ಅಸ್ಮಿತೆಗಾಗಿ ಅರಣ್ಯ ಅವಲಂಬಿತ ಸಮುದಾಯಗಳ ಹೋರಾಟ ಸನ್ನಿತ

| Published : Feb 09 2024, 01:48 AM IST

ಸಾರಾಂಶ

ಅರಣ್ಯ ಅವಲಂಬಿತ ಸಮುದಾಯಗಳು ತಮ್ಮ ಅಸ್ಮಿತೆಯ ಉಳಿವಿಗಾಗಿ ಹಾಗೂ ಅರಣ್ಯ ಜಮೀನಿನ ಹಕ್ಕಿಗಾಗಿ ಸಂಘಟಿತ ಹಾಗೂ ವ್ಯಾಪಕ ಹೋರಾಟ ಮಾಡುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಗ್ರಾಮಸಭೆ ಸಬಲಗೊಳಿಸುವ ಅವಶ್ಯಕತೆ ಇದೆ.

ಮುಂಡಗೋಡ:

ಅರಣ್ಯ ಅವಲಂಬಿತ ಸಮುದಾಯಗಳು ತಮ್ಮ ಅಸ್ಮಿತೆಯ ಉಳಿವಿಗಾಗಿ ಹಾಗೂ ಅರಣ್ಯ ಜಮೀನಿನ ಹಕ್ಕಿಗಾಗಿ ಸಂಘಟಿತ ಹಾಗೂ ವ್ಯಾಪಕ ಹೋರಾಟ ಮಾಡುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಗ್ರಾಮಸಭೆ ಸಬಲಗೊಳಿಸುವ ಅವಶ್ಯಕತೆ ಇದೆ ಎಂದು ಆದಿವಾಸಿಗಳ ಹಕ್ಕುಗಳ ಪ್ರತಿಪಾದಕ ಹಾಗೂ ರಾಷ್ಟ್ರೀಯ ಆದಿವಾಸಿ ಒಕ್ಕೂಟದ ರಾಷ್ಟ್ರೀಯ ಸಂಚಾಲಕ ರಾಯ್ ಡೇವಿಡ್ ಹೇಳಿದರು.

ಗುರುವಾರ ಇಲ್ಲಿಯ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕಿನ ಸಮುದಾಯ ಆಧರಿತ ಸಂಘಟನೆಗಳು ಹಾಗೂ ಬುಡಕಟ್ಟು ಮತ್ತು ಪರಿಶಿಷ್ಟ ತಳಸಮುದಾಯಗಳ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಲಾಮೇಳ ಉದ್ಘಾಟಿಸಿ ಮಾತನಾಡಿದರು.ಆದಿವಾಸಿಗಳು ಸಂಘಟಿತರಾಗಿ ಹೋರಾಟದ ಫಲವಾಗಿ ೧೯೯೬ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾನೂನು ಜಾರಿಗೆ ಬಂದಿದ್ದು, ಆದು ಆದಿವಾಸಿ ಜನಾಂಗಕ್ಕೆ ಸಿಕ್ಕ ಒಂದು ಕೊಡುಗೆ. ತಾವು ವಾಸಿಸುವ ಭೂಮಿ ಮತ್ತು ಕಾಡಿನಲ್ಲಿ ಆದಿವಾಸಿಗಳಿಗೆ ಸ್ವಯಂ ಆಡಳಿತ ನಡೆಸಲು ಈ ಕಾನೂನು ಸಹಕಾರಿಯಾಗಿದೆ ಎಂದರು.೨೦೦೬ರಲ್ಲಿ ಹಕ್ಕುಗಳನ್ನು ಕಸಿದುಕೊಂಡು ದಬ್ಬಾಳಿಕೆ, ದೌರ್ಜನ್ಯವೆಸಗುವ ಚಾರಿತ್ರಿಕವಾಗಿ ಮಾಡಿದ ಅನ್ಯಾಯ ಸರಿಪಡಿಸುವುದಕ್ಕಾಗಿಯೇ ಅರಣ್ಯ ಹಕ್ಕು ಕಾಯ್ದೆ ಬಂದಿದೆ. ಈ ಕಾನೂನು ಬಂದು ೧೮ ವರ್ಷ ಕಳೆದರೂ ಇಂದಿಗೂ ಕೂಡ ರಾಜಕೀಯ ಹಾಗೂ ಸರ್ಕಾರಗಳ ನಿಲುವಿನ ಕೊರತೆಯಿಂದ ಕ್ರಮಬದ್ಧವಾಗಿ ಜಾರಿಯಾಗಿಲ್ಲ. ಬಹಳಷ್ಟು ಜನರಿಗೆ ಈ ಕಾನೂನಿನ ಬಗ್ಗೆ ಅರಿವಿಲ್ಲ ಎಂದ ಅವರು, ಭೂಮಿ, ಜಲಚರ, ಅರಣ್ಯ ಉಪಯೋಗಿಸಲು ಹಾಗೂ ನಿಯಂತ್ರಣ ಮಾಡಿ ಸಂರಕ್ಷಿಸುವ ಹಕ್ಕು ಬುಡಕಟ್ಟು ಜನಾಂಗಕ್ಕಿದೆ. ಬಹಳಷ್ಟು ಕಡೆ ಅರಣ್ಯಗಳೆಲ್ಲ ತೋಪುಗಳಾಗಿ ಮಾರ್ಪಟ್ಟಿವೆ. ನಿಜವಾದ ಅರಣ್ಯ ಎಂದರೆ ಅಲ್ಲಿ ಜೀವ ವೈವಿಧ್ಯಗಳಿರಬೇಕು. ಪ್ರಾಣಿ-ಪಕ್ಷಿಗಳು ಇರುತ್ತವೆ, ಅರಣ್ಯ ಸಮೃದ್ಧವಾಗಿರುತ್ತದೆ. ಅರಣ್ಯ ಸಮೃದ್ಧವಾಗಿದ್ದರೆ ಅರಣ್ಯ ಪ್ರದೇಶ ಆದಿವಾಸಿಗಳಿಗೆ ಬದುಕಿನ ಆಧಾರ ಸಿಗುತ್ತದೆ. ಅರಣ್ಯ ಬದಲಾಗಿ ತೋಪುಗಳಾದರೆ ಆದಿವಾಸಿಗಳಿಗೆ ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಕೂಡ ವಾಸಿಸುವುದು ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಆಧುನಿಕ ಜೀವನ ಶೈಲಿಯಿಂದಾಗಿ ನಮ್ಮ ಮೌಲ್ಯ ಕಳೆದುಕೊಳ್ಳದೆ ಗ್ರಾಮಸಭೆಯ ಪರಮಾಧಿಕಾರ ಬಗ್ಗೆ ಅರಿತುಕೊಂಡು ನಮ್ಮ ಪರವಾಗಿರುವ ಶಕ್ತಿಯುತವಾದ ಕಾನೂನು ಮೂಲಕ ಅರಣ್ಯವಾಸಿಗಳೆಲ್ಲ ಒಗ್ಗೂಡಿ ನಮ್ಮ ಹಕ್ಕು ಪಡೆದುಕೊಳ್ಳಬೇಕಿದೆ ಎಂದು ಕರೆ ನೀಡಿದರು.ಲೊಯೋಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮೆಲ್ವಿನ್ ಲೋಬೊ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಅವಿಭಾಜ್ಯ ಅಂಗವಾಗಿದೆ. ಈ ಸಮ್ಮೇಳನ ಕೇವಲ ಒಂದು ಸಮಾರಂಭಕ್ಕೆ ಸೀಮಿತವಾಗದೆ ಬುಡಕಟ್ಟು ಸಮುದಾಯದ ಸಂಸ್ಕೃತಿ ಹಾಗೂ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.ಬುಡಕಟ್ಟು ಮತ್ತು ಪರಿಶಿಷ್ಟ ತಳ ಸಮುದಾಯಗಳ ಸಾಂಸ್ಕೃತಿಕ ಕಲಾಮೇಳದ ತಾಲೂಕು ಸಂಘಟನಾ ಸಮಿತಿ ಅಧ್ಯಕ್ಷ ಸುಭಾಸ ವಡ್ಡರ ಅಧ್ಯಕ್ಷತೆ ವಹಿಸಿದ್ದರು. ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಅನಿಲ ಡಿಸೋಜಾ ಪ್ರಾಸ್ತಾವಿಕ ಮಾತನಾಡಿದರು. ಕಾರ್ಮಿಕ ಇಲಾಖೆ ನಿರ್ದೇಶಕಿ ಅನುರಾಧಾ ಕಾಕತ್ಕರ, ಜಾನಪದ ಕಲಾವಿದೆ ಶಶಿಕಲಾ ಸಿದ್ದಿ, ಬೆಂಗಳೂರ ಆಶಿರ್ವಾದ ಸಂಸ್ಥೆಯ ಅರುಣ ಲೂಯಿಸ್, ಉಪ ವಲಯ ಅರಣ್ಯಾಧಿಕಾರಿ ಅರುಣ ಕಾಶಿ, ಜೆರಾಲ್ಡ್ ಡಿಸೋಜಾ, ಲಕ್ಷ್ಮಣ ಮುಳೆ, ಲೋಕೇಶ ಗೌಡ ಉಪಸ್ಥಿತರಿದ್ದರು.ಬರಮಣ್ಣ ಚಕ್ರಸಾಲಿ ಸ್ವಾಗತಿಸಿದರು. ತೇಜಸ್ವಿನಿ ಸಂವಿಧಾನ ಬೋಧಿಸಿದರು. ಕವಿತಾ ಆಲೂರ ನಿರೂಪಿಸಿದರು. ನಾಗರಾಜ ವಂದಿಸಿದರು.ಸಾಂಸ್ಕೃತಿಕ ಕಲಾಮೇಳದಲ್ಲಿ ತಾಲೂಕಿನ 7 ಸಮುದಾಯಗಳ ೨೩ ಕಲಾ ತಂಡಗಳು ತಮ್ಮ ಅನನ್ಯ ಕಲೆ, ಹಾಡು, ಕುಣಿತ, ಜಾನಪದ ನೃತ್ಯ, ಸಂಸ್ಕೃತಿಯ ಅನಾವರಣಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಕಲಾಮೇಳದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪಾರಂಪರಿಕ ವಿಧಾನದ ಮೂಲಕ ತಯಾರಿಸಿದ ವಿವಿಧ ಕರಕುಶಲ ವಸ್ತು, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಗಮನ ಸೆಳೆದವು.