ಸಾರಾಂಶ
ಬಗರ್ ಹುಕುಂ ಸಾಗುವಳಿ ಮಾಡಿದ ಬಡ ರೈತರಿಗೆ ತೆರವುಗೊಳಿಸಬೇಕೆಂದು ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಮಾಡಿರುವುದನ್ನು ಖಂಡಿಸಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಬಡ ರೈತರು ಬಗರ್ ಹುಕುಂ ಆಗಿ ಸಾಗುವಳಿ ಮಾಡುತ್ತಿದ್ದ ಅರಣ್ಯ ತೆರವು ಗೊಳಿಸಬೇಕು ಎಂದು ಇಲಾಖೆ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ್ದು ಇದನ್ನು ಖಂಡಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಇಲ್ಲಿನ ಅರಣ್ಯ ಇಲಾಖೆ ಮುಂಭಾಗದಲ್ಲಿ ಪ್ರತಿಭಟಿಸಿ ನೋಟಿಸ್ ಸುಟ್ಟುಹಾಕಿ ಅಕ್ರೋಶವನ್ನು ವ್ಯಕ್ತ ಪಡಿಸಿದರು.ಈ ವೇಳೆ ತಾಲೂಕು ಹಸಿರು ಸೇನೆ ಅಧ್ಯಕ್ಷ ಬಸವಾಪುರ ರಂಗನಾಥ್ ಮಾತನಾಡಿ, ಬಡ ರೈತರು ತಮ್ಮ ಜೀವನ ನಿರ್ವಹಣೆಗಾಗಿ ಒಂದು-ಎರಡು ಎಕ್ಕರೆ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡಿದ್ದು ಸರ್ಕಾರದ ಅದೇಶದ ಪ್ರಕಾರ ಮೂರು ಎಕ್ಕರೆ ವರೆಗೂ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿದ ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂಬ ಆದೇಶವಿದ್ದರೂ ಸಹ ಇದನ್ನು ಧಿಕ್ಕರಿಸಿ ಬಡ ರೈತರಿಗೆ ತೊಂದರೆ ನೀಡುತ್ತೀರುವ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಬಡ ರೈತರನ್ನು ಶೋಷಣೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುತ್ತಾ 50-60 ಎಕ್ಕರೆ ಪ್ರದೇಶ ಅಕ್ರಮವಾಗಿ ಸಾಗುವಳಿ ಮಾಡಿದವರನ್ನು ಬಿಟ್ಟು ಸಣ್ಣ ಪ್ರಮಾಣದ ರೈತರುಗಳ ಮೇಲೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ ಎಂದರು.2015ಕ್ಕಿಂತ ಹಿಂದೆ ಸಾಗುವಳಿ ಮಾಡಿದ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸರ್ಕಾರದ ಅದೇಶವೇ ಇದ್ದರೂ ಅಧಿಕಾರಿಗಳು ಬಡ ರೈತರ ಮೇಲೆ ನಡೆಸುತ್ತೀರುವ ದೌರ್ಜನ್ಯ ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಕಾಳೇಶ್, ಸಂತೋಷ್, ಬಸವರಾಜ್, ಸಚೀನ್, ಚನ್ನಬಸಪ್ಪ, ಯೋಗರಾಜ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಇದ್ದರು.