿಸಿದ್ದು ಒತ್ತುವರಿ ತೆರವುಗೊಂಡರೆ ರೈತರು, ವ್ಯಾಪಾರಸ್ಥರು, ಕಾರ್ಮಿಕರ ಬದುಕು ಉಳಿಯುವುದಿಲ್ಲ. ಸಾಗುವಳಿ ಮಾಡಿದ ಜಮೀನು ಉಳಿದರೆ ಮಾತ್ರ ರೈತರ ಬದುಕು ಉಳಿಯಲಿದೆ. ಇಲ್ಲವಾದಲ್ಲಿ ತಲಾ,ತಲಾಂತರಗಳಿಂದ ಸಾಗುವಳಿ ಮಾಡಿಕೊಂಡ ಜಮೀನು, ಮನೆ,ಮಠ ಬಿಟ್ಟು ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಲಿದೆ. ಭದ್ರಾ ಅಣೆಕಟ್ಟು ನಿರ್ಮಾಣದಿಂದ ಫಲವತ್ತಾದ ಜಮೀನು, ಬದುಕನ್ನು ಕಳೆದುಕೊಂಡ ತಾಲೂಕಿನ ಜನರ ಬದುಕು ಉತ್ತಮವಾಗಿ ರೂಪಿತವಾಗಲು 50 ವರ್ಷಗಳೇ ಬೇಕಾಯಿತು. ಭದ್ರಾ ಅಣೆಕಟ್ಟು ನಿರ್ಮಾಣದಿಂದ ಜಮೀನು ಕಳೆದುಕೊಂಡ ತಾಲೂಕಿನ ಸಾರ್ಯ, ಚೆನ್ನಕೂಡಿಗೆ, ಹೆನ್ನಂಗಿ ಮತ್ತಿತರ ಗ್ರಾಮಗಳಲ್ಲಿ ನೆಲೆ ಕಂಡುಕೊಂಡಿರುವ ನಿರಾಶ್ರಿತರಿಗೆ ಇದುವರೆಗೂ ಪರಿಹಾರ ನೀಡಿಲ್ಲ.
ತಾಲ್ಲೂಕಿನ ಹೆಬ್ಬೆ ಅಭಯಾರಣ್ಯದಲ್ಲಿ ವಾಸವಾಗಿದ್ದ ಜನರನ್ನು ಸ್ಥಳಾಂತರಿಸಲಾಯಿತು. ಅಲ್ಲಿದ್ದ ದೊಡ್ಡ,ದೊಡ್ಡ ಗಾತ್ರದ ಮರಗಳು ಅಭಯಾರಣ್ಯದಿಂದ ಕಾಣೆಯಾಗಿದ್ದು ಇವುಗಳನ್ನು ಲೂಟಿ ಮಾಡಿದ್ದು ಯಾರು ? ಎಂದು ಅರಣ್ಯ ಇಲಾಖೆಯವರು ಉತ್ತರಿಸಲಿ. ಸೆಕ್ಷನ್ 4, ಸೆಕ್ಷನ್ 17, ದಟ್ಟಾರಣ್ಯ,ಮೀಸಲು ಅರಣ್ಯ ಎಂಬ ಹೆಸರಿನಲ್ಲಿ ರೈತರನ್ನು ಹೆದರಿಸುವ ಕೆಲಸವನ್ನು ಅರಣ್ಯ ಇಲಾಖೆಯವರು ಮಾಡುತ್ತಿದ್ದಾರೆ ಎಂದು ದೂರಿದರು.ಪಟ್ಟಣದ ಚಿಕ್ಕಅಗ್ರಹಾರ ನಾಟ ಸಂಗ್ರಹಾಲಯ ಸಮೀಪದ ನಾಗಲಾಪುರ, ಬಾಳೆ ಗ್ರಾಮ ಪಂಚಾಯಿತಿಗೆ ಸೇರಿದ 40 ಎಕರೆ ಗೋಮಾಳ ಜಾಗವನ್ನು ಸೆಕ್ಷನ್ 4 ಮಾಡಿದ್ದಾರೆ. ಭವಿಷ್ಯದಲ್ಲಿ ಜನಸಂಖ್ಯೆ ಹೆಚ್ಚಾದರೆ ಅವರಿಗೆ ವಸತಿ ನೀಡಲು ಜಾಗವಿಲ್ಲ. ಇದರ ವಿರುದ್ಧ ಗ್ರಾಮ ಪಂಚಾಯಿತಿಯವರು ಧ್ವನಿ ಎತ್ತಬೇಕಾಗಿದೆ. ಊರು ಉಳಿಯ ಬೇಕಾದರೆ ಎಲ್ಲರೂ ಒಟ್ಟಾಗಿ ಹೋರಾಡಬೇಕು. ರೈತರಿಲ್ಲದೆ ಯಾವ ಉದ್ಯಮ ಉಳಿಯುವುದಿಲ್ಲ. ತಾಲೂಕಿನ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ತೋಟಕ್ಕೆ ಕಾಡಾನೆಗಳು ಹಿಂಡು, ಹಿಂಡಾಗಿ ಬರುತ್ತಿದ್ದು ತೋಟಕ್ಕೆ ಕೆಲಸಕ್ಕೆ, ನೀರು ಹಾಯಿಸಲು ಹೋದವರು ವಾಪಸ್ಸು ಮನೆಗೆ ಹಿಂತಿರುಗುವ ಭರವಸೆಯಿಲ್ಲ. ಭದ್ರಾ ಅಭಯಾರಣ್ಯದ ಅರಣ್ಯ ಅಧಿಕಾರಿಗಳು ಅಭಯಾರಣ್ಯದಿಂದ ಆನೆಗಳು ಜನವಸತಿ ಪ್ರದೇಶಕ್ಕೆ ಬರುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಂಗಗಳು ತೋಟ ಲೂಟಿ ಮಾಡಿದರೆ ಪರಿಹಾರವಿಲ್ಲ. ಮುಸಿಯ ಲೂಟಿ ಮಾಡಿದರೆ ಪರಿಹಾರವಿದೆ. ಇದು ಯಾವ ರೀತಿ ಕಾನೂನು. ಕೃಷಿ ಮಾಡಿ ಅನ್ನ ಕೊಡುವ ರೈತರಿಗೆ ಜಾಗವಿಲ್ಲವಾಗಿದೆ ಎಂದರು.ತಾಲೂಕು ರೈತ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ದೇವಂತ ಗೌಡ ಮಾತನಾಡಿ, ಅರಣ್ಯ ಇಲಾಖೆ ಕಾಯ್ದೆಗಳು ರೈತರ ಬದುಕನ್ನು ಮೂರಾ ಬಟ್ಟೆ ಮಾಡುತ್ತಿವೆ. ಪಕ್ಷ ಬೇಧ ಮರೆತು ಎಲ್ಲರೂ ಮಾರಕ ಕಾಯ್ದೆಗಳ ವಿರುದ್ಧ ಹೋರಾಟ ಮಾಡಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸಮಿತಿ ಮಾಡುತ್ತಿದೆ ಎಂದರು.
ಸಮಿತಿ ಸದಸ್ಯ ಸಿ.ಎಲ್.ಮನೋಹರ್ ಮಾತನಾಡಿ, ಶಾಸಕಾಂಗಕ್ಕಿಂತ ಅರಣ್ಯ ಇಲಾಖೆ ದೊಡ್ಡದಲ್ಲ. ರಾಜ್ಯದ ಮೂರು ಪಕ್ಷದವರು ಅಧಿಕಾರ ಅನುಭವಿಸಿದ್ದಾರೆ. ಆದರೆ, ಮಲೆನಾಡಿನ ಭಾಗದ ರೈತರ ಸಮಸ್ಯೆ ಪರಿಹರಿಸುತ್ತಿಲ್ಲ. ಅಧಿಕಾರ ದಲ್ಲಿರುವ ರಾಜಕೀಯ ಪಕ್ಷದವರು ರೈತರ ಸಮಸ್ಯೆ ಬಗೆಹರಿಸುವುದು ಬಿಟ್ಟು ರೈತರಿಗೆ ಮರಣ ಶಾಸನ ಬರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ರೈತ ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ ಪುರುಷೋತ್ತಮ್ ಕೂಸಗಲ್, ಸಮಿತಿ ಸದಸ್ಯರಾದ ಸಂದೇಶ್, ಸಚ್ಚಿನ್, ನವೀನ್ ಕಟ್ಟಿನಮನೆ, ರತ್ನಾಕರ್, ವಿವಿಧ ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್, ಆಶೀಶ್ ಕುಮಾರ್, ವೈ.ಎಸ್.ರವಿ. ಶ್ರೀನಾಥ್, ಎನ್.ಡಿ.ಪ್ರಸಾದ್,ಮಂಜುನಾಥ್, ವಾಲ್ಮೀಕಿ ಶ್ರೀನಿವಾಸ್ ಮತ್ತಿತರರಿದ್ದರು.