ಅನಾದಿ ಕಾಲದಿಂದಲೂ ನೀರು, ನದಿ ಸಂಪತ್ತನ್ನು ಆದಿವಾಸಿಗಳು ಪೋಷಿಸಿಕೊಂಡು ಬಂದಿದ್ದಾರೆ. ವಿಶಿಷ್ಟ ಸಂಸ್ಕೃತಿ, ಭಾಷೆ, ಸಂಪ್ರದಾಯಗಳ ಮೂಲಕ ಆದಿವಾಸಿಗಳು ಪ್ರಕೃತಿಯೊಂದಿಗೆ ಬದುಕುತ್ತ ಸಮಾಜದ ಆಸ್ತಿಯಾಗಿದ್ದಾರೆ. ಆದರೆ ಭೂಮಿ ಹಕ್ಕು ಇತ್ಯಾದಿ ಅನುಭವಿಸಲಾಗದೇ ಪರದಾಡುತ್ತಿದ್ದಾರೆ.

ಯಲ್ಲಾಪುರ: ಆದಿವಾಸಿಗಳಿಗೆ ವನಾಧಿಕಾರ ಇನ್ನೂ ಸಿಕ್ಕಿಲ್ಲ. ವಿವಿಧ ಯೋಜನೆಯಿಂದ ಆದಿವಾಸಿಗಳು ಬೀದಿಗೆ ಬಿದ್ದಿದ್ದಾರೆ ಎಂದು ತ್ರಿಪುರಾದ ಮಾಜಿ ಸಚಿವ, ಆದಿವಾಸಿ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ಜಿತೇಂದ್ರ ಚೌಧರಿ ಹೇಳಿದರು.

ಪಟ್ಟಣದ ಕಾರ್ಮಿಕ ಭವನದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಯೋಜಿಸಿದ್ದ 4ನೇ ಆದಿವಾಸಿ ರಾಜ್ಯ ಸಮ್ಮೇಳನವನ್ನು ಡಮಾಮಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅನಾದಿ ಕಾಲದಿಂದಲೂ ನೀರು, ನದಿ ಸಂಪತ್ತನ್ನು ಆದಿವಾಸಿಗಳು ಪೋಷಿಸಿಕೊಂಡು ಬಂದಿದ್ದಾರೆ. ವಿಶಿಷ್ಟ ಸಂಸ್ಕೃತಿ, ಭಾಷೆ, ಸಂಪ್ರದಾಯಗಳ ಮೂಲಕ ಆದಿವಾಸಿಗಳು ಪ್ರಕೃತಿಯೊಂದಿಗೆ ಬದುಕುತ್ತ ಸಮಾಜದ ಆಸ್ತಿಯಾಗಿದ್ದಾರೆ. ಆದರೆ ಭೂಮಿ ಹಕ್ಕು ಇತ್ಯಾದಿ ಅನುಭವಿಸಲಾಗದೇ ಪರದಾಡುತ್ತಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಸಾಹಿತಿ ಬೀರಣ್ಣ ನಾಯಕ ಮೊಗಟಾ ಪ್ರಾಧ್ಯಾಪಕ ನಾಗ ಎಚ್. ಹುಬ್ಳಿ, ಪ್ರಮುಖರಾದ ಯಶವಂತ, ಮಲ್ಲಿಕಾರ್ಜುನ ಮಾನ್ಪಡೆ, ಜೋನ್ ಬಿಳ್ಕಿಕರ, ಹನುಮಂತ ಗೌಡ, ಸುಭಾಸ ಗಾವುಡ, ಇಬ್ರಾಹಿಂ, ನಾರಾಯಣ ಗೌಡ, ಕುರಿಯ ಕೊರಗ, ಯಮುನಾ ಗಾಂವ್ಕರ, ನುಗ್ಗಿ ಗೌಡ, ಬಜ್ಜು ಪಿಂಗಳೆ, ಮಾಕು‌ ಕೋಕರೆ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು. ಅಖಿಲ ಭಾರತ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಎಸ್.ವೈ. ಗುರುಶಾಂತ ಅಧ್ಯಕ್ಷತೆ ವಹಿಸಿದ್ದರು. ಯೋಗೇಶ ಜಪ್ಪಿನಮೊಗರು ಅಗಲಿದ ಬುಡಕಟ್ಟು ಸಮುದಾಯದವರ ನೆನಪು ಮಾಡಿಕೊಂಡರು.

ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಹ ಸಂಚಾಲಕಿ ಲಕ್ಷ್ಮೀ ಸಿದ್ದಿ ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಸ್ವಾಗತಿಸಿ, ಪ್ರಸ್ತಾಪಿಸಿದರು. ತುಳಸಿ ಪಾಟೀಲ ವಂದಿಸಿದರು.