ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಮಲೆನಾಡು ಭಾಗದಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಮಾನವ - ಪ್ರಾಣಿ ಸಂಘರ್ಷ ನಡೆಯುತ್ತಿದ್ದು, ಪ್ರಾಣಹಾನಿ ಜೊತೆಗೆ ಕೋಟ್ಯಂತರ ರುಪಾಯಿ ಬೆಳೆ ನಷ್ಟವಾಗಿದೆ. ಆನೆಗಳ ಸಮಸ್ಯೆಗೆ ಅರಣ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ. ಅರಣ್ಯ ಅಧಿಕಾರಿಗಳು ಸರ್ಕಾರಕ್ಕೆ ಅವೈಜ್ಞಾನಿಕ ವರದಿ ನೀಡುತ್ತಿದ್ದಾರೆ. ಜಿಲ್ಲಾ ಮಂತ್ರಿಗಳು ಹಾಗೂ ಜಿಲ್ಲಾಡಳಿತ ಸಮಸ್ಯೆ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಕಾಫಿ ಬೆಳೆಗಾರರು ಹಾಗೂ ರೈತರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ಪಟ್ಟಣದ ಜೆಪಿ ನಗರ ಕಾಫಿಕುಟೀರದಲ್ಲಿ ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಕಾಡಾನೆ ಸಮಸ್ಯೆ ಬಗ್ಗೆ ಕರೆಯಲಾದ ಸಭೆಯಲ್ಲಿ ರೈತ ಸಂಘ, ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ, ಭೂಮಿಪುತ್ರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಮುಖಂಡರು, ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿಕಾರಿದರು. ಬಳಿಕ ಮಾತನಾಡಿದ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ನಮ್ಮದು ಕಲ್ಲು ಹೃದಯವಲ್ಲ, ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಕೊನೆಗಾಣಿಸಲು ಸೂಕ್ತ ಸಲಹೆ ಮತ್ತು ಸೂಚನೆ ನೀಡಿದರೆ ಖಂಡಿತ ಸರ್ಕಾರಕ್ಕೆ ವರದಿ ಕಳಿಸಲಾಗುತ್ತದೆ ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ನಾನು ಶಾಸಕನಾದ ದಿನದಿಂದಲೂ ತಾಲೂಕಿನ ಮಲೆನಾಡು ಭಾಗದ ಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ನೀಡಬೇಕು ಎಂದು ೧೨೦ ಬಾರಿ ಪತ್ರ ಬರೆದು ಅರಣ್ಯ ಮಂತ್ರಿಗಳನ್ನು ಖುದ್ದು ಭೇಟಿ ನಡೆಸಿದರೂ ಸರ್ಕಾರ ಸ್ಪಂದನೆ ನೀಡಿಲ್ಲ, ಮುಂದಿನ ತಿಂಗಳ ಬಜೆಟ್ ಮೇಲಿನ ಅಧಿವೇಶದಲ್ಲಿ ಕಾಡಾನೆ ಬಗ್ಗೆ ಚರ್ಚೆ ನಡೆಸುವೆ. ಈಗಾಗಲೇ ಮಲೆನಾಡು ಭಾಗದ ಸಾವಿರಾರು ರೈತರು ಬೆಂಗಳೂರು ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಹನ್ ಕುಮಾರ್, ಮೋಹನ್, ಷರೀಫ್, ಯತೀಶ್, ತಹಸೀಲ್ದಾರ್ ಮಮತ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್, ರೈತ ಸಂಘದ ರಾಜೇಗೌಡ, ರೈತ ಸಂಘದ ಬೋಗಮಲ್ಲೇಶ್, ಸ್ವಾಮಿಗೌಡ, ಸುರೇಂದ್ರ, ಹಳಸೆ ಶಿವಣ್ಣ, ಬಸವರಾಜು, ಲೋಹಿತ್, ಕುಮಾರ್, ಸುಂಜು, ವೆಂಕಟೇಶ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.