ಕಾಡ್ಗಿಚ್ಚಿನಿಂದಾಗಿ ಓಡಲಾರದ ಸಣ್ಣ ಪ್ರಾಣಿಗಳು, ಹಕ್ಕಿಗಳು ಮತ್ತು ಅವುಗಳ ಮೊಟ್ಟೆಗಳು ಬೆಂಕಿಯಲ್ಲಿ ಬೆಂದು ಹೋಗುತ್ತವೆ , ಕಾಡ್ಗಿಚ್ಚಿನಿಂದ ಹರಡುವ ಹೊಗೆ ಹತ್ತಿರದ ಹಳ್ಳಿಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಕಾಡಿನಲ್ಲಿರುವ ಅಮೂಲ್ಯವಾದ ಔಷಧೀಯ ಸಸ್ಯಗಳು ಮತ್ತು ಶ್ರೀಗಂಧದಂತಹ ಮರಗಳು ಸುಟ್ಟು ಬೂದಿಯಾಗುತ್ತವೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ನಮ್ಮ ಉಸಿರಿಗೂ ಕಾಡಿನ ಮರಗಳೇ ಕಾರಣ. ಕಾಡನ್ನು ಸುಡುವುದು ಎಂದರೆ ನಮ್ಮ ಉಸಿರಾಟದ ಮೂಲವನ್ನೇ ನಾವೇ ಕೈಯಾರೆ ಕತ್ತರಿಸಿಕೊಂಡಂತೆ ಎಂದು ಉಪ ವಲಯಾಧಿಕಾರಿ ನಾಗೇಶ್ ಹೇಳಿದರು.ತಾಲೂಕಿನ ಕಳವಂಚಿ ವೃತ್ತದಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಣೆ ಇಲಾಖೆ ವತಿಯಿಂದ ಅರಣ್ಯ ರಕ್ಷಣೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಡ್ಗಿಚ್ಚು ತಡೆಗಟ್ಟುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ. ಕಾಡ್ಗಿಚ್ಚಿನಿಂದ ಕೇವಲ ಮರಗಳು ಮಾತ್ರವಲ್ಲದೆ, ಇಡೀ ಪರಿಸರ ವ್ಯವಸ್ಥೆಯೇ ನಾಶವಾಗುತ್ತದೆ.ಪ್ರಾಣಿಪಕ್ಷಗಳು ಅಗ್ನಿಗಾಹುತಿ

ಬೆಂಕಿಯಿಂದಾಗಿ ಓಡಲಾರದ ಸಣ್ಣ ಪ್ರಾಣಿಗಳು, ಹಕ್ಕಿಗಳು ಮತ್ತು ಅವುಗಳ ಮೊಟ್ಟೆಗಳು ಬೆಂಕಿಯಲ್ಲಿ ಬೆಂದು ಹೋಗುತ್ತವೆ , ಕಾಡ್ಗಿಚ್ಚಿನಿಂದ ಹರಡುವ ಹೊಗೆ ಹತ್ತಿರದ ಹಳ್ಳಿಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಕಾಡಿನಲ್ಲಿರುವ ಅಮೂಲ್ಯವಾದ ಔಷಧೀಯ ಸಸ್ಯಗಳು ಮತ್ತು ಶ್ರೀಗಂಧದಂತಹ ಮರಗಳು ಸುಟ್ಟು ಬೂದಿಯಾಗುತ್ತವೆ ಆದರಿಂದ ಕಾಡಿಗೆ ಬೆಂಕಿ ಹಚ್ಚುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. ಕಾಡಿನಲ್ಲಿ ಎಲ್ಲಾದರೂ ಸಣ್ಣ ಕಿಡಿ ಅಥವಾ ಹೊಗೆ ಕಂಡರೆ ತಕ್ಷಣವೇ ಅರಣ್ಯ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1926ಕ್ಕೆ ಕರೆ ಅಥವಾ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ಪ್ರತಿಜ್ಞಾವಿಧಿಯನ್ನು ಬೋಧನೆ

ವಿದ್ಯಾರ್ಥಿಗಳಿಗೆ ನಾನು ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನು ನೆಡುತ್ತೇನೆ ಮತ್ತು ಅದನ್ನು ಮರವಾಗುವವರೆಗೆ ಪೋಷಿಸುತ್ತೇನೆ. ಕಾಡನ್ನು ಪ್ರೀತಿಸುತ್ತೇನೆ, ಪರಿಸರವನ್ನು ಉಳಿಸುತ್ತೇನೆ ಎಂದು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮೈಸೂರಿನ ರಂಗಭೂಮಿ ಕಲಾವಿದರಾದ ಅಸ್ಮಾ ಭಾನು ಮತ್ತು ತಂಡದವರು ಬೀದಿ ನಾಟಕದ ಮೂಲಕ ಕಾಡ್ಗಿಚ್ಚಿನ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ಎಂ.ರವೀಂದ್ರ ನಾಥ್ , ಶಿಕ್ಷಕರಾದ ಕೃಷ್ಣಾರೆಡ್ಡಿ,ಅರಣ್ಯ ರಕ್ಷಕರಾದ ದರ್ಶನ್ ,ಮುರಳಿ ಹಾಗೂ ಸಿಬ್ಬಂದಿಗಳಾದ ಸುರೇಶ್ , ನಾಗರಾಜ ಹಾಜರಿದ್ದರು.