ಅರಣ್ಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲಿ: ಶಾಸಕ ಶಿವರಾಮ ಹೆಬ್ಬಾರ

| Published : Jan 15 2025, 12:46 AM IST

ಅರಣ್ಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲಿ: ಶಾಸಕ ಶಿವರಾಮ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಲೂಟಿಗಾರರನ್ನು ಮುಲಾಜಿಲ್ಲದೇ ಹಿಡಿದು, ಕಾನೂನು ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಹಿಂದು ಮುಂದು ನೋಡಬಾರದು.

ಯಲ್ಲಾಪುರ: ಅರಣ್ಯ ಇಲಾಖೆಯ ಅಧಿಕಾರಿಗಳು ಅಧಿಕಾರ ದರ್ಪ ತೊರೆದು ರೈತರು, ಜನಸಾಮಾನ್ಯರ ಜತೆ ವಿಶ್ವಾಸ, ಸ್ನೇಹದಿಂದ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಉದ್ದೇಶಿತ ಅರಣ್ಯ ಸಂರಕ್ಷಣೆ ಸಾಧ್ಯವಾದೀತು. ಇದು ತೆರೆದ ಖಜಾನೆಯಿದ್ದಂತೆ. ಭಯದಿಂದ ಯಾವ ರಕ್ಷಣೆಯೂ ಸಾಧ್ಯವಾಗದು. ಆದರೆ, ಪ್ರೀತಿಯಿಂದ ಎಲ್ಲವನ್ನೂ ಸಾಧಿಸಬಹುದು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಜ. ೧೩ರಂದು ಅರಣ್ಯ ಇಲಾಖೆಯ ಸಭಾಭವನದಲ್ಲಿ ೨೦೨೫ನೇ ಸಾಲಿನ ದಿನಚರಿ ಲೋಕಾರ್ಪಣೆಗೊಳಿಸಿ, ಮಾತನಾಡಿದರು.

ಜಿಲ್ಲೆಯ ಜನ ರಾಜ್ಯದಲ್ಲಿ ಅತಿಹೆಚ್ಚು ಅರಣ್ಯ ಸಂಪತ್ತನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಇಲ್ಲಿಯ ಪಶ್ಚಿಮಘಟ್ಟಕ್ಕೆ ಅತ್ಯಂತ ಮಹತ್ವವಿದೆ. ಅರಣ್ಯ ಲೂಟಿಗಾರರನ್ನು ಮುಲಾಜಿಲ್ಲದೇ ಹಿಡಿದು, ಕಾನೂನು ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಹಿಂದು ಮುಂದು ನೋಡಬಾರದು. ಯಲ್ಲಾಪುರದಲ್ಲಿ ಅತ್ಯಧಿಕ ಪ್ರಮಾಣದ ಅರಣ್ಯ ಪ್ರದೇಶವಿದೆ. ಇಲ್ಲಿ ಅನೇಕ ಅಧಿಕಾರಿಗಳು ಉತ್ತಮ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನಪರವಾಗಿಯೇ ಕೆಲಸ ಮಾಡಬೇಕು. ಹಾಗಂತ ಕಾನೂನನ್ನು ಮೀರದೇ, ಕಾನೂನು ಚೌಕಟ್ಟಿನೊಳಗೆ ಸಾರ್ವಜನಿಕರಿಗೆ ಕಿರುಕುಳ ನೀಡದೇ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದರು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಅರಣ್ಯ ಅಧಿಕಾರಿಗಳು ಜನರೊಂದಿಗೆ ಸಂಘರ್ಷಕ್ಕಿಳಿಯದೇ ಪರಸ್ಪರ ಸಹಕಾರದಿಂದ ಅರಣ್ಯ ಉಳಿಸುವಲ್ಲಿ ಜನರ ಸಹಭಾಗಿತ್ವ ಪಡೆಯಬೇಕು. ಅದರಲ್ಲೂ ಅರಣ್ಯ ಪ್ರದೇಶದಲ್ಲಿ ಅನೇಕರು ತಲೆತಲಾಂತರದಿಂದ ಅರಣ್ಯವಾಸಿಗಳಾಗಿದ್ದಾರೆ. ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕು ಎಂದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ. ಮಾತನಾಡಿ, ನಮ್ಮ ಕರ್ತವ್ಯದಲ್ಲಿ ನಾವು ಸಮಯಕ್ಕೆ ಮಹತ್ವ ನೀಡಿ, ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ದಿನಚರಿಯ ಮಹತ್ವ ನಮಗಿರಬೇಕು. ದೈಹಿಕ, ಮಾನಸಿಕ ದೃಢತೆ ಇಟ್ಟುಕೊಂಡು ಕುಟುಂಬದ ಸದಸ್ಯರ ಬಗೆಗೂ ಅಷ್ಟೇ ಕಾಳಜಿಯಿಂದ ಸಾರ್ವಜನಿಕರ ಜತೆ ಉತ್ತಮ ಭಾವನೆಯಿಂದ ಕೆಲಸ ಮಾಡಬೇಕು ಎಂದರು.ವೇದಿಕೆಯಲ್ಲಿ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹಿಮವತಿ ಭಟ್ಟ, ರವಿ ಹುಲಕೋಟಿ, ಸಂಗಮೇಶ ಪ್ರಭಾಕರ, ವೀರೇಶ ಕಬ್ಬಿನ್, ಉಪವಲಯಾರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಮಂಜುನಾಥ, ವಲಯಾರಣ್ಯಾಧಿಕಾರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋಚಳ್ಳಿ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಉಪಸ್ಥಿತರಿದ್ದರು. ಉಪವಲಯಾರಣ್ಯಾಧಿಕಾರಿ ಸಂಜೀವಕುಮಾರ ಸ್ವಾಗತಿಸಿದರು. ಶ್ರೀಶೈಲಾ ನಿರ್ವಹಿಸಿ, ವಂದಿಸಿದರು.