ವಿವಿಧೆಡೆ ಪರಿಸರ ಸ್ನೇಹಿ ಟೂರಿಸಂ ಯೋಜನೆಗೆ ನಿರ್ದೇಶನ

| Published : Feb 07 2024, 01:50 AM IST

ವಿವಿಧೆಡೆ ಪರಿಸರ ಸ್ನೇಹಿ ಟೂರಿಸಂ ಯೋಜನೆಗೆ ನಿರ್ದೇಶನ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಸಚಿವನಾದ ಬಳಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 5. 6 ಕೋಟಿ ಸಸಿಗಳನ್ನು ನಾಟಿ ಮಾಡಿದ್ದೇವೆ. ಈ ಮೂಲಕ ಹಸಿರು ವ್ಯಾಪ್ತಿ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪರಿಸರ, ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಅರಣ್ಯ ಇಲಾಖೆಯ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರದ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಭೇಟಿ ನೀಡಿದ ಸಚಿವರಿಗೆ ಅರಣ್ಯ ಇಲಾಖೆ ವತಿಯಿಂದ ಅರಣ್ಯಕ್ಕೆ ಬೀಳುವ ಬೆಂಕಿ ನಂದಿಸುವ ಬಗೆಗಿನ ಮುಂಜಾಗ್ರತಾ ಕ್ರಮ ಹಾಗೂ ಬೆಂಕಿ ನಂದಿಸಲು ಕೈಗೊಂಡ ಕ್ರಮ ಹಾಗೂ ಬೆಂಕಿ ನಂದಿಸುವ ಬಗೆಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಬಳಿಕ ಅಗ್ನಿಶಾಮಕ ದಳದ ವತಿಯಿಂದಲೂ ಬೆಂಕಿ ನಂದಿಸುವ ಬಗೆಗೆ ವಿವಿಧ ಮಾದರಿಯ ಕಾರ್ಯಾಚರಣೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಸಚಿವರು ಅಧಿಕಾರಿಗಳ ಜೊತೆ ಈ ವೇಳೆ ಚರ್ಚಿಸಿ ಪೂರಕ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದರು.

ಕುಮಾರಪರ್ವತ ಪ್ರವೇಶ ದ್ವಾರಕ್ಕೆ ಭೇಟಿ: ಕುಮಾರ ಪರ್ವತ ಚಾರಣ ಕೈಗೊಳ್ಳುವ ಸುಬ್ರಹ್ಮಣ್ಯ ಸಮೀಪದ ದೇವರಗದ್ದೆಯ ಕುಮಾರಪರ್ವತ ಪ್ರವೇಶ ದ್ವಾರದ ಅರಣ್ಯ ಚೆಕ್ ಪೋಸ್ಟ್ ಗೆ ಭೇಟಿ ನೀಡಿದರು. ಅಲ್ಲಿ ಕೆಲ ದಿನಗಳ ಹಿಂದೆ ಚಾರಣಕ್ಕೆ ಸಂಬಂಧಿಸಿದಂತೆ ಉಂಟಾದ ದಟ್ಟಣೆ ಬಗ್ಗೆ ಮಾಹಿತಿ ಪಡೆದು ಕಾರಣಗಳನ್ನು ಅಧಿಕಾರಿಗಳಿಂದ ಪಡೆದರು. ಬಳಿಕ ಚೆಕ್ ಪೋಸ್ಟ್ ಹಾಗೂ ಪರಿಸರವನ್ನು ಸಚಿವರು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.ಪರಿಸರ ಸ್ನೇಹಿ ಚಾರಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕುಮಾರಪರ್ವತ ಸೇರಿದಂತೆ ಚಾರಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಮುಂದಿನ ಅವಧಿಯಿಂದ ಕುಮಾರಪರ್ವತ ಚಾರಣ ಕೈಗೊಳ್ಳಲು ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಚಾರಣ ಸಂದರ್ಭ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಗಮನ ಹರಿಸಬೇಕು. ಈ ಬಗ್ಗೆ ಸಿಬ್ಬಂದಿಗಳಿಂದ ವರದಿ ಪಡೆಯಬೇಕು. ಚಾರಣಕ್ಕೆ ದಟ್ಟಣೆ ಉಂಟಾಗದ ರೀತಿಯಲ್ಲಿ ನಿಗದಿತ ಸಂಖ್ಯೆಗೆ ಸೀಮಿತಗೊಳಿಸಲು ಕ್ರಮಕೈಗೊಳ್ಳುವಂತೆಯೂ ನಿರ್ದೇಶಿಸಿದರು. ಬಳಿಕ ಅಲ್ಲಿನ ಸಿಬ್ಬಂದಿ ಅಹವಾಲು ಪಡೆದು ಸ್ಥಳೀಯ ಪ್ರಮುಖರು ಸಲಹೆ ಸೂಚನೆಗಳನ್ನು ನೀಡಿದರು. ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಲನ್, ಡಿಸಿಎಫ್ ಅಂತೋಣಿ ಮರಿಯಪ್ಪ, ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿಗಳಾದ ವಿಮಲ್ ಬಾಬು, ಮಂಜುನಾಥ್, ಗಿರೀಶ್, ಪ್ರಮುಖರಾದ ಜಿ.ಕೃಷ್ಣಪ್ಪ, ರಕ್ಷಿತ್ ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.5.6 ಕೋಟಿ ಸಸಿಗಳ ನಾಟಿ: ನಾನು ಸಚಿವನಾದ ಬಳಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 5. 6 ಕೋಟಿ ಸಸಿಗಳನ್ನು ನಾಟಿ ಮಾಡಿದ್ದೇವೆ. ಈ ಮೂಲಕ ಹಸಿರು ವ್ಯಾಪ್ತಿ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪರಿಸರ, ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಅವರು ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ಗೆ ಭೇಟಿ ನೀಡಿದ ಸಂದರ್ಶನದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಅರಣ್ಯ ಜಮೀನು ಒತ್ತುವರಿ ಆಗಿತ್ತು ಅಂತಹ ಎರಡು ಸಾವಿರ ಎಕ್ರೆ ಜಮೀನು ಒತ್ತುವರಿ ತೆರವುಗೊಳಿಸಿದ್ದೇವೆ. 35 ಸಾವಿರ ಎಕ್ರೆ ಅರಣ್ಯ ಮೀಸಲು ಅರಣ್ಯ ಎಂದು ಘೋಷಿಸಿದ್ದೇವೆ. ಮಾನವ ಪ್ರಾಣಿ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳುವ ಕೆಲಸ ಮಾಡುತ್ತಿದ್ದೇವೆ. ಮಾಲಿನ್ಯ ತಡೆಗೂ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಅರಣ್ಯ ಇಲಾಖೆಯಲ್ಲಿ ಪಾರದರ್ಶಕತೆ ತಂದಿದ್ದೇವೆ. ಇಲಾಖೆಯಲ್ಲಿ ಖಾಲಿ ಇದ್ದಂತಹ ಹುದ್ದೆ ಭರ್ತಿಗೆ ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಪರಿಸರ ಸಂಪತ್ತು ರಕ್ಷಣೆಗೆ ಮುಂತಾದ ಕೆಲಸಗಳು ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.