ಅರಣ್ಯ ಸಮಸ್ಯೆ: ಅಧಿವೇಶನದಲ್ಲಿ ಚರ್ಚಿಸಲು ಹೋರಾಟ ಸಮಿತಿ ಆಗ್ರಹ

| Published : Dec 06 2024, 08:57 AM IST

ಅರಣ್ಯ ಸಮಸ್ಯೆ: ಅಧಿವೇಶನದಲ್ಲಿ ಚರ್ಚಿಸಲು ಹೋರಾಟ ಸಮಿತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಡೀಮ್ಡ್ ಫಾರೆಸ್ಟ್ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಚರ್ಚಿಸ ಬೇಕು ಎಂದು ಕಸ್ತೂರಿ ರಂಗನ್ ವರದಿ ಹಾಗೂ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಚರ್ಚಿಸಲು ಅಜೆಂಡಾದಲ್ಲಿ ಸೇರಿಸಬೇಕು । ಹಲವು ವರ್ಷಗಳಿಂದ ಸಮಸ್ಯೆಗಳು ಜೀವಂತ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಡೀಮ್ಡ್ ಫಾರೆಸ್ಟ್ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಚರ್ಚಿಸ ಬೇಕು ಎಂದು ಕಸ್ತೂರಿ ರಂಗನ್ ವರದಿ ಹಾಗೂ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಎಸ್. ವಿಜಯಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ನಗರದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ, ಇದೇ ಡಿಸೆಂಬರ್ 9 ರಿಂದ ಅಧಿವೇಶನ ಆರಂಭವಾಗಲಿದ್ದು, ಉಭಯ ಸದನಗಳಲ್ಲಿ ಈ ವಿಷಯವನ್ನು ಅಜೆಂಡಾದಲ್ಲಿ ಸೇರಿಸಿ ಚರ್ಚಿಸಿ ಸಮಸ್ಯೆ ನಿವಾರಣೆ ಮಾಡಬೇಕೆಂದು ಮುಖಂಡರು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಎಸ್‌. ವಿಜಯಕುಮಾರ್‌ ಮಾತನಾಡಿ, ರಂಗನ್ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ದೃಢೀಕರಣದಲ್ಲಿ ಸ್ಪಷ್ಟಪಡಿಸದೆ ಇರುವುದರಿಂದ ಜನರು ಆತಂಕದಲ್ಲಿದ್ದಾರೆ. ಈ ಬಗ್ಗೆ ಅಧಿಕೃತ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿ ಜನರಿಗೆ ನಂಬಿಕೆ ಬರುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಪ್ರಕಾರ 20,600 ಚದರ ಕಿ.ಮೀ. ಉಪಗ್ರಹ ಆಧಾರಿತ ಸರ್ವೆ ಆಗಿದೆ. ಇದನ್ನು ಭೌತಿಕವಾಗಿ ಸರ್ವೇ ನಡೆಸಿದರೆ ಸುಮಾರು 40,000 ಕ್ಕೂ ಹೆಚ್ಚು ಚದರ ಕಿ.ಮೀ. ಭೂ ಪ್ರದೇಶ ಲಭ್ಯವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಖುದ್ದು ಭೌತಿಕ ಸರ್ವೇ ನಡೆಸಿ ಅರಣ್ಯ ಪ್ರದೇಶ ಹಾಗೂ ವಸತಿ ಪ್ರದೇಶಗಳ ಗಡಿ ಗುರುತಿಸಬೇಕು. ಅಲ್ಲಿಯ ವರೆಗೂ ಕಾಲಾವಕಾಶ ಪಡೆಯಬೇಕೆಂದು ಒತ್ತಾಯಿಸಿದರು.

ಅರಣ್ಯ ಸಚಿವರು ತಮ್ಮ ಹೇಳಿಕೆಯಲ್ಲಿ ವರದಿಯ ಭಾಗವಾಗಿ ಸುಮಾರು 1614 ಚದರ ಕಿ.ಮೀ. ಪ್ರದೇಶವನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ತಂದು ಅರಣ್ಯ ರಕ್ಷಣೆ ಮಾಡಲಾಗುವುದು. ಇದರಲ್ಲಿ ಸುಮಾರು 10500 ಹಳ್ಳಿಗಳು ಬರುತ್ತವೆ ಅವುಗಳಿಗೆ ಕೇಂದ್ರದಿಂದ ಪರಿಹಾರ ಕೇಳಲಾಗುವುದು ಹೇಳಿದ್ದರು. ಈ ಕುರಿತು ಜನರಿಂದ ನಿಖರ ಮಾಹಿತಿ ಪಡೆದು ಕೊಳ್ಳಬೇಕೆಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸುಮಾರು 23,500 ಎಕರೆಗೂ ಹೆಚ್ಚು ಪ್ರದೇಶವನ್ನು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಮಾಡಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿದ್ದು ಇದನ್ನು ಜನರಿಂದ ಮತ್ತು ಜನಪ್ರತಿನಿಧಿಗಳಿಂದ ಮುಚ್ಚಿಟ್ಟು ಯೋಜನೆ ಜಾರಿಗೊಳಿಸುತ್ತಿರುವುದನ್ನು ಖಂಡನೀಯ ಎಂದರು.

ರಾಜ್ಯಾದ್ಯಂತ ಸೆಕ್ಷನ್‌ 4 (1) ಮೀಸಲು ಅರಣ್ಯ ಪ್ರಸ್ತಾವನೆಗಳಲ್ಲಿ ಕೇವಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಸುಮಾರು 238 ಬ್ಲಾಕ್ ಗಳಿದ್ದು ರಾಜ್ಯಾದ್ಯಂತ ಸುಮಾರು 1250 ಕ್ಕೂ ಸಮಸ್ಯೆ ಇತ್ಯರ್ಥಗೊಳ್ಳಲು ಬ್ಲಾಕ್ ಗಳಿವೆ. ಈ ಪೈಕಿ ಶೇ. 70 ಕ್ಕೂ ಹೆಚ್ಚು ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿವೆ. ಕಂದಾಯ, ಗೋಮಾಳ, ಹುಲ್ಲು ಬನ್ನಿಯಂತಹ ಕಂದಾಯ ಇಲಾಖೆ ಭೂಮಿಗಳನ್ನು ಅರಣ್ಯಕ್ಕೆ ಪ್ರಸ್ತಾವನೆ, ಘೋಷಿಸಲಾಗಿದ್ದು ಲಕ್ಷಾಂತರ ಕುಟುಂಬಗಳು ಸಮಸ್ಯೆಯಿಂದ ಬಳಲುತ್ತಿವೆ ಎಂದು ಹೇಳಿದರು.

ಚಿಕ್ಕಮಗಳೂರು ತಾಲೂಕಿನ ಮಸಗಲಿ ಅರಣ್ಯ ವ್ಯಾಪ್ತಿಯಲ್ಲಿರುವ ರೈತರಿಗೆ ಸುಮಾರು 6 ವರ್ಷಗಳ ಹಿಂದೆ ಪುನರ್ ವಸತಿ ಗಾಗಿ ಸರ್ಕಾರ ಜಾಗ ಗುರುತು ಮಾಡಿದ್ದರೂ ಸಹ ಈವರೆಗೆ ಜಾಗ ಅಭಿವೃದ್ಧಿಪಡಿಸಿಲ್ಲ. ಸರ್ಕಾರ ಸರಿಯಾದ ಪ್ಯಾಕೇಜ್ ನೀಡಿ ಸ್ಥಳಾಂತರ ಮಾಡುವಲ್ಲಿ ವಿಫಲವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಸಂಚಾಲಕ ಕೆ.ಕೆ. ರಘು, ಯತೀಶ್, ಮಹೇಶ್, ರಾಧಾ ಸುಂದರೇಶ್ ಹಾಗೂ ಸಮಿತಿಯ ಮುಖಂಡರು ಪಾಲ್ಗೊಂಡಿ ದ್ದರು. ಪ್ರತಿಭಟನೆ ನಂತರ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. 5 ಕೆಸಿಕೆಎಂ 1ಅರಣ್ಯ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿ ಕಸ್ತೂರಿ ರಂಗನ್ ವರದಿ ಹಾಗೂ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ಗಾಂಧಿ ಪ್ರತಿಮೆ ಎದುರು ಗುರುವಾರ ಧರಣಿ ನಡೆಯಿತು.