ಅರಣ್ಯ ಜಮೀನು ಒತ್ತುವರಿ ಮುಕ್ತ: ಸಚಿವ ಖಂಡ್ರೆ

| Published : Jul 03 2024, 12:16 AM IST

ಅರಣ್ಯ ಜಮೀನು ಒತ್ತುವರಿ ಮುಕ್ತ: ಸಚಿವ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಏರ್ಪಡಿಸಿ, ವಿವಿಧ ದೇಶಗಳ ತಜ್ಞರ ಸಲಹೆಗಳನ್ನು ಪಡೆದು ಮಾನವ- ಪ್ರಾಣಿ ಸಂಘರ್ಷ ತಡೆಗೆ ಸ್ಪಷ್ಟ ನಿಲುವು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು/ಬಂಟ್ವಾಳ

ಅರಣ್ಯ ಇಲಾಖೆಯ ಮಂಗಳೂರು ವೃತ್ತ (ನಾಲ್ಕು ಜಿಲ್ಲೆಗಳ ವ್ಯಾಪ್ತಿ)ವನ್ನು ‘ಅರಣ್ಯ ಜಮೀನು ಒತ್ತುವರಿ ಮುಕ್ತ’ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಒತ್ತುವರಿಯ ಪ್ರತಿ ಪ್ರಕರಣಗಳನ್ನು ಪತ್ತೆ ಹಚ್ಚಿ ನೋಟಿಸ್‌ ಕಳುಹಿಸಲು, ಕೋರ್ಟ್‌ನಲ್ಲಿರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕ್ರಮ ವಹಿಸುವಂತೆ ಈ ಹಿಂದೆಯೇ ಸೂಚಿಸಿದ್ದೆ. ಅದರಂತೆ ಕಾರ್ಯ ಪ್ರಗತಿ ಆಗುತ್ತಿದೆ ಎಂದು ಹೇಳಿದರು.

150 ಹೆಕ್ಟೇರಲ್ಲಿ ಕಾಂಡ್ಲಾವನ:

ಮಂಗಳೂರು ವೃತ್ತದಲ್ಲಿ 150 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾವನಗಳನ್ನು ನೆಡಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ 10 ಲಕ್ಷ ಕಾಂಡ್ಲಾ ಗಿಡಗಳನ್ನು ನೆಡಲಾಗುವುದು ಎಂದರು.ಸಿಆರ್‌ಝಡ್‌ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಿ, ಕೋರ್ಟ್‌ನಲ್ಲಿ ಬಾಕಿ ಉಳಿದ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಿಸಲು ಸೂಚಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಂಡ್ರೆ ತಿಳಿಸಿದರು.

5 ಕೋಟಿ ಸಸಿ ನಾಟಿ:

ರಾಜ್ಯಾದ್ಯಂತ ಈ ವರ್ಷ 5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಕಳೆದ ವರ್ಷ 5 ಕೋಟಿ ಗುರಿ ಮೀರಿ 5.43 ಕೋಟಿ ಗಿಡಗಳನ್ನು ನೆಡಲಾಗಿತ್ತು. ಈ ಎಲ್ಲ ಗಿಡಗಳ ನಿರ್ವಹಣೆ ಆಗಬೇಕಿದೆ. ಅದಕ್ಕಾಗಿ ಹೆಚ್ಚುವರಿ 100 ಕೋಟಿ ರು. ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.ಮಾನವ- ಪ್ರಾಣಿ ಸಂಘರ್ಷ ತಡೆ: ಮಾನವ- ಪ್ರಾಣಿ ಸಂಘರ್ಷದಿಂದ ಕಳೆದ ವರ್ಷ ರಾಜ್ಯದಲ್ಲಿ 64 ಸಾವು ಸಂಭವಿಸಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಇದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಏರ್ಪಡಿಸಿ, ವಿವಿಧ ದೇಶಗಳ ತಜ್ಞರ ಸಲಹೆಗಳನ್ನು ಪಡೆದು ಮಾನವ- ಪ್ರಾಣಿ ಸಂಘರ್ಷ ತಡೆಗೆ ಸ್ಪಷ್ಟ ನಿಲುವು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.ಕಳೆದ ವರ್ಷ ರಾಜ್ಯದ 5 ಪಟ್ಟಣಗಳನ್ನು ಏಕಬಳಕೆ ಪ್ಲಾಸ್ಟಿಕ್‌ ಮುಕ್ತ ಮಾಡುವ ಘೋಷಣೆ ಮಾಡಲಾಗಿತ್ತು. ಅದರಂತೆ ಬಹಳಷ್ಟು ಕ್ರಮ ಕೈಗೊಳ್ಳಲಾಗಿದೆ. ಆದರೂ ಪ್ಲಾಸ್ಟಿಕ್‌ ಮುಕ್ತ ಆಗಿಲ್ಲ. ಈ ಬಗ್ಗೆ ಜನಜಾಗೃತಿ ಬೇಕಿದೆ. ಸಿಬ್ಬಂದಿ ಕೊರತೆ ನೀಗಿಸಿ ಯುದ್ಧೋಪಾದಿಯಲ್ಲಿ ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಇದ್ದರು.