ಸಾರಾಂಶ
-ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಅರಣ್ಯ
-------ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ತಾಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಅರಣ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿವೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದು ಸರ್ಕಾರವು ಇದನ್ನು ತಕ್ಷಣ ಬಗೆರಿಹರಿಸಿಕೊಡಬೇಕು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಅರ್ಪಿಸಿದರು.ಅರಣ್ಯ ಸಚಿವ ಈಶ್ವರ ಖಂಡ್ರೆ ತಾಲೂಕಿಗೆ ಭೇಟಿ ನೀಡಿದ್ದ ವೇಳೆ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್ ನಾಗೇಶ್ ಹಾಗೂ ಸದಸ್ಯರು ಮನವಿ ಅರ್ಪಿಸಿದರು. ತಾಲೂಕಿನಲ್ಲಿ ಕಳೆದ 2 ವರ್ಷದಿಂದ ಕಾಡು ಪ್ರಾಣಿಗಳ ಹಾವಳಿ ಅತಿಯಾಗಿದೆ. ಆನೆ ದಾಳಿಯಿಂದ ಸೀತೂರಿನಲ್ಲಿ ರೈತ ಉಮೇಶ್ ಎಂಬುವರನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಭದ್ರಾ ಹುಲಿ ಅಭಯಾರಣ್ಯಕ್ಕೆ ತಾಲೂಕಿನ ಅರಣ್ಯಕ್ಕೆ ತಾಗಿಕೊಂಡಿದೆ. ಕಾಡಾನೆ ಹಾಗೂ ಕಾಡು ಕೋಣಗಳ ಹಾವಳಿ ತಪ್ಪಿಸಲು ರೇಲ್ವೆ ಹಳಿಗಳ ಶಾಶ್ವತ ಬೇಲಿ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
ಭದ್ರಾ ಹಿನ್ನೀರಿನಲ್ಲಿ ತಾಲೂಕಿನ ಹಲವಾರು ರೈತರು ಮನೆ, ಜಮೀನು ಕಳೆದುಕೊಂಡಿದ್ದಾರೆ. ಇಂದಿಗೂ ಅವರಿಗೆ ಪರ್ಯಾಯ ನೀಡಿರುವ ಜಮೀನಿನ ಮ್ಯುಟೇಷನ್, ಪಕ್ಕಾ ಪೋಡಿ ಆಗಿಲ್ಲ. ಅಲ್ಲದೆ, ಆ ಜಮೀನು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ರೈತರು ಸಾಗುವಳಿ ಮಾಡಿಕೊಂಡ ಭೂಮಿ ಸೆಕ್ಷನ್ 4ರಲ್ಲಿ ಸೇರಿಕೊಂಡಿದೆ. ಬಾಳೆ ಗ್ರಾ.ಪಂ ಯ ಹೆನ್ನಂಗಿ, ಬೆಳ್ಳಂಗಿಯಲ್ಲಿ 1000 ಎಕ್ರೆ, ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ 221 ಎಕ್ರೆ ಪ್ರದೇಶವು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದೆ. ಚಿನ್ನಕೊಡಿಗೆ, ಲಿಂಗಾಪುರ, ಬೈರಾಪುರದಲ್ಲೂ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂಮಿ ವರ್ಗಾವಣೆಗೊಂಡಿದೆ. ಆದರೆ, ಈ ಎಲ್ಲಾ ಭೂಮಿಯು ಅರಣ್ಯ ಇಲಾಖೆ ತನ್ನ ಭೂಮಿ ಎಂದು ಹೇಳುತ್ತಿದೆ. ಇದನ್ನು ಅರಣ್ಯ ಸಚಿವರು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.ರೈತರು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕು. ಸೆಕ್ಷನ್ -4, ಡೀಮ್ಸ್ ಮತ್ತು ಸೊಪ್ಪಿನ ಬೆಟ್ಟ ಸಮಸ್ಯೆಗಳಿಗೆ ವಿಶೇಷ ಕಾಯ್ದೆ ತಂದು ರೈತರಿಗೆ ಹಕ್ಕು ಪತ್ರ ನೀಡಬೇಕು. ಈಗಾಗಲೇ ಸೆಕ್ಷನ್ -4 ಆಗಿರುವ ಭೂಮಿಯನ್ನು ಸೆಕ್ಷನ್ 17 ಮಾಡಬಾರದು. ಪಾರಂಪಾರಿಕ ಅರಣ್ಯ ಹಕ್ಕು ಕಾಯ್ದೆ ಅಡಿ 50,53,57,94 ಸಿ,94 ಸಿಸಿ ಅಡಿಯಲ್ಲಿ ರೈತರು ಸಲ್ಲಿಸಿದ ಅರ್ಜಿಗಳಿಗೆ ಸ್ಪಂದಿಸಿ 6 ತಿಂಗಳ ಒಳಗೆ ಹಕ್ಕು ಪತ್ರ ನೀಡಬೇಕು. ಕಸ್ತೂರಿ ರಂಗನ್ ವರದಿ ಪುನರ್ ಪರಿಶೀಲನೆ ನಡೆಸಬೇಕು. ತಳ ಮಟ್ಟದ ಅಧ್ಯಯನ ಮತ್ತು ಸಂವಾದ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಲೆನಾಡು ರೈತರ ಹಿತ ರಕ್ಷಣಾ ಸಮಿತಿ ಪದಾಧಿಕಾರಿಗಳಾದ ಸಾರ್ಯ ದೇವಂತ್, ಸಿ.ವೈ.ಶ್ರೀಕಾಂತ್, ಮುತ್ತಿನಕೊಪ್ಪ ಮನೋಹರ್ ಮತ್ತಿತರರು ಇದ್ದರು.