ಮರ ತೆರವುಗೊಳಿಸಲು ಅರಣ್ಯ ಇಲಾಖೆ ನಿರ್ಲಕ್ಷ್ಯ

| Published : Nov 14 2025, 01:45 AM IST

ಸಾರಾಂಶ

ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಕ್ಕೋಡು ಗೆಂಡೆಹಳ್ಳಿ ರಸ್ತೆಗಳು ಹಾಳಗಿ ಗುಂಡಿ ಬಿದ್ದಿವೆ. ಮರಗಳನ್ನು ತೆರವುಗೊಳಿಸಲು ಅಧಿಕಾರಿಗಳು ಇಲ್ಲಸಲ್ಲದ ಕಾರಣ ಒಡ್ಡಿ ಕಾಲ ಹರಣ ಮಾಡುತ್ತಿದ್ದಾರೆ, ಲೋಕೋಪಯೋಗಿ ಇಲಾಖೆಗೆ ವಹಿಸುವಂತೆ ಆದೇಶ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಗುಂಡಿ ಬಿದ್ದ ಈ ರಸ್ತೆಗಳಲ್ಲಿ ಯಾವುದಾದರೂ ಅನಾಹುತ ಸಂಭವಿಸಿದರೆ ಅರಣ್ಯ ಇಲಾಖೆಯನ್ಮು ನೇರ ಹೊಣೆ ಮಾಡುತ್ತೇನೆ. ಮರ ತೆರವುಗೊಳಿಸಲು ರಸ್ತೆ ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಿದರೆ ಜನ ಪ್ರತಿನಿಧಿಗಳ ಮೇಲೆ ಗೂಬೆ ಕೂರಿಸುತ್ತೀರಾ ಎಂದು ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಬೀಕ್ಕೊಡು, ಗೆಂಡೆಹಳ್ಳಿ, ಚೀಕನಹಳ್ಳಿ ಭಾಗದ ರಸ್ತೆಯ ಎರಡು ಬದಿ ಮರಗಳನ್ನು ತೆರೆವುಗೊಳಿಸಲು ಅರಣ್ಯ ಇಲಾಖೆಯ ನಿರ್ಲಕ್ಷ್ಯತೋರುತ್ತಿರುವುದರಿಂದ ಅಗಲೀಕರಣ ಕಾಮಗಾರಿ ವಿಳಂಬವಾಗಿ ರಸ್ತೆ ಹಾಳಾಗಿ ಗುಂಡಿಬೀಳಲು ಕಾರಣವಾಗಿದೆ ಎಂದು ಶಾಸಕ ಎಚ್ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಪಂಚಾಯತಿ ಸಾಮಾನ್ಯ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಕ್ಕೋಡು ಗೆಂಡೆಹಳ್ಳಿ ರಸ್ತೆಗಳು ಹಾಳಗಿ ಗುಂಡಿ ಬಿದ್ದಿವೆ. ಮರಗಳನ್ನು ತೆರವುಗೊಳಿಸಲು ಅಧಿಕಾರಿಗಳು ಇಲ್ಲಸಲ್ಲದ ಕಾರಣ ಒಡ್ಡಿ ಕಾಲ ಹರಣ ಮಾಡುತ್ತಿದ್ದಾರೆ, ಲೋಕೋಪಯೋಗಿ ಇಲಾಖೆಗೆ ವಹಿಸುವಂತೆ ಆದೇಶ ಮಾಡಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಗುಂಡಿ ಬಿದ್ದ ಈ ರಸ್ತೆಗಳಲ್ಲಿ ಯಾವುದಾದರೂ ಅನಾಹುತ ಸಂಭವಿಸಿದರೆ ಅರಣ್ಯ ಇಲಾಖೆಯನ್ಮು ನೇರ ಹೊಣೆ ಮಾಡುತ್ತೇನೆ. ಮರ ತೆರವುಗೊಳಿಸಲು ರಸ್ತೆ ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಿದರೆ ಜನ ಪ್ರತಿನಿಧಿಗಳ ಮೇಲೆ ಗೂಬೆ ಕೂರಿಸುತ್ತೀರಾ ಎಂದು ಹರಿಹಾಯ್ದರು.

ಅಂಬೇಡ್ಕರ್ ವೃತ್ತದಿಂದ ಹನುಮಂತ ನಗರದವರೆಗೆ ಇರುವ ರಸ್ತೆ ಬದಿಯ ಮರಗಳನ್ನು ತೆರವು, ರಸ್ತೆಯ ಮಧ್ಯ ಭಾಗದಿಂದ ಮೂವತ್ತು ಅಡಿಯ ರಸ್ತೆಯನ್ನು ಅಗಲೀಕರಣ ಮಾಡಲು ಪುರಸಭೆಯ 23 ವಾರ್ಡಿನ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡಿದ್ದರು. ಆದರೆ ಇಲ್ಲಿಯ ಪುರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ತೂಕಡಿಸುತ್ತಿದ್ದಾರೆ. ತಮ್ಮ ಕೈಯಲ್ಲಿ ಆಗದಿದ್ದರೆ ಲೋಕೋಪಯೋಗಿ ಇಲಾಖೆಗೆ ವಹಿಸಬೇಕು. ಇಂದಿನಿಂದಲೇ ಕಾರ್ಯ ಆರಂಭಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಮನೆ ಮನೆಗೆ ನಿರಂತರ ಗಂಗಾಜಲ ಯೋಜನೆ ಉದ್ದೇಶವನ್ನು ವಿಳಂಬಮಾಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಈಗಾಗಲೇ ಜೆಜಿಎಮ್ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದರೂ ಬಿಕ್ಕೋಡು ಭಾಗಗಳಲ್ಲಿ ನೀರಿನ ಟ್ಯಾಂಕನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳು ಪತ್ರ ಬರೆಯುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಬಗ್ಗೆ ಮಾತನಾಡಲು ಬೇಸರವಾಗುತ್ತಿದೆ. ಜನತೆ ಪ್ರತಿನಿತ್ಯ ಅರಣ್ಯ ಇಲಾಖೆ ವಿರುದ್ಧ ಪತ್ರ ಹಿಡಿದು ಆನೆ ಸಮಸ್ಯೆ ಬಗ್ಗೆ ಹರಿಸಲು ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳೆ ನಷ್ಟ, ಪ್ರಾಣ ಹಾನಿಯಾಗುತ್ತಿದೆ. ಇಒ ನಡುವೆ ಇದಕ್ಕೆ ಪರಿಹಾರ ಕೊಡಲು ದಲ್ಲಾಳಿಗಳನ್ನು ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

ರಾತ್ರಿ ಸಮಯದಲ್ಲಿ ಆನೆಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಲು ನಾನೇ ರಾತ್ರಿ ವೇಳೆ ಖುದ್ದು ಭೇಟಿ ನೀಡಿದ್ದೇನೆ. ಅಂತಹ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಗುಂಪು ಕಟ್ಟಿಕೊಂಡು ಏನು ಮಾಡುತ್ತಿದ್ದಾರೆ ಎಂದು ತಿಳಿದಿದೆ, ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡದಿದ್ದರೆ ಇಂತಹ ಅನಾಹುತಗಳು ಆಭವಿಸುವುದು ಸರ್ವೇ ಸಾಮಾನ್ಯವಾಗುತ್ತದೆ, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ಕೆಡಿಪಿ ಸದಸ್ಯ ಬೀಕ್ಕೊಡು ಚೇತನ್ ಮಾತನಾಡಿ ತಾಲೂಕಿನ ಎಲ್ಲಾ ಮದ್ಯದ ಅಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಹಣವನ್ನು ಜನರಿಂದ ವಸೂಲಿ ಮಾಡುತ್ತಿದ್ದು ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ಅಬಕಾರಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರೂ ಇವರು ಮದ್ಯದ ಅಂಗಡಿಗಳ ಪರ ನಿಂತಿದ್ದಾರೆ. ಅಲ್ಲದೆ ಮದ್ಯದ ಅಂಗಡಿಗಳಲ್ಲಿ ಮದ್ಯ ಪ್ರಿಯರಿಗೆ ಯಾವುದೇ ಮೂಲಭೂತ ಸೌಕರ್ಯ ನೀಡುತ್ತಿಲ್ಲ . ಅಬಕಾರಿ ನಿಯಮವನ್ನು ಗಾಳಿಗೆ ತೂರುತಿದ್ದಾರೆ ಎಂದು ಕಿಡಿಕಾರಿದರು.