ಸಾರಾಂಶ
ಅಮೀನಗಡ ಸಮೀಪದ ಸೂಳೆಬಾವಿ ಗ್ರಾಮದ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದ ಮೊಸಳೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದು ಆಲಮಟ್ಟಿ ಜಲಾಶಯಕ್ಕೆ ಬಿಡಲಾಯಿತು.
ಕನ್ನಡಪ್ರಭ ವಾರ್ತೆ ಅಮೀನಗಡ
ಸಮೀಪದ ಸೂಳೆಬಾವಿ ಗ್ರಾಮದ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದ ಮೊಸಳೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದು ಆಲಮಟ್ಟಿ ಜಲಾಶಯಕ್ಕೆ ಬಿಡಲಾಯಿತು.ಕೆರೆಯಲ್ಲಿ ದನಕರುಗಳಿಗೆ ನೀರು ಕುಡಿಸಲು ಹೋದ ವ್ಯಕ್ತಿಯೊಬ್ಬರು ಮೊಸಳೆ ಇರುವುದನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಗ್ರಾಮಸ್ಥರು ಇದು ಫೇಕ್ ನ್ಯೂಸ್ ಎಂದು ನಿರ್ಲಕ್ಷಿಸಿದ್ದರು. ಇದಾದ ನಂತರ ಬಹಿರ್ದೆಸೆಗೆ ಹೋದವರು ಪ್ರತ್ಯಕ್ಷ ಕಂಡು ಗ್ರಾಮ ಪಂಚಾಯತಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಗ್ರಾಮ ಪಂಚಾಯತಿ ಸಿಬ್ಬಂದಿ ಮೊಸಳೆ ಇರುವುದನ್ನು ಖಚಿತಪಡಿಸಿಕೊಂಡು, ಸಾರ್ವಜನಿಕರು ಕೆರಯ ಕಡೆ ಹೋಗದಂತೆ ಗ್ರಾಮದಲ್ಲಿ ಡಂಗೂರ ಸಾರಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸೂಳೇಬಾವಿಯ ಕೆರೆಗೆ ಮೊಸಳೆ ಬಂದಿರುವುದು ನಂಬಲಾಗಲಿಲ್ಲ. ಸಮೀಪದಲ್ಲಿ ಯಾವುದೇ ಕೆರೆ, ಹೊಳೆ, ಹಳ್ಳ ಇಲ್ಲ. ಈ ಬಗ್ಗೆ ನಮ್ಮ ಇಲಾಖೆಯ ತಜ್ಞರನ್ನು ವಿಚಾರಿಸಿದಾಗ, ಕೆಲವೊಮ್ಮೆ ಆಹಾರ ಅರಸಿ ಮೊಸಳೆಗಳು ಬರುವುದುಂಟು ಎಂದರು. ವಿಷಯ ತಿಳಿದು ಸ್ಥಳಕ್ಕೆ ಹೋದಾಗ ಮೊಸಳೆ ಮರಿ ಇರೋದು ಖಾತ್ರಿಯಾಯಿತು. ಮೂರು ಅಡಿಯಷ್ಟಿದ್ದ ಮೊಸಳೆ ಮರಿಯನ್ನು ಸಿಬ್ಬಂದಿ ಸೆರೆ ಹಿಡಿದು ಆಲಮಟ್ಟಿ ನದಿಗೆ ಬಿಡಲಾಗೆ ಎಂದು ಅಮೀನಗಡ ಶಿವಶಂಕರ ಬಡಿಗೇರ ತಿಳಿಸಿದ್ದಾರೆ.