ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಕೆಲಸಕ್ಕೆ ಅರಣ್ಯ ಸಿಬ್ಬಂದಿ ಹಿಂದೇಟು

| Published : Nov 30 2024, 12:45 AM IST

ಸಾರಾಂಶ

ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌ ನಡೆದ ಬಳಿಕ ಕಾರ್ಕಳ, ಹೆಬ್ರಿ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಭಯದ ವಾತಾವರಣವಿದೆ. ಅದರಲ್ಲೂ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌ ನಡೆದ ಬಳಿಕ ಕಾರ್ಕಳ, ಹೆಬ್ರಿ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಭಯದ ವಾತಾವರಣವಿದೆ. ಅದರಲ್ಲೂ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ.

ಕಾರ್ಕಳ ತಾಲೂಕಿನ ಈದು, ನೂರಲ್ಬೆಟ್ಟು, ಮಾಳ, ಕೆರುವಾಶೆ, ಶಿರ್ಲಾಲು, ಅಂಡಾರು, ಹೆಬ್ರಿ ತಾಲೂಕಿನ ಮುನಿಯಾಲು, ಮುಟ್ಲುಪಾಡಿ, ಕಬ್ಬಿನಾಲೆ, ನಾಡ್ಪಾಲು, ಕೂಡ್ಲು, ಸೋಮೇಶ್ವರದಲ್ಲಿರುವ ಸುಮಾರು ನೂರಕ್ಕೂ ಹೆಚ್ಚು ಅರಣ್ಯ ವೀಕ್ಷಕರು, ಅರಣ್ಯಾಧಿಕಾರಿಗಳು ಕಾಡಿನತ್ತ ಸಾಗಲು ಭಯಪಡುತ್ತಿದ್ದಾರೆ ಎನ್ನಲಾಗಿದೆ.

ಎಎನ್‌ಎಫ್ ಜೊತೆ ಸಾಗಲು ಸೂಚನೆ:

ನಕ್ಸಲ್ ಪೀಡಿತ ಪ್ರದೇಶಗಳ ವ್ಯಾಪ್ತಿಯ ಅರಣ್ಯ ವೀಕ್ಷಕರಿಗೆ ಪೆಟ್ರೊಲಿಂಗ್ ಮಾಡಲು ಸಾಧ್ಯವಾಗುವಂತೆ ಎಎನ್‌ಎಫ್ ಜೊತೆ ಸಾಗಲು ವನ್ಯಜೀವಿ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸೂಚನೆ ನೀಡಿದ್ದಾರೆ. ಈಗಾಗಲೇ ರಾತ್ರಿ ಗಸ್ತು ತಿರುಗುವಿಕೆಯನ್ನು ನಿಲ್ಲಿಸಲಾಗಿದೆ. ಬೆಳಗಿನ ಹೊತ್ತಿನಲ್ಲಿ ಜಿಪಿಎಸ್ ಟ್ರ್ಯಾಕ್ ಮಾಡಲು ಅರಣ್ಯ ವೀಕ್ಷಕರಿಗೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.

ಪ್ರವಾಸೋದ್ಯಮಕ್ಕೆ ಪೆಟ್ಟು:

ಸರ್ಕಾರಕ್ಕೆ ಆದಾಯದ ಮೂಲವಾಗಿರುವ ಹೆಬ್ರಿಯ ಕೂಡ್ಲು ಜಲಪಾತ, ಗಂಗಾಡಿಕಲ್ಲು, ಅಂಜನೇಯ ಪರ್ವತ, ವಾಲಿಕುಂಜ ಟ್ರೆಕ್ಕಿಂಗ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಭಾಗಗಳಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಕೂಂಬಿಂಗ್ ಬಿರುಸುಗೊಳಿಸಲಾಗಿದೆ. 2023-2024ನೇ ಸಾಲಿನಲ್ಲಿ ಕೂಡ್ಲು ಜಲಪಾತ ವೀಕ್ಷಣೆಗೆ ಬರೋಬ್ಬರಿ 28,000 ಪ್ರವಾಸಿಗರು ಭೇಟಿ ನೀಡಿದ್ದು, ಪಾರ್ಕಿಂಗ್ ಹಾಗೂ ಟಿಕೆಟ್‌ಗಳಿಂದ ಒಟ್ಟು 22 ಲಕ್ಷ ರುಪಾಯಿ ಸಂಗ್ರಹವಾಗಿತ್ತು.

ನೈತಿಕ ಬಲ ತುಂಬಿದ ವಿಭಾಗೀಯ ಅರಣ್ಯಾಧಿಕಾರಿ:

ಕುದುರೆಮುಖ ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ಶಿವರಾಂ ಬಾಬು, ಕಾರ್ಕಳ ತಾಲೂಕಿನ ಈದು, ನೂರಲ್ಬೆಟ್ಟು, ಮಾಳ, ಕೆರುವಾಶೆ, ಶಿರ್ಲಾಲು, ಅಂಡಾರು, ಹೆಬ್ರಿ ತಾಲೂಕಿನ ಮುನಿಯಾಲು, ಮುಟ್ಲುಪಾಡಿ, ಕಬ್ಬಿನಾಲೆ, ನಾಡ್ಪಾಲು, ಕೂಡ್ಲು, ಸೋಮೇಶ್ವರದ ಕಳ್ಳಬೇಟೆ ನಿಯಂತ್ರಣ ಶಿಬಿರಗಳಿಗೆ ಖುದ್ದು ಭೇಟಿ ನೀಡಿ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ವೀಕ್ಷಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುವ ಮೂಲಕ ಅರಣ್ಯಾಧಿಕಾರಿಗಳಿಗೂ ನೈತಿಕ ಬೆಂಬಲ ತುಂಬುತ್ತಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ:

ನಕ್ಸಲ್ ಪೀಡಿತ ಕಾಡಂಚಿನ ಭಾಗಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ಹಾಗೂ ಎಎನ್‌ಎಫ್ ನಿಗಾ ವಹಿಸುತ್ತಿದೆ. ನಕ್ಸಲ್ ವಿಕ್ರಮ್ ಗೌಡ ಎನ್‌ಕೌಂಟರ್‌ ನಡೆದ ಬಳಿಕ ಪೊಲೀಸ್ ಇಲಾಖೆ ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಪರಿಶಿಲನೆ ನಡೆಸುತ್ತಿದೆ. ಈಗಾಗಲೇ ಮಾಳ ಗೇಟ್ ಹಾಗೂ ಕುದುರೆಮುಖ ಬಸ್ರಿಕಲ್ ಗೇಟ್, ತನಿಕಲ್ ಗೇಟ್‌ಗಳಲ್ಲೂ ಪೊಲೀಸ್ ಇಲಾಖೆ ತಪಾಸಣೆ ಚುರುಕು ಪಡೆಯುತ್ತಿದೆ.--------------ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಕೂಡ್ಲು ಜಲಪಾತ, ಗಂಗಾಡಿಕಲ್ಲು, ಆಂಜನೇಯ ಪರ್ವತ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಯುತ್ತಿದ್ದು, ಇದರಿಂದಾಗಿ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ. ಪ್ರವಾಸಿಗರ ಜೀವ ಮುಖ್ಯವಾಗಿದೆ. ಪೊಲೀಸ್ ಇಲಾಖೆ, ಎಎನ್‌ಎಫ್ ಇಲಾಖೆಗಳ ಮಾಹಿತಿ ಆಧರಿಸಿ ನಿರ್ಬಂಧ ತೆರವಿಗ ಕ್ರಮ ಕೈಗೊಳ್ಳಲಾಗುವುದು. ಅರಣ್ಯಾಧಿಕಾರಿಗಳು, ಅರಣ್ಯ ವೀಕ್ಷಕರು ಹೆದರುವ ಅಗತ್ಯವಿಲ್ಲ‌. ಪೊಲೀಸ್ ಹಾಗೂ ಎಎನ್‌ಎಫ್ ನಿಮ್ಮ ಜೊತೆಗಿದೆ‌.

। ಶಿವರಾಂ ಬಾಬು, ವಿಭಾಗೀಯ ಅರಣ್ಯಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ

--------------

ನಕ್ಸಲ್ ಚಟುವಟಿಕೆಗಳ ಬಗ್ಗೆ ಜನರು ಹೆದರುವ ಅಗತ್ಯವಿಲ್ಲ. ಪೊಲೀಸ್ ಇಲಾಖೆ ನಿಮ್ಮ ಜೊತೆಗಿದೆ. ಜನರನ್ನು ಭಯಮುಕ್ತರನ್ನಾಗಿ ಮಾಡುವುದೇ ನಮ್ಮ ಮೂಲೊದ್ದೇಶ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಭಯಪಡುವ ಅಗತ್ಯವಿಲ್ಲ, ಪೊಲೀಸ್ ಇಲಾಖೆಯು ಸಾಥ್ ನೀಡುವ ಕಾರ್ಯ ಮಾಡಲಿದೆ.

। ಮಹೇಶ್ ಟಿ.ಎಂ., ಸಬ್ಇನ್‌ಸ್ಪೆಕ್ಟರ್ ಹೆಬ್ರಿ ಠಾಣೆ

---------------ಆಗುಂಬೆ, ಕೂಡ್ಲು, ಕಬ್ಬಿನಾಲೆ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾಗಿದೆ. ಯಾರೂ ಹೆದರುವ ಅಗತ್ಯವಿಲ್ಲ, ಆದರೆ ಮುಂಜಾಗ್ರತಾ ಕ್ರಮವಾಗಿ ಕೂಂಬಿಂಗ್ ಕಾರ್ಯಾಚರಣೆ ಬಿರುಸುಗೊಳಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಎಎನ್‌ಎಫ್ ಇದೆ.। ಜಿತೇಂದ್ರ ದಯಾಮ, ವರಿಷ್ಠಾಧಿಕಾರಿ ನಕ್ಸಲ್ ನಿಗ್ರಹ ದಳ