ಮಾಲಿನ್ಯ ರಹಿತ ಪ್ರಕೃತಿ ಉಳಿಸಲು ವನ ಮಹೋತ್ಸವ: ಗೀತಾ

| Published : Jun 29 2024, 12:34 AM IST

ಮಾಲಿನ್ಯ ರಹಿತ ಪ್ರಕೃತಿ ಉಳಿಸಲು ವನ ಮಹೋತ್ಸವ: ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಸಾತ್ವಿಕ ಸಮಾಜ ನಿರ್ಮಾಣದ ಸಲುವಾಗಿ ರಚಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಮೂಲಕ ಮುಂದಿನ ಪೀಳಿಗೆಗೆ ಮಾಲಿನ್ಯ ರಹಿತ ಪ್ರಕೃತಿ ಉಳಿಸುವ ವನ ಮಹೋತ್ಸವ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದರು.

- ಹೆಗ್ಗಾರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ ಸಹಯೋಗದಲ್ಲಿ ವನ ಮಹೋತ್ಸವ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಾತ್ವಿಕ ಸಮಾಜ ನಿರ್ಮಾಣದ ಸಲುವಾಗಿ ರಚಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಮೂಲಕ ಮುಂದಿನ ಪೀಳಿಗೆಗೆ ಮಾಲಿನ್ಯ ರಹಿತ ಪ್ರಕೃತಿ ಉಳಿಸುವ ವನ ಮಹೋತ್ಸವ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಪ್ರಾದೇಶಿಕ ನಿರ್ದೇಶಕಿ ಗೀತಾ ಹೇಳಿದರು.

ಗುರುವಾರ ಅಗಳಗಂಡಿ ಸಮೀಪದ ಹೆಗ್ಗಾರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವನ ಮಹೋತ್ಸವದಲ್ಲಿ ಮಾತನಾಡಿ, ಈ ಜಗತ್ತಿನಲ್ಲಿ ಹಣ ಕೊಟ್ಟರೆ ಬಹುತೇಕ ಎಲ್ಲವೂ ಸಿಗುತ್ತದೆ, ಆದರೆ ಶುದ್ಧ ಗಾಳಿ ಪರಿಶುದ್ಧ ನೀರು ಮತ್ತು ಮಾಲಿನ್ಯ ರಹಿತ ಪ್ರಕೃತಿಯನ್ನು ದುಡ್ಡು ನೀಡಿ ಕೊಂಡುಕೊಳ್ಳಲಾಗದು. ಪ್ರಕೃತಿ ಉಳಿವಿಗೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಅರಣ್ಯೀ ಕರಣ ಪ್ರತೀ ನಾಗರಿಕನ ಜವಾಬ್ದಾರಿ ಎಂದರು.

ಪೃಕೃತಿ ವಿಕೋಪದ ಸಂಧರ್ಭದಲ್ಲಿ ಸಹಾಯ ಮಾಡುವ ಸಲುವಾಗಿ ೪ ಜಿಲ್ಲೆಗಳ ವ್ಯಾಪ್ತಿಯಲ್ಲಿ ೭೦೦ ಜನ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ ಎಂದರು.

ಆರ್‌ಎಫ್‌ಒ ಅನಿಲ್ ಡಿಸೋಜಾ ಮಾತನಾಡಿ, ಪರಿಸರ ಮಾಲಿನ್ಯದ ಪರಿಣಾಮವಾಗಿ, ಶುದ್ಧನೀರು, ಗಾಳಿ ಸಿಗದಂತಾಗಿದೆ. ಶುದ್ಧ ಪ್ರಾಣವಾಯುಗಾಗಿ ಅರಣ್ಯ ಸಂರಕ್ಷಣೆ ಮಾಡಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಕಿಬ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಅರಣ್ಯೀಕರಣ ನಮ್ಮ ಕರ್ತವ್ಯ ಮಾತ್ರವಲ್ಲ ಅದು ನಾವು ಮಾಡಲೇಬೇಕಾದ ಅನಿವಾರ್ಯ ಕೆಲಸ. ಮಲೆನಾಡಿನ ಈ ಭಾಗಗಳಲ್ಲಿ ಬೇಸಿಗೆಯಲ್ಲಿ ಕುಡಿವ ನೀರನ್ನು ಟ್ಯಾಂಕರ್‌ಗಳಲ್ಲಿ ತರುವ ಪರಿಸ್ಥಿತಿ ಬಂದಿದ್ದು, ಇದಕ್ಕೆ ಮೂಲಕಾರಣ ಈ ಭಾಗದ ನೀರಿನ ಮೂಲಗಳಾದ ಸರಕಲುಗಳಲ್ಲಿ ನೀರು ಬತ್ತಿ ಹೋಗುತ್ತಿರುವುದು. ರಾಜ್ಯದ ಬೇರೆ ಭಾಗಗಳಿಗೆ ಬೋರ್ವೆಲ್‌ಗಳಿಂದ, ಜಲಾಶಯಗಳಿಂದ ನೀರು ಸಿಗುತ್ತದೆ. ಆದರೆ ಈ ಭಾಗದಲ್ಲಿ ಜೀವನಕ್ಕೆ ಮತ್ತು ಕೃಷಿಗೆ ನೀರಿನ ಮೂಲ ಇದೇ ಸರಕಲು, ಹಳ್ಳ, ಹೊಳೆಗಳಾಗಿದ್ದು ಅರಣ್ಯ ಸಂರಕ್ಷಣೆ ನಮ್ಮ ಅನಿವಾರ್ಯವಾಗಿದ್ದು, ಪ್ರತಿಯೊಬ್ಬರು ಅರಣ್ಯ ರಕ್ಷಣೆಯತ್ತ ಹಾಗೂ ಮರಗಳನ್ನು ಬೆಳೆಸುವತ್ತ ಗಮನ ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ೨೫ ಎಕರೆ ಜಾಗದಲ್ಲಿ ಸುಮಾರು ೧೭೦ ಕಾರ್ಯಕರ್ತರು ೨೭೯೦ ಗಿಡಗಳನ್ನು ನೆಟ್ಟರು. ಯೋಜನಾಧಿ ಕಾರಿಗಳಾದ ಶ್ರೀಮೂರ್ತಿ ಶೆಟ್ಟಿ, ಕಿಶೋರ್, ನಾಗರಾಜ್, ಸಾಮಾಜಿಕ ಕಾರ್ಯಕರ್ತ ರಂಜಿತ್ ಶೃಂಗೇರಿ, ಡಿಆರ್‌ಎಫ್‌ಒ ಚಂದ್ರಶೇಖರ ನಾಯ್ಕ್, ಅರಣ್ಯ ರಕ್ಷಕ ಮಹಂತೇಶ್, ಒಕ್ಕೂಟದ ಅದ್ಯಕ್ಷರಾದ ರೂಪಲತಾ, ಸದಾಶಿವ, ಪತ್ರಕರ್ತ ರಮೇಶ್ ಹಾಗೂ ಮೇಲ್ವಿಚಾರಕರು, ಶೌರ್ಯ ವಿಪತ್ತು ಘಟಕದ ಮಾಸ್ಟರ್, ಕ್ಯಾಪ್ಟನ್ ಹಾಗೂ ಸ್ವಯಂಸೇವರು ಇದ್ದರು.