ಸಾರಾಂಶ
ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆಂದು ನಡೆಸಲಾದ ಕಾರ್ಯಾಚರಣೆ ವೇಳೆ ಹುಲಿ ರೈತನ ಮೇಲೆ ದಾಳಿ ಮಾಡಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಸರಗೂರು : ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆಂದು ನಡೆಸಲಾದ ಕಾರ್ಯಾಚರಣೆ ವೇಳೆ ಹುಲಿ ರೈತನ ಮೇಲೆ ದಾಳಿ ಮಾಡಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.ಗ್ರಾಮದ ಮಹದೇವ್ ಉ.ಮಾದೇಗೌಡ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕಳೆದ ವಾರದಿಂದ ಹುಲಿ ಕಾಣಿಸಿಕೊಂಡು ಜನರಲ್ಲಿ ಅತಂಕವಾಗಿತ್ತು. ಇದರಿಂದಾಗಿ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.ಅರಣ್ಯ ಇಲಾಖೆ ನಾಲ್ಕೈದು ದಿನಗಳಿಂದ ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಇದಲ್ಲದೆ ಬೋನ್ ಇರಿಸಿತ್ತು. ಗುರುವಾರ ಮತ್ತೆ ಕಾರ್ಯಾಚರಣೆ ನಡೆಸುವಾಗ ಹುಲಿಯು ಗ್ರಾಮದ ಬೋಳೆಗೌಡನಕಟ್ಟೆ ಕೆರೆ ಬಳಿ ಅಹುತಿ ಕುಳಿತಿತ್ತು. ಇದನ್ನ ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಬಳಿ ಯಾರು ಹೋಗದಂತೆ ಎಚ್ಚರಿಕೆ ನೀಡಿದ್ದರು.
ಆದರೆ, ಹುಲಿ ಗಾಬರಿಗೊಂಡು ಕುಮಾರ್ ಎಂಬವರ ತೋಟದ ಕಡೆಗೆ ಓಡಿದ್ದು, ನಂತರ ಮತ್ತೆ ಅಲ್ಲಿಂದ ನುಗು ಅರಣ್ಯದ ಕಡೆಗೆ ಓಡಿ ಹೋಗಿ ಪೊದೆಯಲ್ಲಿ ಅಹುತಿಕೊಂಡು ಕುಳಿತಿತ್ತು.ಹುಲಿ ಸೆರೆಗೆ ಅಭಿಮನ್ಯು, ಭಗೀರಥ ಎಂಬ ಸಾಕಾನೆಗಳನ್ನು ಕರೆಯಿಸಿಕೊಂಡ ಅರಣ್ಯ ಇಲಾಖೆ ಸಾಕಾನೆಯನ್ನು ಪೊದೆ ಬಿಟ್ಟರು. ಇದರಿಂದ ಹೆದರಿದ ಹುಲಿ ಪೊದೆಯಿಂದ ಹೊರ ಬಂದು ಮತ್ತೆ ಕಾಡಿನತ್ತ ಓಡಿತು.
ಆಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್ ಎಂಬವರ ಮೇಲೆ ದಾಳಿ ಮಾಡಿತು.ಇದರಿಂದಾಗಿ ಮಹದೇವ್ ಅವರಿಗೆ ತುಂಬಾ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಕುಸಿದು ಬಿದ್ದರು. ಮುಖ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಎಸಿಎಫ್ ಸತೀಶ್ ಅವರು ತಮ್ಮ ವಾಹನದಲ್ಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ. ಅರಣ್ಯ ಇಲಾಖೆಯ ವಾಹನ ಜಖಂಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ಮಾಡಿಲ್ಲ.
ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಜನರಿಗೆ ಎಚ್ಚರಿಕೆ ಸಂದೇಶ ನೀಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಹುಲಿ ದಾಳಿಯಾದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಸಿಬ್ಬಂದಿಯನ್ನು ಜಮೀನು ಬಿಟ್ಟು ಹೋಗದಂತೆ ತಡೆದು, ಅರಣ್ಯ ಇಲಾಖೆಯ ವಾಹನಗಳನ್ನು ಜಖಂ ಮಾಡಿದರು. ಹೀಗಾಗಿ ಕೆಲ ಕಾಲ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಹುಲಿ ಸೆರೆ ಹಿಡಿಯುವವರೆಗೂ ನಿಮ್ಮನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಮುಖಂಡರು ತಡೆ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೀರಾ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಎಸಿಎಫ್ ಸತೀಶ್, ಆರ್ಎಫ್ಓ ವಿವೇಕ್, ಎಸ್ಟಿಎಫ್ ತಂಡ, ನುಗು ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.