ಸಾರಾಂಶ
ಮುಂಡರಗಿ:ಮುಂಡರಗಿ ಪುರಸಭೆಗೆ 2024-25ನೇ ಸಾಲಿನ ಆಸ್ತಿ ತೆರಿಗೆ, ನೀರಿನ ತೆರಿಗೆ, ಮಳಿಗೆ ತೆರಿಗೆ, ಉದ್ದಿಮೆ ತೆರಿಗೆ ಸಂಗ್ರಹಿಸಲು ಗುರಿ ನಿಗದಿ ಪಡಿಸಲಾಗಿತ್ತು. ಇಲ್ಲಿನ ಮುಖ್ಯಾಧಿಕಾರಿ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನವಂಬರ್ ಅಂತ್ಯದ ವೇಳೆಗೆ ಸಂಪೂರ್ಣ ತೆರಿಗೆ ವಸೂಲಿ ಮಾಡುವ ಮೂಲಕ ಗುರಿ ತಲುಪಿದ್ದು, ಮುಂಡರಗಿ ಪುರಸಭೆಗೆ ಮಂಗಳವಾರ ಗದಗನಲ್ಲಿ ಜಿಲ್ಲಾಧಿಕಾರಿಗಳಿಂದ ಮುಖ್ಯಾಧಿಕಾರಿಗೆ ಅಭಿನಂದನಾ ಪತ್ರ ದೊರೆತಿದೆ ಎಂದು ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ 2023-24ನೇ ಸಾಲಿನ ₹1.95 ಲಕ್ಷ ತೆರಿಗೆ ಬರುವುದು ಬಾಕಿ ಇತ್ತು. ಜತೆಗೆ 2024-25ನೇ ಸಾಲಿನ ತೆರಿಗೆ ₹1.22 ಕೋಟಿ ಸೇರಿ ಒಟ್ಟು ₹ 1 ಕೋಟಿ 23 ಲಕ್ಷ 95 ಸಾವಿರ ತೆರಿಗೆ ವಸೂಲಾತಿಗೆ ಗುರಿ ನಿಗದಿಪಡಿಸಲಾಗಿತ್ತು. ನಮ್ಮ ಪುರಸಭೆ ಸಿಬ್ಬಂದಿ ಹಣಕಾಸಿನ ವರ್ಷಕ್ಕಿಂತ 6 ತಿಂಗಳ ಮೊದಲೇ ಎಲ್ಲ ತೆರಿಗೆ ಹಣ ವಸೂಲಿ ಮಾಡಿದೆ. ಹೀಗಾಗಿ ತೆರಿಗೆ ಕಟ್ಟಲು ಶ್ರಮಿಸಿದ ನಾಗರಿಕರಿಗೆ ಹಾಗೂ ಸಿಬ್ಬಂದಿಗೆ ಅಭಿನಂದಿಸುವೆ ಎಂದರು.ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಪ್ರತಿ ವರ್ಷ ಶೇ.70 ರಿಂದ 75ರಷ್ಟು ಆಗುತ್ತಿದ್ದ ಕರವಸೂಲಾತಿ ಪ್ರಸ್ತುತ ವರ್ಷ ಪಟ್ಟಣದ ಜನತೆ ಹಾಗೂ ವ್ಯಾಪಾರಸ್ಥರ ಸಹಕಾರದಿಂದ ಮುಂಡರಗಿ ಪುರಸಭೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 100ಕ್ಕೆ 100 ರಷ್ಟು ಕರವಸೂಲಾತಿ ಆಗಿದೆ. ಹೀಗಾಗಿ ಪಟ್ಟಣದ ಅಭಿವೃದ್ಧಿಗೆ ಬರುವ ಎಲ್ಲ ಯೋಜನೆಯ ಅನುದಾನಗಳು 100ಕ್ಕೆ 100ರಷ್ಟು ಬರುತ್ತವೆ. ಇದರಿಂದ ಪಟ್ಟಣದಲ್ಲಿ ವಿವಿಧ ಕಾಮಗಾರಿ ಮಾಡಲು ಸಾಧ್ಯವಾಗುತ್ತದೆ. ಪುರಸಭೆಯೊಂದಿಗೆ ಸಾರ್ವಜನಿಕರ ಸಹಕಾರ ಹೀಗೆ ಇರಬೇಕು ಎಂದರು.
ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಪಟ್ಟಣದ ಎಲ್ಲ 23 ವಾರ್ಡ್‌ಗಳ ಅಭಿವೃದ್ಧಿಗೆ ನಾವು ಸದಾ ಶ್ರಮಿಸುತ್ತಿದ್ದು, ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಮಾಡುವುದಕ್ಕಾಗಿ ಬೇಕಾದ ಅನುದಾನದ ಮಂಜೂರಾತಿಗೆ ಒತ್ತಾಯಿಸುವುದಕ್ಕಾಗಿ ಸಂಬಂಧಪಟ್ಟ ನಿಗಮದ ಅಧ್ಯಕ್ಷರಾಗಿರುವ ವಿನಯ ಕುಲಕರ್ಣಿ ಬಳಿ ಶೀಘ್ರದಲ್ಲಿಯೇ ನಿಯೋಗ ತೆರಳಿ ಒತ್ತಾಯಿಸಲಾಗುವುದು ಎಂದರು.ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಮಾತನಾಡಿ, 2024-25ನೇ ಸಾಲಿನ ಕರವಸೂಲಾತಿ ನಿಗದಿತ ಸಮಯಕ್ಕಿಂತ 6 ತಿಂಗಳ ಮೊದಲೇ ಪೂರ್ಣಗೊಂಡಿರುವುದಕ್ಕೆ ನಮ್ಮ ಆಡಳಿತ ಮಂಡಳಿ ಮತ್ತು ಪಟ್ಟಣದ ಜನತೆ ಹಾಗೂ ವ್ಯಾಪಾರಸ್ಥರು ಕಾರಣರಾಗಿದ್ದಾರೆ. ಹೀಗಾಗಿ ಎಲ್ಲರಿಗೂ ಇಲಾಖೆ ಪರವಾಗಿ ಅಭಿನಂದಿಸುವೆ. 100ಕ್ಕೆ 100 ಕರ ವಸೂಲಾಗುವುದರಿಂದ ಕೇಂದ್ರ ಸರ್ಕಾರದಿಂದ ಬರುವ 15ನೇ ಹಣಕಾಸು ಯೋಜನೆಯ ₹ 5 ಕೋಟಿ ಅನುದಾನ ಹಾಗೂ ರಾಜ್ಯ ಸರ್ಕಾರದಿಂದ ಬರುವ ಎಸ್.ಎಫ್.ಸಿ.ಅನುದಾನ ಸಂಪೂರ್ಣವಾಗಿ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದರಫಿ ಮುಲ್ಲಾ, ಸದಸ್ಯರಾದ ಶಿವಪ್ಪ ಚಿಕ್ಕಣ್ಣವರ, ಪ್ರಕಾಶ ಹಲವಾಗಲಿ, ಪವನ್ ಮೇಟಿ, ಶಿವಾನಂದ ಬಾರಕೇರ ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.