ಅರಣ್ಯ, ವನ್ಯಜೀವಿ ಸಂರಕ್ಷಣೆಯ ಹಿಂದೆ ಹುತಾತ್ಮ ಅರಣ್ಯ ಸಿಬ್ಬಂದಿಯ ತ್ಯಾಗ ಅಪಾರವಾಗಿದ್ದು, ಅವರ ಸ್ಮರಣೆಯನ್ನು ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಜಿ. ಪ್ರಭಾವತಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅರಣ್ಯ, ವನ್ಯಜೀವಿ ಸಂರಕ್ಷಣೆಯ ಹಿಂದೆ ಹುತಾತ್ಮ ಅರಣ್ಯ ಸಿಬ್ಬಂದಿಯ ತ್ಯಾಗ ಅಪಾರವಾಗಿದ್ದು, ಅವರ ಸ್ಮರಣೆಯನ್ನು ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಜಿ. ಪ್ರಭಾವತಿ ಹೇಳಿದರು.

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಅರಣ್ಯ ಹುತಾತ್ಮರ ಸ್ಮಾರಕದ ಬಳಿ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹುತಾತ್ಮರಿಗೆ ಗೌರವ ಸೂಚಿಸಿ ನಂತರ ಮಾತನಾಡಿದರು.

ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವೆ ಮತ್ತು ತ್ಯಾಗವನ್ನು ಗೌರವಿಸುವುದರ ಜತೆಗೆ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಸಂದರ್ಭದಲ್ಲಿ ಕಾಡುಗಳ್ಳರು, ಅಕ್ರಮ ಬೇಟೆಗಾರರು ಹಾಗೂ ವಿವಿಧ ಅನಾಹುತಗಳ ನಡುವೆ ಅರಣ್ಯ ಸಿಬ್ಬಂದಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ವೀರ ಸಿಬ್ಬಂದಿಯ ತ್ಯಾಗ ಮತ್ತು ಬದ್ಧತೆಯನ್ನು ಸಮಾಜ ಸದಾ ಸ್ಮರಿಸಬೇಕು ಎಂದರು.

೧೭೩೦ರಲ್ಲಿ ರಾಜಸ್ಥಾನದ ಖೇಜರ್ಲಿ ಗ್ರಾಮದಲ್ಲಿ ಖೇಜ್ರಿ ಮರಗಳ ಸಂರಕ್ಷಣೆಗಾಗಿ ಅಮೃತಾ ದೇವಿ ಬಿಷ್ಣೋಯ್ ಸೇರಿದಂತೆ ೩೬೦ಕ್ಕೂ ಹೆಚ್ಚು ಬಿಷ್ಣೋಯ್ ಸಮುದಾಯದವರು ಮರಗಳನ್ನು ಅಪ್ಪಿಕೊಂಡು ಪ್ರಾಣತ್ಯಾಗ ಮಾಡಿದ್ದರು. ಅವರ ಪರಿಸರ ಪ್ರೇಮ ಮತ್ತು ತ್ಯಾಗದ ಸ್ಮರಣಾರ್ಥ ಸೆಪ್ಟೆಂಬರ್ ೧೧ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಹೆಮ್ಮೆಯಾಗಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಅಪಾರ ಜೀವವೈವಿಧ್ಯವನ್ನು ಹೊಂದಿದೆ. ಹುಲಿ, ಆನೆ ಸೇರಿದಂತೆ ಹಲವು ವನ್ಯಜೀವಿಗಳಿಗೆ ಆಶ್ರಯವಾಗಿರುವ ಬಂಡೀಪುರದ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಬುಡಕಟ್ಟು ಸಮುದಾಯಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಕಾಡುಗಳ್ಳರ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಾಣತ್ಯಾಗ ಮಾಡಿದ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಅವರಂತಹವರ ಸೇವೆ ಮತ್ತು ತ್ಯಾಗವನ್ನು ಸ್ಮರಿಸಬೇಕು. ಸೋಲಿಗ ಹಾಗೂ ಜೇನುಕುರುಬ ಸೇರಿದಂತೆ ಸ್ಥಳೀಯ ಸಮುದಾಯಗಳು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾಡಿನ ಸಂರಕ್ಷಣೆಗೆ ನೀಡುತ್ತಿರುವ ಸಹಕಾರ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಪ್ರಕೃತಿ ಸಂರಕ್ಷಣೆಗಾಗಿ ಎಲ್ಲರೂ ಕಾಡಿಗೆ ತೆರಳಿ ಕೆಲಸ ಮಾಡಬೇಕಿಲ್ಲ. ತಾವು ಇರುವ ಸ್ಥಳದಲ್ಲಿಯೇ ಪರಿಸರಕ್ಕೆ ಪೂರಕವಾದ ಸಣ್ಣ-ಪುಟ್ಟ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಹುದು. ಇಂತಹ ಸಣ್ಣ ಪ್ರಯತ್ನಗಳೇ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪರಿಸರ ಸಂರಕ್ಷಣಾ ಕಾರ್ಯಗಳಿಗೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಅರಣ್ಯ ಕಾಯ್ದೆ ಇವೆ, ಕಾಡುಗಳ್ಳರ ವಿರುದ್ದ ಕಾನೂನಾತ್ಮಕ ಹೋರಾಟ ಮಾಡಬಹುದು ಎಂದರು.

ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು. ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಪ್ರಾಸ್ತಾವಿಸಿದರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಲಕ್ಷ್ಮಿಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಸರು ಓದಿದರು.

ಜಿಪಂ. ಉಪ ಕಾರ್ಯದರ್ಶಿ ಶೃತಿ , ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರಿ, ಪವನ್ ಕುಮಾರ್ ಇತರರು ಹಾಜರಿದ್ದರು,