ಸಾರಾಂಶ
ಸತೀಶ ಸಿ.ಎಸ್.
ರಟ್ಟೀಹಳ್ಳಿ: ತಾಲೂಕಿನ ಕಣವಿದ್ಗೇರಿ ಗ್ರಾಮದ ರೈತನೋರ್ವನನ್ನು ಚಿರತೆ ಬಲಿ ಪಡೆದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಎರಡು ದಿನಗಳಿಂದ ಹಗಲು ರಾತ್ರಿ ಗಸ್ತು ತಿರುಗುತ್ತಿದ್ದರೂ ಪ್ರಯೋಜನವಾಗದ್ದರಿಂದ ಗ್ರಾಮಸ್ಥರಿಗೂ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ತಲೆನೋವಾಗಿ ಪರಣಮಿಸಿದೆ.ಇತ್ತೀಚಿಗೆ ಶುಕ್ರವಾರ ತಡರಾತ್ರಿ 11.30 ರ ಸಮಯದಲ್ಲಿ ಮೆಕ್ಕೆಜೋಳಕ್ಕೆ ನೀರು ಹಾಯಿಸಲು ಹೋದಂತ ಸಂದರ್ಭದಲ್ಲಿ ಸಹೋದರರಿಬ್ಬರು ಚಿರತೆ ದಾಳಿಗೆ ಒಳಗಾಗಿ ತಮ್ಮ ಬೀರಪ್ಪ ಹನಮಂತಪ್ಪ ಬಳಗಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಣ್ಣ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಧ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಸೆರೆ ಹಿಡಿಯಲು 30ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡ ರಚನೆ ಮಾಡಿ ಹಗಲು ರಾತ್ರಿ ಗಸ್ತು ಹೆಚ್ಚಿಸಲಾಗಿದೆ, ಚಿರತೆ ಓಡಾಡುವ ಸ್ಥಳಗಳನ್ನು ಗುರುತಿಸಿ 5 ಬೋನ್‍ಗಳನ್ನು ಇರಿಸಲಾಗಿದೆ. ಆದರೂ ಎಲ್ಲರನ್ನೂ ಕಣ್ತಪ್ಪಿಸಿ ಕಳ್ಳಾಟವಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ ಚಿರತೆ ಗ್ರಾಮಕ್ಕೆ ನುಗ್ಗಿ ನಾಯಿಗಳನ್ನು ಎಳೆದೊಯ್ದಿದೆ. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದ ಚಿರತೆ ಓಡಾಟದ ಸ್ಥಳಗಳ ಗುರುತು ಪತ್ತೆ ಹಚ್ಚಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಶತಾಯ ಗತಾಯ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದರೂ ವಿಫಲರಾಗುತ್ತಿರುವುದರಿಂದ ಮತ್ತೊಂದು ಹೆಜ್ಜೆ ಮುಂದಿಟ್ಟು ಡ್ರೋನ್ ಕ್ಯಾಮೆರಾಗಳನ್ನು ಬಿಟ್ಟು ಚಿರತೆ ಓಡಾಟದ ಬಗ್ಗೆ ಸುಳಿವು ಪತ್ತೆ ಹಚ್ಚುತ್ತಿದ್ದಾರೆ. ಕಳೆದ 8 ದಿನಗಳ ಹಿಂದೆ ವ್ಯಕ್ತಿಯೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಎರಡು ಚಿರತೆಗಳು ಇರುವುದು ಪತ್ತೆಯಾಗಿದ್ದು, ಗ್ರಾಮದ ತುಂಗಾ ಮೇಲ್ದಂಡೆಯ ಮುಖ್ಯ ಕಾಲುವೆ, ಪಕ್ಕದಲ್ಲೇ ಇರುವಂತ ನೀರಾವರಿ ಜಮೀನುಗಳಲ್ಲಿ, ದತ್ತಪ್ಪ ಕೆರೆ ಬಳಿ ಚಿರತೆ ಓಡಾಟದ ಕುರುಹುಗಳು ಕಂಡು ಬಂದಿದೆ ಹಾಗೂ ಗ್ರಾಮದ ಹೊರ ವಲಯದ ಮನೆಯಲ್ಲಿರುವ ನಾಯಿಗಳನ್ನು ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಭಯಬೀತರಾದ ಗ್ರಾಮಸ್ಥರು: ಹೆಚ್ಚು ಕೃಷಿಯನ್ನೇ ಅವಲಂಬಿಸಿರುವ ಗ್ರಾಮಸ್ಥರು ಕೃಷಿ ಚಟುವಟಿಕೆ ನಡೆಸಲು ಹೊಲಗಳಿಗೆ ತೆರಳಲು ಭಯದಿಂದಲೇ ಕಾಲಕಳೆಯುವಂತಾಗಿದೆ ಎಂದು ಗ್ರಾಮದ ರೈತ ಬೀರಪ್ಪ ಕರಡೆಣ್ಣನವರ ಆತಂಕವನ್ನು ವ್ಯಕ್ತ ಪಡಿಸುತ್ತಾರೆ, ಚಿರತೆ ಸೆರೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಸಹಕರಿಸುತ್ತಿದ್ದು ಅವರಿಗೆ ಊಟ ಉಪಚಾರವನ್ನು ಹಾಗೂ ಎಲ್ಲ ರೀತಿಯಲ್ಲೂ ಸಹಕರಿಸುತ್ತಿದ್ದಾರೆ ಎಂದು ಚಿರತೆ ಸೆರೆ ಹಿಡಿಯಲು ನಿಯೋಜನೆಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಸಂತಸ ವ್ಯಕ್ತ ಪಡಿಸಿದರು. 2018ರಲ್ಲಿ ಕಡೂರ ಗ್ರಾಮದ ಫಕೀರಪ್ಪ ಕಾಗೇರ ಎಂಬುವವರ ಮೇಲೆ ಚಿರತೆ ದಾಳಿ ಮಾಡಿ ತೀವ್ರ ಗಾಯಗೊಳಿಸಿತ್ತು, ಶಂಕರಗೌಡ ಶಿರಗಂಬಿ ಎಂಬುವವರು ಜಮೀನಿನ ಮನೆಯಲ್ಲಿ ಮಲಗಿದ್ದಾಗ ದಾಳಿ ಮಾಡಿತ್ತು. 2021ರಲ್ಲಿ ಬುಳ್ಳಾಪುರ ಗ್ರಾಮದ ಗದಿಗೆಪ್ಪ ಯಳವಳ್ಳಿ ಎಂಬುವರು ನೀರು ಹಾಯಿಸಲು ಹೋದಾಗ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. 2024ರಂದು ರಟ್ಟೀಹಳ್ಳಿ ಪಟ್ಟಣದ ಹೊರ ವಲಯದ ಶಿರಗಂಬಿ, ಯಲಿವಾಳಗಳಲ್ಲಿ ಚಿರತೆ ನಾಯಿ, ಕುರಿಗಳ ಮೇಲೆ ದಾಳಿ ಮಾಡಿತ್ತು. ಆದರೆ ಮೊದಲನೆ ಬಾರಿ ಮನುಷ್ಯನ ಪ್ರಾಣ ತೆಗೆದು ರಕ್ತದ ರುಚಿ ಕಂಡ ಚಿರತೆ ಹಿಡಿಯುವ ಚಾಲೆಂಜ್ ಅರಣ್ಯ ಇಲಾಖೆಗೆ ಒದಗಿ ಬಂದಿದೆ.
ಗ್ರಾಮಸ್ಥರಿಂದ ಮಾಹಿತಿ ಪಡೆದು ಬೋನ್‍ಗಳನ್ನು ಅಳವಡಿಸಿದ್ದು, ಆದಷ್ಟು ಬೇಗ ಸೆರೆ ಹಿಡಿಯುವ ವಿಶ್ವಾಸವಿದೆ ಹಾಗೂ ಕಣವಿಸಿದ್ದೇಶ್ವರ ದೇವಸ್ಥಾನದಲ್ಲಿರುವ ನಾಗಾ ಸಾಧುವಿನ ಆಶೀರ್ವಾದ ಪಡೆಯಲು ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಚಿರತೆ ಹಾವಳಿ ಇರುವ ಕಾರಣ ಸಂಜೆ ಸಮಯದಲ್ಲಿ ಯಾರು ಬರದಿರಲು ಮನವಿ ಮಾಡಿದರು ಎಂದು ಗ್ರಾಮಸ್ಥ ಫಕೀರೇಶ ತುಮ್ಮಿನಕಟ್ಟಿ ಹೇಳಿದರು.ಚಿರತೆಯ ಚಲನವಲನ ಪತ್ತೆಯಾಗಿದ್ದು, ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಮನೆಯ ಹೊರಗೆ ಮಲಗಬಾರದು. ಸಣ್ಣ ಪುಟ್ಟ ಮಕ್ಕಳ ಬಗ್ಗೆ ಜಾಗೃತಿ ವಹಿಸುವಂತೆ ಮನವಿ ಮಾಡಿದ್ದು, ಈಗಾಗಲೇ ಇರಿಸಿದ್ದ ಬೋನ್ ಜಾಗದ ಪಕ್ಕದಲ್ಲೇ ಚಿರತೆ ಓಡಾಡಿದ ಗುರುತು ಪತ್ತೆಯಾಗಿದ್ದು, ಹಾಗಾಗಿ ಬೋನ್‍ಗಳ ಜಾಗಗಳನ್ನು ಬದಲಿಸಿದ್ದು, ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆದಷ್ಟು ಬೇಗ ಚಿರತೆ ಸೆರೆಹಿಡಿಯಲಾಗುವುದು ಎಂದು ಹಿರೇಕೆರೂರು, ರಟ್ಟೀಹಳ್ಳಿ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಹೇಳಿದರು.