ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಪ್ರಸ್ತುತ ದಿನದಲ್ಲಿ ಅಡಂಬರ, ಅದ್ಧೂರಿ ಬದುಕಿಗೆ ಮಾರು ಹೋಗದೆ ಸರಳತೆಯ ಬದುಕಿನಲ್ಲಿ ಸಾಗಿದರೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬಹುದು. ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಏರಿದಾಗ ಸಮಾಜಕ್ಕೆ ಪೂರಕವಾಗಿ ನಿಲ್ಲಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ವಿಜಯನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸಮಾರಂಭದಲ್ಲಿ ಮಾತನಾಡಿದ ಅನೇಕ ಗಣ್ಯರು ಅಮೂಲ್ಯವಾದ ಸಲಹೆ ನೀಡಿದ್ದಾರೆ. ಅಂತಹವರ ಮಾತುಗಳನ್ನು ಬರೆದು ಇಟ್ಟುಕೊಂಡು ಸದಾ ಮನನ ಮಾಡಬೇಕು. ವಿದ್ಯಾರ್ಥಿಗಳ ಮನಸ್ಸು ಏಕಾಗ್ರತೆಯಿಂದ ಇರಬೇಕು. ತಮ್ಮ ಮನಸ್ಸನ್ನು ಓದು, ಕುಟುಂಬದ ಕಡೆಗೆ ಹರಿಸಬೇಕು. ಮಕ್ಕಳು ಮೊಬೈಲ್ ಗೀಳಿಗೆ ಮಾರು ಹೋಗದೆ ರ್ಯಾಂಕ್ ಪಡೆಯುವ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.ವಿಜಯನಗರ ಕಾಲೇಜಿನ ಮಕ್ಕಳಿಗೆ ಅನುಕೂಲ ಕಲ್ಪಿಸಲು ಮುಂದಿನ ವಾರದಿಂದ ಇಸ್ಕಾನ್ ಸಂಸ್ಥೆಯಿಂದ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು. ಈಗಾಗಲೇ ಸಂಸ್ಥೆಯ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ ಎಂದರು.ವಿಜಯನಗರ ಕಾಲೇಜಿನ ಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯ ನಿರ್ಮಿಸುವಂತೆ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಿದರು. ನೀವು ಕಟ್ಟಡ ಕಟ್ಟಿಸಿಕೊಟ್ಟರೆ, ನಾನು ಊಟದ ವ್ಯವಸ್ಥೆಯ ಜವಾಬ್ದಾರಿ ಹೊರುವೆ ಎಂದು ಅವರು ಭರವಸೆ ನೀಡಿದರು.ಇನ್ಫೋಸಿಸ್ ಸಂಸ್ಥೆ ಉಪಾಧ್ಯಕ್ಷ ವಿನಾಯಕ್ ಪಿ. ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲವು ಉಪಯುಕ್ತ ಸಲಹೆ ನೀಡಿದರು. ಇನ್ಫೋಸಿಸ್ ಸಂಸ್ಥೆಯ ಸುಧೀರ್, ಹೂಟಗಳ್ಳಿ ನಗರಸಭೆ ಆಯುಕ್ತ ಬಿ.ಎನ್. ಚಂದ್ರಶೇಖರ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಡಿ.ಎಸ್. ಪ್ರತಿಮಾ, ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ. ಭದ್ರಗಿರಿಯಯ್ಯ, ನಿವೃತ್ತ ಪ್ರಾಧ್ಯಾಪಕ ಜಿ.ಎಚ್. ಮಹದೇವಸ್ವಾಮಿ, ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ಎಂ.ಎಸ್. ಅನಿತಾ, ವಿವಿಧ ಸಮಿತಿಗಳ ಸಂಚಾಲಕರಾದ ಪ್ರೊ. ರಶ್ಮಿ ಚೆನ್ನಯ್ಯ, ಆನಂದಕುಮಾರ್, ಮೀರಾ ಓಂಕಾರ ಶೆಟ್ಟಿ, ಡಾ.ಎಸ್. ಮೋಹನ್, ಆರ್. ರಶ್ಮಿ, ಡಾ. ನಮ್ರತಾ, ಡಾ. ರಾಜೇಂದ್ರ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಭ್ರಮಾ ಟಿ. ಗೌಡ, ಪಿ. ಹರ್ಷಿತಾ, ಎನ್. ರಶ್ಮಿ, ಲಕ್ಷ್ಮೀ, ಪುಣ್ಯ, ಆರ್. ಮೋನಿಕಾ ಇದ್ದರು.---ಕೋಟ್‌ನಗರದ ಮತ್ತು ಹೊರಗಿನ ಪ್ರದೇಶಗಳ ಅಭಿವೃದ್ಧಿಗೆ ಗ್ರೇಟರ್ ಮೈಸೂರು ರಚಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದೇನೆ. ಕೆಲವರು ಹೇಳುತ್ತಿರುವ ಮಾತಿನಂತೆ ನನ್ನ ಕುಟುಂಬದ, ಸಂಬಂಧಿಕರ ಜಮೀನು ಇಲ್ಲ. ತಮ್ಮ ಜಮೀನು ಇರುವ ಕಾರಣಕ್ಕಾಗಿ ಗ್ರೇಟರ್ ಮೈಸೂರು ರಚನೆಗೆ ಮುಂದಾಗಿದ್ದಾರೆ ಎನ್ನುವುದನ್ನು ಹೇಳಿದಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ.- ಜಿ.ಟಿ. ದೇವೇಗೌಡ, ಶಾಸಕರು.