ಸಾರಾಂಶ
ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳು ನಡೆಸಿದ ಅಕ್ಷರ, ಅನ್ನ ದಾಸೋಹ ಕಾರ್ಯ ಮಾದರಿಯಾಗಿದೆ. ಇಂತಹ ಅನೇಕ ಸಂತರು, ಸ್ವಾಮೀಜಿಗಳು, ಮಠಗಳಿಂದ ಸಮಾಜದಲ್ಲಿ ಧನಾತ್ಮಕ ಪರಿವರ್ತನೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳು ನಡೆಸಿದ ಅಕ್ಷರ, ಅನ್ನ ದಾಸೋಹ ಕಾರ್ಯ ಮಾದರಿಯಾಗಿದೆ. ಇಂತಹ ಅನೇಕ ಸಂತರು, ಸ್ವಾಮೀಜಿಗಳು, ಮಠಗಳಿಂದ ಸಮಾಜದಲ್ಲಿ ಧನಾತ್ಮಕ ಪರಿವರ್ತನೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗುರುವಾರ ನಗರದಲ್ಲಿ ಆಯೋಜಿಸಿದ್ದ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ನವಭಾರತ ನಿರ್ಮಾಣದಲ್ಲಿ ಲಿಂಗಾಯತ ಮಠಗಳ ಕೊಡುಗೆ ದೊಡ್ಡದಿದೆ. ಭಾಲ್ಕಿ ಮಠ, ಸಿದ್ದಗಂಗಾ ಮಠ ಮತ್ತು ಸತ್ತೂರು ಮಠ ಸೇರಿದಂತೆ ಹಲವು ಮಠಗಳು ದಾಸೋಹಕ್ಕೆ ಆದ್ಯತೆ ನೀಡಿವೆ ಎಂದರು.ಸುತ್ತೂರು ಶ್ರೀಗಳು ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ದೇಶ- ವಿದೇಶಗಳಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ತೆರೆದು ಕ್ರಾಂತಿ ಮಾಡಿದ್ದಾರೆ. ಬಡಮಕ್ಕಳ ಕಲಿಕೆಗೆ ಮನ್ನಣೆ ನೀಡಿದ್ದಾರೆ. ಇಂತಹ ಮಹಾನ್ ಸಾಧಕರು, ಜ್ಞಾನಿಗಳ ಸೇವೆ ಸ್ಮರಣೀಯ ಎಂದರು.
ಮನುಷ್ಯರ ಸ್ವಯಂಕೃತ ತಪ್ಪುಗಳಿಂದಾಗುತ್ತಿರುವ ಅನಾಹುತಗಳ ಬಗ್ಗೆ ಎಚ್ಚರದಿಂದ ಇರಬೇಕು. ತಾಪಮಾನ ಹೆಚ್ಚಳ ನಿಯಂತ್ರಿಸಲು ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಬೇಕು. ಪಿಒಪಿ ಗಣಪತಿ ಮೂರ್ತಿ ನೀರಿನಲ್ಲಿ ಕರಗುವುದಿಲ್ಲ. ಬಣ್ಣದಿಂದ ಮೂರ್ತಿಗಳು ನೀರು ಕಲುಷಿತವಾಗುತ್ತದೆ. ಹೀಗಾಗಿ, ಪರಿಸರ ಪ್ರೇಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಎಂದು ಸಚಿವರು ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವು ಮನುವಾದಿಗಳು ಬಸವಣ್ಣನವರ ವಚನಗಳಿಗೆ ಅಪಚಾರ ಎಸಗುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಲಿಂಗಾಯಿತ ಸಮುದಾಯ ಎಚ್ಚರಗೊಳ್ಳುವ ಅಗತ್ಯವಿದೆ ಎಂದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಾತನಾಡಿ, ಸುತ್ತೂರು ಕ್ಷೇತ್ರ ಭಾರತ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ. ದೇಶ ವಿದೇಶಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕಾಗಿದೆ. ಈ ಎಲ್ಲ ಬೆಳವಣಿಗೆಗಳ ಪ್ರೇರಕ ಶಕ್ತಿ ಶಿವರಾತ್ರಿ ರಾಜೇಂದ್ರ ಶ್ರೀಗಳಾಗಿದ್ದಾರೆ ಎಂದರು. ಶ್ರೀ ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದಶ್ರೀ, ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಲ್. ರೇವಣ್ಣಸಿದ್ದಯ್ಯ ಹಾಜರಿದ್ದರು.