ಅರಣ್ಯ ಸಚಿವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಬರುವ ಮಾರ್ಚ್ ಅಂತ್ಯದ ವರೆಗೆ ೧,೪೫೦ ಎಕರೆ ಪ್ರದೇಶ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಗೆ ನೀಡಿದ ಮಾನದಂಡದಿಂದ ಅರಣ್ಯವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಅರಣ್ಯ ಸಚಿವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಬರುವ ಮಾರ್ಚ್ ಅಂತ್ಯದ ವರೆಗೆ ೧,೪೫೦ ಎಕರೆ ಪ್ರದೇಶ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಗೆ ನೀಡಿದ ಮಾನದಂಡದಿಂದ ಅರಣ್ಯವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಅರಣ್ಯ ಹಕ್ಕು ಕಾಯಿದೆ ಉಲ್ಲಂಘನೆ ಆಗುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.ತಾಲೂಕಿನ ವೆಂಕಟರಮಣ ದೇವಾಲಯದ ಸಭಾಂಗಣದಲ್ಲಿ ತಾಲೂಕಿನಲ್ಲಿ ಕಾನೂನು ಜಾಗೃತಿ ಜಾಥಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯ ಕ್ಷೇತ್ರ ಒಕ್ಕಲೆಬ್ಬಿಸಿದಾಗ ಮಾತ್ರ ಜಿಲ್ಲೆಯಲ್ಲಿ ಅರಣ್ಯ ಸಚಿವರು ನೀಡಿದ ಟಾರ್ಗೆಟ್ ತಲುಪಲು ಸಿಬ್ಬಂದಿಗೆ ಸಾಧ್ಯ. ಸಚಿವರು ನಿಗದಿಗೊಳಿಸಿದ ೧,೪೫೦ ಎಕರೆ ಪ್ರದೇಶ ಒಕ್ಕಲೆಬ್ಬಿಸಬೇಕಾದಲ್ಲಿ ಅರ್ಜಿ ಪುನರ್ ಪರಿಶೀಲಿಸುವ ಪೂರ್ವದಲ್ಲಿ ಒಕ್ಕಲೆಬ್ಬಿಸುವ ಕಾರ್ಯ ಜರುಗಿದಂತಾಗುತ್ತದೆ. ಇದರಿಂದ ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿ ದೌರ್ಜನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆ ಅರಣ್ಯ ಸಚಿವರ ಆದೇಶವು ಅರಣ್ಯ ಹಕ್ಕು ಕಾಯಿದೆ ಉಲ್ಲಂಘನೆಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ಹೇಳಿಕೆಯಂತೆ ಜಿಲ್ಲೆಯಲ್ಲಿ ಅರಣ್ಯ ಸಿಬ್ಬಂದಿ ಒಕ್ಕಲೆಬ್ಬಿಸಿದ ಅರಣ್ಯವಾಸಿಯ ಹೆಸರು, ಗ್ರಾಮ ಸರ್ವೇ ನಂ., ಆಯಾ ವಲಯದ ಅರಣ್ಯ ಕಚೇರಿಯಲ್ಲಿ ಪ್ರತಿ ತಿಂಗಳು ಪ್ರಕಟಿಸಬೇಕು ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದರು. ಅಲ್ಲದೇ, ಅತಿಕ್ರಮಣ ಮಾಡದೇ ಹಾಗೂ ಅರಣ್ಯವಾಸಿಗಳಿಂದ ಅತಿಕ್ರಮಿಸದೇ ಇರುವ ಕ್ಷೇತ್ರ ಒಕ್ಕಲೆಬ್ಬಿಸಿದ್ದೇವೆ ಎಂದು ಲೆಕ್ಕ ಯಾಂತ್ರಿಕವಾಗಿ ತಯಾರಿಸಿ ಆಟಕ್ಕುಂಟು ಲೆಕ್ಕವಿಲ್ಲದಂತೆ ಅರಣ್ಯ ಸಚಿವರ ಆದೇಶಕ್ಕೆ ಅನುಗುಣವಾಗಿ ಒಕ್ಕಲೆಬ್ಬಿಸುವ ಯಾಂತ್ರಿಕ ಮತ್ತು ಕೃತಕ ಪಟ್ಟಿ ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಯಿಂದ ಸೃಷ್ಟಿಸಲಾಗುತ್ತಿದೆ. ಅರಣ್ಯ ಇಲಾಖೆಯ ಬೋಗಸ್ ಲೆಕ್ಕ ಎಂದು ಆರೋಪಿಸಿದರು.ಚಂದ್ರು ಪೂಜಾರಿ ಮಂಚೀಕೇರಿ, ಭಗಿರಥ ನಾಯ್ಕ ವಜ್ರಳ್ಳಿ, ಮಾಬ್ಲೇಶ್ವರ ಎಂ. ಭಟ್ಟ ಮಾವಿನಮನೆ, ನಾಗರಾಜ ಗಣಪತಿ ಪಟಗಾರ, ಸುಬ್ರಾಯ ಸೀತಾರಾಮ ಹೆಗಡೆ ಆನಗೋಡ, ಸುಬ್ರಾಯ ಎಸ್. ಭಟ್ಟ, ವಿನೋದ ಪೆಡೇಕರ, ಪ್ರಭಾಕರ ನಾಯ್ಕ ಮಾವಿನಕಟ್ಟಾ, ಗಣಪತಿ ನಾಯ್ಕ ಮಾಗೋಡ ಸಲಹೆ ಸೂಚನೆ ನೀಡಿದರು. ರಾಮ ಗಾವಡಿ ಸಹಸ್ರಳ್ಳಿ, ವಿಠ್ಠಲ ಪೂಜಾರಿ, ಕುಮಾರ ಮಿರಾಶಿ ಮದನೂರು, ನರಸಿಂಹ ನಾಯ್ಕ, ರಾಮ ಮನೋಹನ್ ನಾಯಕ್, ಪ್ರೇಮಾನಂದ ಭಂಡಾರಿ, ಯಾಗೇಶ್ ನಾಯ್ಕ ಹೊಂಡಗದ್ದೆ ಮತ್ತಿತರರಿದ್ದರು. ದಿವಾಕರ ಮರಾಠಿ ಆನಗೋಡ ಸ್ವಾಗತಿಸಿದರು.